ವರ್ಗಾವಣೆ ದಂಧೆಗೆ ಬ್ರೇಕ್ ಹಾಕಲು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ದಿಟ್ಟ ಹೆಜ್ಜೆ: ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೆ ನಿರ್ಧಾರ!
ಮೈಸೂರು

ವರ್ಗಾವಣೆ ದಂಧೆಗೆ ಬ್ರೇಕ್ ಹಾಕಲು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ದಿಟ್ಟ ಹೆಜ್ಜೆ: ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೆ ನಿರ್ಧಾರ!

September 20, 2021

ಬೆಂಗಳೂರು: ಸರ್ಕಾರಿ ನೌಕರರ ವರ್ಗಾವಣೆ ಒಂದು ದಂಧೆಯಾಗಿಬಿಟ್ಟಿದೆ. ಹಣದ ಆಸೆಗೆ ಕೆಲ ಅಧಿಕಾರಿಗಳು ಸಿಬ್ಬಂದಿಗಳಿಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ದಂಧೆಗೆ ಬ್ರೇಕ್ ಹಾಕಲು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮುಂದಾಗಿದ್ದಾರೆ.

ಈ ಕುರಿತು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಅವರು, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಮತ್ತು ಇವುಗಳ ವ್ಯಾಪ್ತಿಗೆ ಬರುವ ನಿಗಮ ಮಂಡಳಿಗಳ ಅಧಿಕಾರಿ-ಸಿಬಂದಿಯನ್ನು ಕೌನ್ಸಿಲಿಂಗ್ ಮೂಲ ಕವೇ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ಬಳಿಕವೂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಾವಣೆಗೆ ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರು, ಈ ಕಠಿಣ ನಿರ್ಧಾರದತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಮುಗಿದ ನಂತರವೂ ಕೂಡ ಸಾಕಷ್ಟು ನೌಕರರು ತಮ್ಮ ಕೆಲಸಗಳನ್ನು ಅರ್ಧದಲ್ಲಿಯೇ ಬಿಟ್ಟು ವರ್ಗಾವಣೆಗಾಗಿ ಕಚೇರಿಗಳಿಂದ ಕಚೇರಿಗೆ ಓಡಾಡುತ್ತಿರುವುದು ಕಂಡು ಬರುತ್ತಿದೆ. ಮಧ್ಯವರ್ತಿಗಳು ಇದರ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಹುದ್ದೆಗಳಲ್ಲಿ ಅರ್ಹತೆ ಇಲ್ಲದಿದ್ದರೂ ಕೆಲವರ ನೇಮಕಾತಿಯಾಗಿದೆ. ಈ ನಿಟ್ಟಿನಲ್ಲಿ ವರ್ಗಾವಣೆ ಮಾರ್ಗಸೂಚಿ ಹಾಗೂ ನಿಯಮಗಳನ್ನು ಜಾರಿಗೆ ತರಲು ಅಗತ್ಯವಿದ್ದರೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ. ಇಲಾಖೆಯ ಎಲ್ಲ ಹಂತದ ಅಧಿಕಾರಿ ಸಿಬಂದಿ ವರ್ಗಾವಣೆ ಕೌನ್ಸಿಲಿಂಗ್ ಮೂಲಕವೇ ಆಗಬೇಕು. ನೌಕರರ ಹಿತದೃಷ್ಟಿಯಿಂದ ಗಂಭೀರ, ಮಾರಣಾಂತಿಕ ಕಾಯಿಲೆ, ನಿವೃತ್ತಿ ಅಂಚಿ ನಲ್ಲಿರುವವರು, ಅಂಗವಿಕಲರು, ವಿಧವೆ, ಪತಿ-ಪತ್ನಿ ಪ್ರಕರಣಗಳು ಸಹಿತ ಕೆಲವು ವಿಶೇಷ ಪ್ರಕರಣಗಳಿಗೆ ಮಾತ್ರ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.

Translate »