ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಕೆಎಸ್‍ಆರ್‍ಟಿಸಿ ನೌಕರರ ಪ್ರತಿಭಟನೆ
ಚಾಮರಾಜನಗರ

ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಕೆಎಸ್‍ಆರ್‍ಟಿಸಿ ನೌಕರರ ಪ್ರತಿಭಟನೆ

March 1, 2020

ಚಾಮರಾಜನಗರ, ಫೆ.29(ಎಸ್‍ಎಸ್) – ತಮ್ಮನ್ನು ಸರ್ಕಾರಿ ನೌಕರರೆಂದು ಪರಿ ಗಣಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಶ್ರೀಚಾಮರಾಜೇಶ್ವರ ಉದ್ಯಾನ ವನದ ಆವರಣದಿಂದ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆರ್.ರಾಮಣ್ಣ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ಹೊರಟ ನೌಕರರು, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ಆಹಾರ ಇಲಾಖೆ ಉಪ ನಿರ್ದೇಶಕ ರಾಚಪ್ಪ ಅವರ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆರ್.ರಾಮಣ್ಣ ಮಾತನಾಡಿ, ಸಾರಿಗೆ ನೌಕರರು ಹಗಲು-ರಾತ್ರಿ ಎನ್ನದೇ ಸಾರ್ವಜನಿಕರ ಸೇವೆ ಮಾಡುತ್ತಿದ್ದು, ಸಾರಿಗೆ ಸಂಸ್ಥೆಯ ಎಲ್ಲಾ ವಿಚಾರ ಗಳಲ್ಲಿಯೂ ಸಹ ಸರ್ಕಾರ ನೇರವಾಗಿ ವ್ಯವಹಾರ ನಡೆಸುತ್ತಿದ್ದು, ವರ್ಗಾವಣೆ, ಹೊಸ ಬಸ್ ಖರೀದಿ, ನೌಕರರ ವೇತನ, ದರ ನಿರ್ವ ಹಣೆ, ಪಾಸ್, ಪ್ರಯಾಣಿಕರ ನಿರ್ವಹಣೆ ಈ ಎಲ್ಲಾ ಕಾರ್ಯಗಳಿಗೆ ಸರ್ಕಾರದ ಅನುಮತಿ ಬೇಕು. ಆದರೆ ಮಾತ್ರ ನಮ್ಮನ್ನು ಸರ್ಕಾರಿ ನೌಕರ ರನ್ನಾಗಿ ಘೋಷಣೆ ಮಾಡದಿರುವುದು ವಿಷಾದಕರ ಎಂದು ಬೇಸರ ವ್ಯಕ್ತಪಡಿಸಿದರು.

ಈಗಾಗಲೇ ನಮ್ಮ ಸಂಸ್ಥೆಯ ಕೆಲವು ಕಾರ್ಮಿಕ ಸಂಘಟನೆಗಳು ವೇತನಕ್ಕೆ ಮನವಿ ಸಲ್ಲಿಸುತ್ತಿದ್ದು, ಪ್ರತಿ ಬಾರಿ ವೇತನ ಹೆಚ್ಚಳ ಸಮಯದಲ್ಲಿ ಮುಷ್ಕರ ನಡೆಸಿ ನಮ್ಮ ವೇತನ ಶೇ.5, 10, 12.5ರಷ್ಟು ಹೆಚ್ಚಳ ಮಾಡಿಕೊಂಡಿದ್ದರೂ ಸಹ ಸರ್ಕಾರಿ ನೌಕರರಿಗಿಂತ ಶೇ.30ರಷ್ಟು ಕಡಿಮೆ ವೇತನ ಪಡೆಯುತ್ತಿದ್ದೇವೆ. ಈಗ ದೊರಕು ತ್ತಿರುವ ವೇತನದಿಂದ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ, ಆರೋಗ್ಯ ಸೇರಿದಂತೆ ಜೀವನ ನಿರ್ವಹಣೆ ಬಹಳ ಕಷ್ಟಕರವಾಗಿದೆ. ಹೀಗಾಗಿ ಮುಂಬರುವ ಅಧಿ ವೇಶನದಲ್ಲಿ ತಮ್ಮನ್ನು ರಾಜ್ಯ ಸರ್ಕಾರಿ ನೌಕರರನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಕೆ.ಆರ್.ನಾಗರಾಜು, ರಂಗಸ್ವಾಮಿ, ನಟರಾಜು, ಬಿ.ಎಸ್. ರಮೇಶ್, ರಾಜೇಶ್ ಉಮ್ಮತ್ತೂರು, ಎಚ್.ಪಿ.ಮಹ ದೇವಸ್ವಾಮಿ, ಸಂಪತ್, ಮಹದೇವ, ವೀರಾಜೇಅರಸ್, ವೆಂಕಟೇಶ್, ಲೋಕೇಶ್, ಮಂಜುನಾಥ್ ಇತರರಿದ್ದರು.

Translate »