ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಇನ್ನಿಲ್ಲ
ಮೈಸೂರು

ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಇನ್ನಿಲ್ಲ

May 4, 2020

ಬೆಂಗಳೂರು, ಮೇ 3- ಹಿರಿಯ ಸಾಹಿತಿ, ನಿತ್ಯೋತ್ಸವ ಕವಿ ಪ್ರೊ. ಕೆ.ಎಸ್.ನಿಸಾರ್ ಅಹಮದ್ ಭಾನುವಾರ ವಿಧಿವಶರಾದರು.
ಅವರಿಗೆ 84 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಅವರು, ಭಾನುವಾರ ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.

ನಿಸಾರ್ ಅಹಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ 1936ರ ಫೆ.5ರಂದು ಜನಿಸಿದರು. 1959ರಲ್ಲಿ ಭೂವಿಜ್ಞಾನ ಸ್ನಾತಕೋತ್ತರ ಪದವಿ ಪಡೆದರು. ಅವರು, 1994ರವರೆಗೆ ವಿವಿಧ ಸರ್ಕಾರಿ ಕಾಲೇಜು ಗಳಲ್ಲಿ ಅಧ್ಯಾಪಕರಾಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. 10 ವರ್ಷದವ ರಾಗಿದ್ದಾಗಲೇ ಅವರು ಜಲಪಾತದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. 21 ಕವನ ಸಂಕಲನ, 14 ವೈಚಾರಿಕ ಕೃತಿಗಳು, 5 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದ ಕೃತಿಗಳು, 13 ಸಂಪಾದನ ಗ್ರಂಥಗಳು ಪ್ರಕಟವಾಗಿವೆ.

ನಿಸಾರ್ ಅಹಮದ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪಂಪ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಅರಸು ಪ್ರಶಸ್ತಿ,
ಮಾಸ್ತಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2017ರ ದಸರಾ ಮಹೋತ್ಸವವನ್ನು ನಿಸ್ಸಾರ್ ಅಮಹದ್ ಉದ್ಘಾಟಿಸಿದ್ದರು. ನಿಸಾರ್ ಅಹಮದ್ ಅವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಬೆಂಗಳೂರಿನಲ್ಲಿರುವ ನಂದಿದುರ್ಗ ರಸ್ತೆಯ ಖಬರಾಸ್ತಾನದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ನಿಸಾರ್ ಅಹಮದ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅತ್ಯುತ್ತಮ ಸಾಹಿತ್ಯ ಸಂಕಲನಗಳನ್ನು ಕನ್ನಡಕ್ಕೆ ನೀಡಿದ ಅವರು, ನಿತ್ಯೋತ್ಸವ ಕವಿ ಎಂದೇ ಪ್ರಖ್ಯಾತಿ ಪಡೆದು ಕನ್ನಡಿಗರ ಮನೆಮಾತಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪಂಪ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದ ಅವರು ಕನ್ನಡದ ಎಲ್ಲ ಪ್ರಾಕಾರಗಳನ್ನು ಶ್ರೀಮಂತಗೊಳಿಸಿದ್ದರು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ಸಂವೇದನಾಶೀಲ ಹಾಗೂ ಜನಪ್ರಿಯ ಕವಿ ನಿಸಾರ್ ಅಹ್ಮದ್ ನಿಧನದಿಂದ ಬಹುಮುಖ ಪ್ರತಿಭೆಯ ಸಾಹಿತ್ಯ ಪ್ರಭೆ ಮುಸುಕಾದಂತಾ ಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಕನ್ನಡದ ಪ್ರಖ್ಯಾತ ಕವಿ ನಿಸಾರ್ ಅಹಮದ್ ಅವರ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್. ನಂದೀಶ್ ಹಂಚೆ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಇಂದು ನಿಧನರಾಗಿರುವ ಹಿರಿಯ ಸಾಹಿತಿ, ಕವಿ ಪೆÇ್ರ.ಕೆ.ಎಸ್. ನಿಸಾರ್ ಅಹ್ಮದ್ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಸಾರ್ ಅಹ್ಮದ್ ಅವರ ನಿಧನದಿಂದ ಕನ್ನಡದ ಮೇರು ಕವಿಯನ್ನು ನಾವು ಕಳೆದುಕೊಂಡಿದ್ದೇವೆ. ಸಾಹಿತ್ಯಲೋಕದಲ್ಲಿ ತನ್ನದೆ ಆದ ರೀತಿಯಲ್ಲಿ ಅವರು ಸೇವೆ ಸಲ್ಲಿಸಿದ್ದರು. ಅನೇಕ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದರು. ಅವರ ನಿಧನದಿಂದ ಕನ್ನಡ ನಾಡಿಗೆ, ಭಾಷೆಗೆ ದೊಡ್ಡ ಆಘಾತವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ನಿಸಾರ್ ಅವರು ಬಹಳ ವರ್ಷಗಳಿಂದ ಖಾಯಿಲೆಯಿಂದ ಬಳಲುತ್ತಿದ್ದರು. ನಿಸಾರ್ ಅಹ್ಮದ್ ಅವರ ಹೆಸರಿನಲ್ಲಿ ಟ್ರಸ್ಟ್ ವೊಂದನ್ನು ರಚಿಸಿ ಚಿಕ್ಕಬಳ್ಳಾಪುರ ಬಳಿ 2.20 ಎಕರೆ ಜಮೀನು ನೀಡಲಾಗಿದೆ. ಮುಂದಿನ ಕ್ಯಾಬಿನೆಟ್‍ನಲ್ಲಿ ಘೋಷಣೆ ಆಗಬೇಕಿತ್ತು. ಅಷ್ಟರದಲ್ಲಿ ಅವರು ನಮ್ಮನ್ನು ಅಗಲಿದ್ದಾರೆ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅಶೋಕ ಕಂಬನಿ ಮಿಡಿದಿದ್ದಾರೆ.

Translate »