‘ಗ್ರೇಟರ್ ಮೈಸೂರು’ ಶೀಘ್ರ ಘೋಷಣೆ
ಮೈಸೂರು

‘ಗ್ರೇಟರ್ ಮೈಸೂರು’ ಶೀಘ್ರ ಘೋಷಣೆ

February 29, 2020

ಮೈಸೂರು, ಫೆ. 28 (ಆರ್‍ಕೆ)- ಬಹು ನಿರೀಕ್ಷಿತ `ಗ್ರೇಟರ್ ಮೈಸೂರು’ ಯೋಜನೆಯನ್ನು ಮುಂಬರುವ ರಾಜ್ಯ ಬಜೆಟ್‍ನಲ್ಲಿ ಸೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಪ್ರಗತಿ ಹಂತ ದಲ್ಲಿರುವ ಅಂಗಡಿ ಮಳಿಗೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮೈಸೂರು ನಗರವನ್ನು ಮತ್ತಷ್ಟು ವಿಸ್ತರಿಸಿ ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಸುತ್ತಲಿನ ಇನ್ನಷ್ಟು ಗ್ರಾಮಗಳನ್ನು ಸೇರ್ಪಡಿಸಬೇಕೆಂದು ಜಿಲ್ಲಾಧಿ ಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದರು.

ಅಲ್ಲದೆ, ಸಂಸದರು, ಈ ಭಾಗದ ಶಾಸಕರೂ ಸಹ ನಗರಕ್ಕೊಂದಿಕೊಂಡಂತಿರುವ ಹಿನಕಲ್, ಬೆಲವತ್ತ, ಆಲನಹಳ್ಳಿ, ಲಲಿತಾದ್ರಿಪುರ ಸೇರಿದಂತೆ ರಿಂಗ್ ರೋಡಿ ನಿಂದ ಹೊರ ಭಾಗದಲ್ಲಿರುವ ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿ ಮೂಲಭೂತ ಸೌಕರ್ಯ ಒದಗಿಸಬೇ ಕೆಂಬ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಈ ಸಂಬಂಧ ತಾವೂ ಮೈಸೂರು ಮಹಾನಗರ ಪಾಲಿಕೆ, ಮುಡಾ, ಚೆಸ್ಕಾಂ, ಜಿಲ್ಲಾ ಪಂಚಾಯ್ತಿ ಅಧಿಕಾರಿ ಗಳೊಂದಿಗೆ ಚರ್ಚಿಸಿದ್ದೇನೆ. ಸರ್ಕಾರದ ಹಂತದಲ್ಲಿ ಈ ಪ್ರಸ್ತಾವನೆಯು ಒಂದು ತಾತ್ವಿಕ ಹಂತ ತಲುಪಿದೆ ಎಂದ ಸಚಿವರು, ಈ ಸಂಬಂಧ ಮುಖ್ಯಮಂತ್ರಿ ಗಳೊಂದಿಗೂ ಮಾತನಾಡಿದ್ದೇನೆ ಎಂದರು.

ಬಿಬಿಎಂಪಿ ಮಾದರಿಯಲ್ಲಿ ಮೈಸೂರು ನಗರ ವನ್ನು ವಿಸ್ತಾರ ಮಾಡಿ `ಬೃಹತ್ ಮೈಸೂರು’ ಯೋಜನೆ ಯನ್ನು ಮಾರ್ಚ್ 5 ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‍ನಲ್ಲಿ ಸೇರಿಸುವುದಾಗಿ ಮುಖ್ಯಮಂತ್ರಿ ಗಳು ತಿಳಿಸಿದ್ದಾರೆ ಎಂದ ಅವರು, `ಗ್ರೇಟರ್ ಮೈಸೂರು’ ಯೋಜನೆ ಅಂದು ಘೋಷಣೆಯಾಗಲಿದೆ ಎಂದು ನುಡಿದರು. ಎರಡು ವರ್ಷಗಳ ಹಿಂದೆಯೇ ಮೈಸೂರು ಮಹಾನಗರ ಪಾಲಿಕೆಯು ಸಮೀಕ್ಷೆ ನಡೆಸಿ ಹಲವು ಗ್ರಾಮಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಗ್ರಾಮ ಪಂಚಾಯ್ತಿಗಳು ಮೂಲ ಭೂತ ಸೌಲಭ್ಯ ಒದಗಿಸಲು ಸಾಧ್ಯವಾಗದಿರುವ ಕಾರಣ 44 ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ತರಬಹುದಾ ಗಿದೆ ಎಂದು ಪಾಲಿಕೆಯು 2017ರ ಅಕ್ಟೋಬರ್ ಮಾಹೆ ಯಲ್ಲಿ ಪ್ರಸ್ತಾವನೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಸ್ತುತ ಪಾಲಿಕೆ ವ್ಯಾಪ್ತಿಯು ರಿಂಗ್ ರಸ್ತೆ ಒಳಗಿನ 128.4 ಚದರ ಕಿ.ಮೀ. ವಿಸ್ತಾರವಿದೆ. ಅದರ ಜೊತೆಗೆ ಮುಡಾದಿಂದ ಅಭಿವೃದ್ಧಿಪಡಿಸಿದ ಹಾಗೂ ಕೆಲ ಖಾಸಗಿ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಲಾಗಿದೆ.

ಈ ಸಂಬಂಧ ಸಂಸದ ಪ್ರತಾಪ್ ಸಿಂಹ ಸಹ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಒತ್ತಡ ತಂದಿದ್ದರಲ್ಲದೆ, ಆಲನಹಳ್ಳಿ, ಹಂಚ್ಯಾ, ಕಡಕೊಳ, ರಮ್ಮನಹಳ್ಳಿ, ಹೊಸಹುಂಡಿ, ದೇವಲಾಪುರ, ಶ್ರೀರಾಂಪುರ, ಜಯಪುರ, ಬೋಗಾದಿ, ಹಿನಕಲ್, ಕೂರ್ಗಳ್ಳಿ, ಹೂಟಗಳ್ಳಿ, ಇಲವಾಲ ಹಾಗೂ ಸಿದ್ದಲಿಂಗಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳನ್ನು ಸೇರ್ಪಡೆ ಮಾಡಬೇಕೆಂದು ಅವರು ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

1995ರ ಅಕ್ಟೋಬರ್ 18ರಂದು ನಗರಪಾಲಿಕೆ ವ್ಯಾಪ್ತಿಯ ಗಡಿಯನ್ನು 1976ರ ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಕಾಯ್ದೆ ಪ್ರಕಾರ ನಿರ್ಧರಿಸಲಾಗಿತ್ತು. 15 ವರ್ಷ ಕಳೆದಿದ್ದು, ನಗರ ಬೃಹದಾಕಾರವಾಗಿ ಬೆಳೆದಿದೆ. ಹಲವು ಬಡಾವಣೆಗಳು ನಿರ್ಮಾಣವಾಗಿವೆ. ಚಾಮುಂಡಿಬೆಟ್ಟ ಕೆಸರೆ, ದಟ್ಟಗಳ್ಳಿ, ಕುರುಬಾರಹಳ್ಳಿ, ಹೆಬ್ಬಾಳು, ಶ್ರೀರಾಂಪುರ, ಮೇಟಗಳ್ಳಿ, ರಮ್ಮನಹಳ್ಳಿ, ಹಿನಕಲ್ ಹಾಗೂ ಹೂಟಗಳ್ಳಿ ಗ್ರಾಮಗಳು ಈಗಾಗಲೇ ಮೈಸೂರು ನಗರವನ್ನೇ ಸೇರಿಕೊಂಡಿರುವುದನ್ನು ಗಮನಿಸಬಹುದು.

ಕೆಲ ಗ್ರಾಮ ಪಂಚಾಯ್ತಿ ವ್ಯಾಪ್ತಿ ಪ್ರದೇಶಗಳಿಗೆ ಈಗಲೂ ಮೈಸೂರು ಮಹಾನಗರ ಪಾಲಿಕೆ ಯಿಂದಲೇ ನೀರು, ಸ್ವಚ್ಛತೆ, ಒಳಚರಂಡಿ, ರಸ್ತೆ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯವನ್ನು ಒದಗಿಸುತ್ತಿರುವುದರಿಂದ ಮೈಸೂರು ನಗರವನ್ನು ವಿಸ್ತರಿಸಿ ಗ್ರೇಟರ್ ಮೈಸೂರು ಯೋಜನೆಯನ್ನು ಜಾರಿಗೆ ತರಬೇಕೆಂಬ ಒತ್ತಾಯ ಕೇಳಿ ಬಂದಿತ್ತು.

Translate »