ತಿ.ನರಸೀಪುರ.ಅ.21(ಎಸ್‍ಕೆ)-ಟಾಟ್ ಏಸ್‍ಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟಿದ್ದು, ಬಸ್ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿರುವ ಘಟನೆ ಬುಧವಾರ ಮೂಗೂರು ಗ್ರಾಮದ ಬಳಿ ನಡೆದಿದೆ.
ಕೊಳ್ಳೇಗಾಲ ತಾಲೂಕು ಹೊಂಡರಬಾಳು ಗ್ರಾಮದ ಶಿವಸ್ವಾಮಿ ಪುತ್ರ ಮಧು(26) ಅಪಘಾತದಲ್ಲಿ ಮೃತಪಟ್ಟ ಯುವಕ. ಈತ ಕಾರ್ಯ ನಿಮಿತ್ತ ಕೊಳ್ಳೇಗಾಲದಿಂದ ತಿ.ನರಸೀಪುರ ಕಡೆಗೆ ಟಾಟಾ ಏಸ್‍ನಲ್ಲಿ ಬರುತ್ತಿದ್ದ ವೇಳೆ ಟಿ.ನರಸೀಪುರ ಕಡೆಯಿಂದ ಅತಿ ವೇಗದಿಂದ ಬಂದ ಕೆಎಸ್‍ಆರ್‍ಟಿಸಿ ಬಸ್ ಟಾಟಾ ಏಸ್‍ಗೆ ಡಿಕ್ಕಿ ಹೊಡೆದು, ಬಳಿಕ ಬಸ್ ರಸ್ತೆಯ ಚರಂಡಿಗೆ ನುಗ್ಗಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಟಾಟಾ ಏಸ್ ಚಲಾಯಿಸುತ್ತಿದ್ದ ಮಧು ವಾಹನದ ಸಮೇತ ರಸ್ತೆಗೆ ಉರುಳಿದ್ದು, ತೀವ್ರವಾಗಿ ಗಾಯಗೊಂಡಿದ್ದಾನೆ. ಸ್ಥಳೀಯರ ಸಹಕಾರಿದಂದ ಗಾಯಾಳು ಮಧುವನ್ನು ತಿ.ನರಸೀಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅಸುನೀದ್ದಾನೆ. ಘಟನೆಯಲ್ಲಿ ಬಸ್ ಚಾಲಕ ರಾಜೇಂದ್ರ ಹಾಗೂ ಪ್ರಯಾಣಿಕ ಬಸವಣ್ಣ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತಕ್ಕೆ ಅತಿ ವೇಗದ ಚಾಲನೆಯೇ ಕಾರಣ ಎನ್ನಲಾಗಿದೆ. ತಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.