ಹೆಚ್ಚು ಓದು-ಬರಹದಿಂದ ಜ್ಞಾನಾರ್ಜನೆ ವೃದ್ಧಿ
ಚಾಮರಾಜನಗರ

ಹೆಚ್ಚು ಓದು-ಬರಹದಿಂದ ಜ್ಞಾನಾರ್ಜನೆ ವೃದ್ಧಿ

April 24, 2018

ಚಾಮರಾಜನಗರ: ಹೆಚ್ಚು ಓದು-ಬರಹದಿಂದ ಜ್ಞಾನಾರ್ಜನೆ ವೃದ್ಧಿಸುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವೆ ಡಿ.ಭಾರತಿ ಹೇಳಿದರು.

ತಾಲೂಕಿನ ಬೇಡರಪುರ ಸಮೀಪದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ, ರಂಗವಾಹಿನಿ ಸಂಸ್ಥೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ವಿಶ್ವಪುಸ್ತಕ ದಿನಾಚರಣೆ ಅಂಗವಾಗಿ ಓದು ಮತ್ತು ಬರಹ ಕುರಿತು ಸಂವಾದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವಪುಸ್ತಕ ದಿನಾಚರಣೆ ಬಹಳ ವಿಶೇಷ ದಿನಾಚರಣೆಯಾಗಿದೆ. ಇಂತಹ ದಿನಾಚರಣೆ ಹೆಚ್ಚು ಪ್ರಚಲಿತವಾಗಿಲ್ಲದಿರುವುದು ದುರಂತ. ಪ್ರೇಮಿಗಳ ದಿನಾಚರಣೆ ಪ್ರಚಲಿತವಾಗಿದ್ದು, ಅನೇಕ ಪರ-ವಿರೋಧಗಳ ನಡುವೆ ನಡೆಯುತ್ತದೆ. ಆದರೆ ವಿಶ್ವಪುಸ್ತಕ ದಿನಾಚರಣೆಗೆ ಯಾವುದೇ ಅಡ್ಡಿ ಆತಂಕವಿಲ್ಲ. ಆದರೂ ಸಹ ವಿಶ್ವಪುಸ್ತಕ ದಿನಾಚರಣೆ ಪ್ರಚಲಿತವಾಗಿಲ್ಲ ಎಂದರು.
ಏ.14ರಂದು ಅಂಬೇಡ್ಕರ್ ಜಯಂತಿ, 23ರಂದು ವಿಶ್ವ ಪುಸ್ತಕ ದಿನಾಚರಣೆ. ಲಂಡನ್ ಗ್ರಂಥಾಲಯದಲ್ಲಿ ಹೆಚ್ಚು ಪುಸ್ತಕ ತೆಗೆದುಕೊಂಡು ಓದಿದ್ದು ಡಾ.ಬಿ.ಆರ್.ಅಂಬೇಡ್ಕರ್ ಬಳಿ ಅಗಾಧ ಪುಸ್ತಕ ರಾಶಿಯಿತ್ತು. ಅಂಬೇಡ್ಕರ್ ದೇಶ-ವಿದೇಶಗಳಲ್ಲಿ ಹೆಚ್ಚು ಓದು-ಬರಹ ಕಲಿತಿದ್ದರಿಂದಲೇ ವಿಶ್ವಜ್ಞಾನಿಯಾಗಲು ಸಾಧ್ಯವಾಯಿತು. ಅಲ್ಲದೇ ಅನೇಕ ಪದವಿ ಪಡೆಯಲು ನೆರವಾಯಿತು. ಶೇ.90ರಷ್ಟು ಯುವಕರು ಮೊಬೈಲ್ ಇಂಟರ್‍ನೆಟ್‍ನಲ್ಲಿ ಮುಳುಗಿದ್ದಾರೆ. ಇದರಿಂದ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಆದ್ದರಿಂದ ಕಾಲೇಜು ವಿದ್ಯಾರ್ಥಿಗಳು, ಯುವ ಜನಾಂಗ ಹೆಚ್ಚು ಓದು-ಬರಹ ರೂಢಿಸಿಕೊಂಡು ಒಳ್ಳೆಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿರಿಯ ವಿದ್ವಾಂಸ ಪ್ರೊ. ಕೃಷ್ಣಮೂರ್ತಿಹನೂರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿ, ಇಡೀ ಜಗತ್ತಿಗೆ ಹಂಚುವ ಜ್ಞಾನಾರ್ಜನೆ ಭಾರತದಲ್ಲಿತ್ತು. ಆದರೆ ಆ ಜ್ಞಾನ ಸರಿಯಾಗಿ ಹಂಚಿಕೆಯಾಗಿಲ್ಲ. ಜ್ಞಾನಾರ್ಜನೆ ಅಗ್ರಹಾರ ಬೀದಿಯಲ್ಲಿರುವ ಮನೆಗಳಲ್ಲಿ ಉಳಿದು ಬಿಟ್ಟತು. ಅದು ಗೋಡೆ ದಾಟಿ ಬರಲಿಲ್ಲ. ಜ್ಞಾನಾರ್ಜನೆ ಮಾರ್ಗ ಬಹಳ ಕಠಿಣವಾದದ್ದು, ವಿದ್ಯಾರ್ಥಿಗಳು ಓದು-ಬರಹ ಮೈಗೂಡಿಸಿಕೊಂಡು ವಿಶ್ವ ಮಾನವರಾಗಬೇಕು ಎಂದರು.

ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಆಶಯ ನುಡಿಗಳನ್ನಾಡಿದರು. ಡಾ. ರಾಜ್‍ಕುಮಾರ್ ಅವರು 4ನೇ ತರಗತಿ ಓದಿದ್ದರೂ ಸಹ ಅವರ ಭಾಷೆ, ನಟನಾ ಪ್ರೌಢಿಮೆಯನ್ನು ಜಗತ್ತಿನ ಯಾವ ಕಲಾವಿದರಲ್ಲೂ ಕಾಣಲು ಸಾಧ್ಯವಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಶ್ರೀಮಹದೇಶ್ವರ, ಮಂಟೇಸ್ವಾಮಿ, ನಿಜಗುಣಶಿವಯೋಗಿಗಳು, ಮುಪ್ಪಿನ ಷಡಕ್ಷರಿ, ಯಡಿಯೂರು ಸಿದ್ದಲಿಂಗೇಶ್ವರ, ಸಂಚಿಹೊನ್ನಮ್ಮ ಹಾಗೂ ಡಾ.ರಾಜ್‍ಕುಮಾರ್ ಅಂತಹ ಮಹನೀಯರು ಹುಟ್ಟಿರುವ ಜಿಲ್ಲೆ ನಮ್ಮದು. ಇಲ್ಲಿ ಹುಟ್ಟಿರುವ ನಾವೇ ಧನ್ಯರು ಎಂದು ಹೇಳಿದರು.

ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ನಿರ್ದೇಶಕ ಪ್ರೊ.ಶಿವಬಸವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧ್ಯಾಪಕ ಡಾ.ಮಹದೇವಮೂರ್ತಿ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಬಿ.ಬಸವರಾಜು, ಗೌರವ ಕಾರ್ಯದರ್ಶಿ ನಟರಾಜ್‍ಹರದನಹಳ್ಳಿ, ರಂಗವಾಹಿನಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕೆಂಪನಪುರ, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಮಾರಾಟ ಪ್ರತಿನಿಧಿ ಗೋವಿಂದರಾಜು, ಗಾಯಕ ಅರುಣ್‍ಮಾಂಬಳ್ಳಿ, ಡಾ.ಕುಪ್ಪನಹಳ್ಳಿ ಭೈರಪ್ಪ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Translate »