ಮೈಸೂರು, ಜು.4(ಆರ್‍ಕೆ)- ದಿನೇ ದಿನೆ ಮೈಸೂರಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆ.ಆರ್. ಆಸ್ಪತ್ರೆ ಯಲ್ಲಿ ಮಧ್ಯಾಹ್ನದ ಹೊರ ರೋಗಿ ವಿಭಾಗದ (OPD) ಸೇವೆಯನ್ನು ಶೀಘ್ರ ಬಂದ್ ಮಾಡುವ ಸಾಧ್ಯತೆ ಇದೆ.
ಆಸ್ಪತ್ರೆಯ ಹೊರ ರೋಗಿ ವಿಭಾಗವು ಪ್ರತೀದಿನ ಬೆಳಗ್ಗೆ 9ರಿಂದ ಮಧ್ಯಾಹ್ನ 1, ಮಧ್ಯಾಹ್ನ 2ರಿಂದ ಸಂಜೆ 4 ಗಂಟೆವರೆಗೆ ತೆರೆದಿರುತ್ತದೆ. ಮೈಸೂರು ನಗರ ಸೇರಿ ದಂತೆ ಜಿಲ್ಲೆಯ ಮೂಲೆ ಮೂಲೆಯಿಂದ ರೋಗಿಗಳು ಬರುವುದರಿಂದ ದಿನಕ್ಕೆ ಸರಾಸರಿ 100 ದಿಂದ 1,500 ಮಂದಿ ಹೊರ ರೋಗಿ ವಿಭಾಗದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಾರೆ. ಆ ಪೈಕಿ ತುರ್ತು ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಅಗತ್ಯವಿರುವವರನ್ನು ಒಳರೋಗಿಯಾಗಿ ದಾಖಲಿಸಿಕೊಳ್ಳಲಾಗುತ್ತದೆ. ಆದರೆ ಒಮ್ಮೆಲೆ ಅಷ್ಟೊಂದು ಸಂಖ್ಯೆಯಲ್ಲಿ ಸಾರ್ವಜನಿಕರು ಬರುತ್ತಿರುವುದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಒಂದು ವೇಳೆ ವೈದ್ಯರು ಅಥವಾ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದರೆ, ಇಡೀ ಕೆ.ಆರ್. ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಬೇಕಾಗುತ್ತದೆ ಎಂದು ಆಸ್ಪತ್ರೆ ಅಧಿ ಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
1050 ಹಾಸಿಗೆ ಸಾಮಥ್ರ್ಯದ ಕೆ.ಆರ್. ಆಸ್ಪತ್ರೆಯಲ್ಲಿರುವ ಮೆಡಿಸಿನ್, ಸರ್ಜರಿ, ಆರ್ಥೋ, ಇಎನ್‍ಟಿ, ಚರ್ಮರೋಗ, ನ್ಯೂರಾಲಜಿ, ನೆಫ್ರಾಲಜಿ, ಮೈಕ್ರೋಬಯಾಲಜಿ, ಆಪ್ತಾಮಾಲಜಿ (ಕಣ್ಣಿನ ಆಸ್ಪತ್ರೆ), ಮಾನಸಿಕ ರೋಗ ವಿಭಾಗ, ಆಪರೇಷನ್ ಥಿಯೇಟರ್‍ಗಳು, ತುರ್ತು ಚಿಕಿತ್ಸಾ ವಾರ್ಡ್, ರೇಡಿಯಾಲಜಿ, ತುರ್ತು ಅಪಘಾತ ಚಿಕಿತ್ಸಾ ವಿಭಾಗ, ಓಪಿಡಿ-ಐಪಿಡಿ ಬ್ಲಾಕ್, ಸರ್ಜಿಕಲ್ ವಿಭಾಗ (ಕಲ್ಲು ಕಟ್ಟಡ), ರಕ್ತ ನಿಧಿ, ಔಷಧಿ ವಿತರಣಾ ಕೌಂಟರ್, ಎಕ್ಸ್-ರೇ, ಸ್ಕ್ಯಾನಿಂಗ್, ಪೊಲೀಸ್ ಔಟ್‍ಪೋಸ್ಟ್, ಅಡುಗೆ ಮನೆ, ಸ್ಪೆಷಲ್ ವಾರ್ಡ್‍ಗಳೂ ಸೇರಿದಂತೆ ಕೆ.ಆರ್.ಆಸ್ಪತ್ರೆ ಆವರಣದ ಎಲ್ಲಾ ವಿಭಾಗಗಳಲ್ಲಿ ರೋಗಿ ಗಳು ಮತ್ತು ಅವರ ಅಟೆಂಡರ್‍ಗಳು ಸೇರಿದಂತೆ ಪ್ರತೀ ದಿನ ಸರಿ ಸುಮಾರು 2 ಸಾವಿರಕ್ಕೂ ಹೆಚ್ಚಾಗಿ ಓಡಾಡು ತ್ತಾರೆ. ಅಲ್ಲಿ ಜನಸಂದಣಿ ನಿಯಂತ್ರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟವಾಗಿ ರುವುದರಿಂದ ಮಧ್ಯಾಹ್ನ 2ರಿಂದ 4 ಗಂಟೆ ಅವಧಿಯ ಓಪಿಡಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡುವುದು ಸೂಕ್ತ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಇಂದು ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.
ಅದಕ್ಕೂ ಮೊದಲು ಸಾರ್ವಜನಿಕರಿಗೆ ಈ ಬಗ್ಗೆ ಪ್ರಕಟಣೆ ಮೂಲಕ ತಿಳುವಳಿಕೆ ನೀಡಬೇಕಾಗಿದೆ. ತುರ್ತು ಪರಿಸ್ಥಿತಿ ಅಥವಾ ಗಂಭೀರ ಸಮಸ್ಯೆ ಹೊರತುಪಡಿಸಿ ಸಾಮಾನ್ಯ ರೋಗ ಲಕ್ಷಣಗಳಿದ್ದರೆ ಸಮೀಪದ ಪ್ರಾಥಮಿಕ ಅಥವಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಮಾಡಿಸಿ ಕೊಳ್ಳಿ ಎಂದು ತಿಳಿಸಿದ ನಂತರ ಕೆ.ಆರ್. ಆಸ್ಪತ್ರೆ ಓಪಿಡಿ ಯನ್ನು ಬಂದ್ ಮಾಡಬೇಕು, ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುತ್ತೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.