ವಿಜಯೇಂದ್ರರಿಗೆ ಟಿಕೆಟ್ ನಿರಾಕರಣೆ ಖಂಡಿಸಿ ಪ್ರತಿಭಟನೆ
ಚಾಮರಾಜನಗರ

ವಿಜಯೇಂದ್ರರಿಗೆ ಟಿಕೆಟ್ ನಿರಾಕರಣೆ ಖಂಡಿಸಿ ಪ್ರತಿಭಟನೆ

April 24, 2018

ಚಾಮರಾಜನಗರ: ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿಜಯೇಂದ್ರ ಅವರಿಗೆ ಕೊನೆಗಳಿಗೆಯಲ್ಲಿ ಟಿಕೆಟ್ ನೀಡದಿರುವುದನ್ನು ಖಂಡಿಸಿ ನಗರದಲ್ಲಿ ಸೋಮವಾರ ರಾತ್ರಿ ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗ ಮತ್ತು ಅಖಿಲಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಪ್ರತಿಭಟನೆ ನಡೆಸಲಾಯಿತು.

ಅಖಿಲಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಮೂಡ್ಲುಪುರ ನಂದೀಶ್ ಅವರ ನೇತೃತ್ವದಲ್ಲಿ ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿದ ನೂರಾರು ಕಾರ್ಯಕರ್ತರು, ಪ್ರತಿಭಟನೆ ಆರಂಭಿಸಿ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂದು ವಿಜಯೇಂದ್ರ ಅವರು ಕಳೆದ 20 ದಿನಗಳಿಂದ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟಿಸಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸಲು ಸಿದ್ಧತೆಯನ್ನು ಮಾಡಿಕೊಂಡು ನಾಮಪತ್ರ ಸಲ್ಲಿಸಲು ಸಾವಿರಾರು ಕಾರ್ಯಕರ್ತರ ಜೊತೆ ನಂಜನಗೂಡಿಗೆ ತೆರಳಿದ ಸಂದರ್ಭದಲ್ಲಿ ಕೊನೆಗಳಿಗೆಯಲ್ಲಿ ಅವರನ್ನು ನಾಮಪತ್ರ ಸಲ್ಲಿಸದಂತೆ ತಡೆಹಿಡಿಯಲಾಗಿದೆ. ಇದು ಖಂಡನೀಯ ಕೂಡಲೇ ಪಕ್ಷದ ವರಿಷ್ಠರು ವಿಜಯೇಂದ್ರ ಅವರನ್ನೇ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಬೇಕು, ಇಲ್ಲದಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ತಾಪಂ ಉಪಾಧ್ಯಕ್ಷ ದಯಾನಿಧಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕೆ.ಎಸ್.ನಾಗರಾಜಪ್ಪ, ಹಾ.ವಿ.ನಟರಾಜ್, ಕಾವುದವಾಡಿ ಗುರು, ಮಹದೇವಪ್ಪ, ಪ್ರದೀಪ್, ಹರೀಶ್, ಅಶೋಕ್, ಬಸವರಾಜ್, ಪ್ರಕಾಶ್, ನಟೇಶ್, ತೊರಹಳ್ಳಿ ಕುಮಾರ್ ಸೇರಿದಂತೆ ನೂರಾರು ಮುಖಂಡರು ಭಾಗವಹಿಸಿದ್ದರು.

Translate »