ನದಿಗೆ ಅಧಿಕ ನೀರು ಬಿಡುಗಡೆ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ
ಶ್ರೀರಂಗಪಟ್ಟಣ, ಜು.೯(ವಿನಯ್ಕಾರೇಕುರ)-ಕೊಡಗು ಮತ್ತು ಹಾಸನ ಜಿಲ್ಲೆಯಲ್ಲಿ ಇಂದೂ ಕೂಡ ಭಾರೀ ಮಳೆ ಯಾಗಿದ್ದು, ಇದರ ಪರಿಣಾಮವಾಗಿ ಕೆಆರ್ಎಸ್ ಜಲಾಶಯದ ನೀರಿನ ಒಳ ಹರಿವು ಹೆಚ್ಚಾಗಿದೆ. ಇಂದು ೩೩,೧೬೮ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ನೀರಿನ ಮಟ್ಟ ೧೨೨.೧೭ ಅಡಿಗೆ ಏರಿಕೆಯಾಗಿದೆ. ಗರಿಷ್ಠ ಮಟ್ಟ ೧೨೪.೮೦ ಅಡಿ ತುಂಬಲು ಕೇವಲ ೨ ಅಡಿ ಮಾತ್ರ ಬಾಕಿ ಇದೆ.
ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಜಲಾ ಶಯದಿಂದ ನದಿಗೆ ಹೆಚ್ಚಿನ ನೀರನ್ನು ಹರಿಬಿಡ ಲಾಗುತ್ತಿದ್ದು, ಇಂದು ಬೆಳಗ್ಗೆಯಿಂದ ೧೦ ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿತ್ತು. ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ಸಂಜೆ ವೇಳೆಗೆ ಹೊರ ಹರಿವಿನ ಪ್ರಮಾಣವನ್ನು ೧೩,೫೧೧ ಕ್ಯೂಸೆಕ್ಗೆ ಹೆಚ್ಚಳ ಮಾಡಲಾಗಿದೆ.
ಕಳೆದ ಗುರುವಾರ ಒಂದೇ ದಿನ ಕೆಆರ್ಎಸ್ ನೀರಿನ ಮಟ್ಟ ೭ ಅಡಿ ಹೆಚ್ಚಳವಾಗಿದೆ. ನಂತರದ ಎರಡೇ ದಿನದಲ್ಲಿ ೩ ಅಡಿ ನೀರಿನ ಮಟ್ಟ ಹೆಚ್ಚಳ ವಾಗಿದ್ದು, ಜಲಾಶಯದ ಭದ್ರತೆ ದೃಷ್ಟಿಯಿಂದ ನೀರನ್ನು ಜಲಾಶಯದಿಂದ ಹೆಚ್ಚಿನ ಪ್ರಮಾಣ ದಲ್ಲಿ ಹೊರ ಬಿಡಲೇಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಕೆಆರ್ಎಸ್ನಿಂದ ಯಾವುದೇ ಕ್ಷಣದಲ್ಲಿ ಹೆಚ್ಚು ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗುತ್ತದೆ.
ಹೀಗಾಗಿ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಕಳೆದ ನಾಲ್ಕು ದಿನದಿಂದಲೂ ನೀರಾವರಿ ಇಲಾಖೆ ಅಧಿಕಾರಿಗಳು ಸೂಚನೆ ನೀಡುತ್ತಲೇ ಇದ್ದಾರೆ. ಪ್ರವಾಹ ಪರಿಸ್ಥಿತಿ ಎದುರಿಸಲು ಕಂದಾಯ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಈ ಸಂಬAಧ ಮಂಡ್ಯ ಜಿಲ್ಲಾಧಿಕಾರಿಗಳು ಸಭೆಗಳನ್ನು ನಡೆಸಿ ಸೂಕ್ತ ನಿರ್ದೇಶನ ನೀಡಿದ್ದಾರೆ. ಕಂದಾಯ ಇಲಾಖಾಧಿಕಾರಿಗಳು, ಗ್ರಾಮ ಪಂಚಾಯ್ತಿ ಪಿಡಿಓಗಳು ಯಾವುದೇ ಪರಿಸ್ಥಿತಿ ಎದುರಿಸಲು ದಿನದ ೨೪ ಗಂಟೆ ಸನ್ನದ್ಧ ವಾಗಿರುವಂತೆ ಸೂಚಿಸಲಾಗಿದೆ. ನದಿ ಪಾತ್ರದ ಗ್ರಾಮಗಳಲ್ಲಿ ಗ್ರಾಮ ಪಂಚಾಯ್ತಿಗಳ ಮೂಲಕ ಎಚ್ಚರಿಕೆ ಸಂದೇಶಗಳನ್ನು ರವಾನಿಸಲಾಗಿದೆ. ಪೊಲೀಸ್ ಮತ್ತು ಅಗ್ನಿಶಾಮಕ ದಳ ಕೂಡ ಸನ್ನದ್ಧವಾಗಿದೆ. ಪ್ರವಾಹದಿಂದ ಅನಾಹುತ ಸಂಭವಿಸಿದರೆ ಬಳಸಲು ಅನು ವಾಗುವಂತೆ ದೋಣ ಗಳನ್ನು ಹಾಗೂ ನುರಿತ ಈಜುಗಾರರನ್ನು ಸಜ್ಜುಗೊಳಿಸಲಾಗಿದೆ.