ಮರ್ಮಾಂಗ ಕತ್ತರಿಸಿಕೊಳ್ಳಲು ಬಾಲಕನಿಗೆ ಪ್ರಚೋದನೆ: ಆರೋಪಿ ಸೆರೆ
ಮಂಡ್ಯ

ಮರ್ಮಾಂಗ ಕತ್ತರಿಸಿಕೊಳ್ಳಲು ಬಾಲಕನಿಗೆ ಪ್ರಚೋದನೆ: ಆರೋಪಿ ಸೆರೆ

March 1, 2020

ಶ್ರೀರಂಗಪಟ್ಟಣ, ಫೆ.29-(ವಿನಯ್ ಕಾರೇಕುರ) ಮರ್ಮಾಂಗ ಕತ್ತರಿಸಿಕೊಳ್ಳುವಂತೆ ಅಪ್ರಾಪ್ತ ಬಾಲಕನ ಪ್ರಚೋದಿಸಿದ ವ್ಯಕ್ತಿಯನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಾಂಡವಪುರ ತಾಲೂಕು ಸೀತಾಪುರ ಗ್ರಾಮದ ಸುನೀಲ್ ಕುಮಾರ್ ಅಲಿಯಾಸ್ ಸುನೀ ಅಲಿಯಾಸ್ ಗುಡ್ಡಪ್ಪ(28) ಬಂಧಿತನಾಗಿದ್ದು, ಈತನ ವಿರುದ್ಧ ಕೊಲೆ ಪ್ರಯತ್ನ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ವಿವರ: ಕಾರಿನಲ್ಲಿ ಬಂದ ಮೂವರ ತಂಡ ಪ್ರೇಮಿಗಳ ದಿನವಾದ ಫೆ.14ರಂದು ಕಾಲೇಜಿಗೆ ತೆರಳುತ್ತಿದ್ದ 17 ವರ್ಷದ ಬಾಲಕನನ್ನು ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಹರವು ಎಲೆಕೆರೆ ಗ್ರಾಮದ ರಸ್ತೆಯ ಮೊಸಳೆ ಹಳ್ಳದ ಬಳಿ ಆತನ ಮರ್ಮಾಂಗ ಕತ್ತರಿಸಿ, ಕಾರಿನಿಂದ ಇಳಿಸಿ ಹೋಗಿದ್ದರು ಎಂದು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಎಸ್ಪಿ ಪರಶುರಾಂ ಅವರು ಎಎಸ್‍ಪಿ ಡಾ.ಶೋಭಾರಾಣಿ, ಶ್ರೀರಂಗಪಟ್ಟಣ ಡಿವೈಎಸ್ಪಿ ಅರುಣ್ ನಾಗೇಗೌಡ, ಸರ್ಕಲ್ ಇನ್ಸ್‍ಪೆಕ್ಟರ್ ಕೃಷ್ಣಪ್ಪ ಮಾರ್ಗದರ್ಶನದಲ್ಲಿ ಸಬ್ ಇನ್ಸ್‍ಪೆಕ್ಟರ್ ಗಿರೀಶ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು. ಈ ತಂಡವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕನನ್ನು ವಿಚಾರಣೆ ಮಾಡಿ ಆತ ನೀಡಿದ ಮಾಹಿತಿ ಮೇರೆಗೆ ಸುನೀಲ್ ಕುಮಾರ್‍ನನ್ನು ಬಂಧಿಸಿದೆ.

ಬಾಲಕನ ಮೇಲೆ ಪ್ರೇಮ: ಕಳೆದ ಒಂದೂವರೆ ವರ್ಷದಿಂದ ಬಾಲಕನ ಮನವೊಲಿಸಿ ಕೊಂಡಿದ್ದ ಸುನೀಲ್‍ಕುಮಾರ್‍ಗೆ ಈ ಬಾಲಕನ ಮೇಲೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಫೆ.14ರಂದು ಬಾಲಕನನ್ನು ಭೇಟಿ ಮಾಡಿದ ಸುನೀಲ್ ಕುಮಾರ್, ತನಗೆ ದೇವರು ಬರುತ್ತದೆ ಎಂದು ನಂಬಿಸಿದ್ದಲ್ಲದೆ, ತಾನು ಹೇಳಿದಂತೆ ಕೇಳದಿದ್ದರೆ ದೇವರು ಶಾಪ ಕೊಡುತ್ತದೆ ಎಂದು ಹೆದರಿಸಿದ್ದ. ನಂತರ `ನೀನು ನನಗೆ ಇಷ್ಟ. ನಾನು ನಿನ್ನನ್ನು ಪ್ರೀತಿಸುತ್ತೇನೆ. ನೀನು ಮುಂದೆ ಮದುವೆಯಾಗಬಾರದು. ನನ್ನ ಜೊತೆಯಲ್ಲೇ ಇರಬೇಕು. ನಿಮ್ಮ ಮನೆಯಲ್ಲಿ ನಿನಗೆ ಮದುವೆ ಮಾಡಬಾರದು ಅಂದರೆ ನೀನು ಮರ್ಮಾಂಗವನ್ನು ಕತ್ತರಿಸಿಕೊಳ್ಳಬೇಕು. ಅದರಿಂದ ಏನೂ ತೊಂದರೆಯಾಗುವುದಿಲ್ಲ. ಗಾಯವಾಗಿ ಸ್ವಲ್ಪ ರಕ್ತ ಹೋಗುತ್ತದೆ ಆಮೇಲೆ ವಾಸಿಯಾಗುತ್ತದೆ’ ಎಂದು ಪ್ರಚೋದಿಸಿ, ಚಾಕು ಕೊಟ್ಟು ಬಾಲಕ ತನ್ನ ಮರ್ಮಾಂಗ ಕತ್ತರಿಸಿಕೊಳ್ಳುವಂತೆ ಮಾಡಿದ್ದಾನೆ. ನಂತರ ಆತ ಹೇಳಿಕೊಟ್ಟಂತೆ ಬಾಲಕ ತನ್ನ ತಂದೆ ಬಳಿ ಅಪಹರಣದ ಕಥೆ ಹೇಳಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸುನೀಲ್ ಕುಮಾರ್‍ನನ್ನು ಫೆ.28ರಂದು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್‍ಪೆಕ್ಟರ್ ಗಿರೀಶ್, ಸಿಬ್ಬಂದಿಗಳಾದ ಕೆ.ಶ್ರೀನಿವಾಸ ಮೂರ್ತಿ, ಹೆಚ್.ಬಿ.ರವಿಕುಮಾರ ಸ್ವಾಮಿ, ಎಸ್.ಎಸ್.ಚಂದ್ರಶೇಖರ್, ಡಿ.ಮಲ್ಲಿಕಾರ್ಜುನ, ಎಂ.ಆರ್.ಶ್ರೀಧರ್, ಎಸ್.ರವೀಶ, ಚಾಲಕ ಭಾರ್ಗವ ಭಾಗವಹಿಸಿದ್ದರು.

 

 

Translate »