ಜೆಡಿಎಸ್ ಕಾರ್ಯಕರ್ತರು ಎಲ್ಲಿದ್ದಾರೆಂದು ಮುಟ್ಟಬೇಕು: ಕೆ.ಎಸ್.ಈಶ್ವರಪ್ಪ ವ್ಯಂಗ್ಯ
ಮಂಡ್ಯ

ಜೆಡಿಎಸ್ ಕಾರ್ಯಕರ್ತರು ಎಲ್ಲಿದ್ದಾರೆಂದು ಮುಟ್ಟಬೇಕು: ಕೆ.ಎಸ್.ಈಶ್ವರಪ್ಪ ವ್ಯಂಗ್ಯ

March 1, 2020

ಕೊಪ್ಪಳ,ಫೆ.29-ಜೆಡಿಎಸ್ ಕಾರ್ಯಕರ್ತರನ್ನು ಕೆಣಕಿದರೆ ಸುಮ್ಮನಿರಲ್ಲ ಎಂಬ ಮಾಜಿ ಪ್ರಧಾನಿ ದೇವೇಗೌಡ ಅವರ ಎಚ್ಚರಿಕೆಗೆ ವ್ಯಂಗ್ಯವಾಡಿ ರುವ ಸಚಿವ ಕೆ.ಎಸ್.ಈಶ್ವರಪ್ಪ, ಜೆಡಿಎಸ್ ಕಾರ್ಯಕರ್ತರು ಎಲ್ಲಿದ್ದಾರೆಂದು ಮುಟ್ಟಬೇಕು ಎಂದು ಪ್ರಶ್ನಿಸಿದ್ದಾರೆ.

ಮಂಡ್ಯದಲ್ಲಿ ಜೆಡಿಎಸ್ ಮುಖಂಡನ ಕಲ್ಲು ಕ್ವಾರೆಗೆ ತಡೆ ನೀಡಿರುವ ಹಿನ್ನೆಲೆ ಅಧಿಕಾರಿ ವಿರುದ್ಧ ದೇವೇಗೌಡ ಅವರು ಗುಡುಗಿದರು. ಈ ವೇಳೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ದೇವೇ ಗೌಡರು, ಮೂರು ವರ್ಷ ಬಿಜೆಪಿ ಅಧಿಕಾರ ನಡೆಸಲು ನಾವು ಯಾವುದೇ ತೊಂದರೆ ನೀಡುವುದಿಲ್ಲ.

ಆದರೆ, ನಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವರು, ನಾವ್ಯಾಕ್ರಿ ಜೆಡಿಎಸ್ ಕಾರ್ಯಕರ್ತರನ್ನು ಮುಟ್ಟೋಣ ಮೊದಲು ಜೆಡಿಎಸ್ ಕಾರ್ಯಕರ್ತರು ಎಲ್ಲಿದ್ದಾರೆ ಹುಡುಕಲಿ. ಆ ನಂತರ ಮುಟ್ಟೋದು, ಬಿಡೋದು. ನಾನೂ ಜೆಡಿಎಸ್ ಕಾರ್ಯಕರ್ತರನ್ನು ಎಲ್ಲಿದ್ದಾರೆಂದು ಭೂತಗನ್ನಡಿ ಹಾಕಿ ಹುಡುಕುತ್ತಿದ್ದೇನೆ ಎಂದು ಲೇವಡಿ ಮಾಡಿದರು.

ದೇವೇಗೌಡ ಅವರು ತಾವೂ ಸೋತು, ಮೊಮ್ಮಗನನ್ನೂ ಸೋಲಿಸಿದರು. ರಾಜ್ಯದಲ್ಲಿ ಈಗ ಜೆಡಿಎಸ್ ಎಲ್ಲಿದೆ? ಅವರು ಎಲ್ಲಾದರೂ ಇದ್ದರೆ ತಾನೇ ಮುಟ್ಟೋದಕ್ಕೆ ಅವಕಾಶ ಎಂದರು. ಜೆಡಿಎಸ್ ನಾಯಕರು ಪ್ರಚಾರಕ್ಕಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಹೊಡೆಯುವ ಪಕ್ಷ ಅಲ್ಲ, ಅಪ್ಪಿಕೊಳ್ಳುವ ಪಕ್ಷ ಎಂಬುದು ನೆನಪಿರಲಿ ಎಂದರು.

Translate »