ದಸರಾ ಗಜಪಡೆ ಸಂಗಾತಿಗಳಲ್ಲಿ ಕುಚ್… ಕುಚ್ ಹೋತಾ ಹೈ…!?
ಮೈಸೂರು

ದಸರಾ ಗಜಪಡೆ ಸಂಗಾತಿಗಳಲ್ಲಿ ಕುಚ್… ಕುಚ್ ಹೋತಾ ಹೈ…!?

September 25, 2021

ಮೈಸೂರು, ಸೆ.೨೪(ಎಂಟಿವೈ)- ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅರಮನೆ ಅಂಗಳದಲ್ಲಿ ಬೀಡು ಬಿಟ್ಟಿರುವ ಗಜಪಡೆಯ ಸದಸ್ಯರಲ್ಲಿ ಮೋಹ, ಮೋಡಿ ಶುರುವಾಗಿದೆ. ಹೆಣ್ಣಾನೆಗಳಾದ ಕಾವೇರಿ ಹಾಗೂ ಲಕ್ಷಿö್ಮಗೆ ವಿಕ್ರಮ ಹಾಗೂ ಧನಂಜಯ ಪ್ರಪೋಸ್ ಮಾಡುತ್ತಿರುವುದು ಗುಟ್ಟಾಗಿಲ್ಲ. `ಬೆಚ್ಚನೆ ಮನೆ, ವೆಚ್ಚಕ್ಕೆ ಹೊನ್ನು, ಇಚ್ಛೆ ಅರಿಯುವ ಮಡದಿ ಇರಲು ಸ್ವರ್ಗಕ್ಕೇ ಕಿಚ್ಚು ಹಚ್ಚೆಂದ…’ ಸರ್ವಜ್ಞನ ಸಾರ್ವತ್ರಿಕ ನುಡಿ ಸಕಲ ಜೀವರಾಶಿಗಳಿಗೂ ಅನ್ವಯವಲ್ಲವೇ? ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆಗೆ ಟೈಮ್ ಟೈಮಿಗೆ ಪೋಷಕಾಂಶಯುಕ್ತ ಆಹಾರ, ಆಗಾಗ ಮಹಾಮಜ್ಜನ, ಮಾಲಿಷ್, ವಾಕಿಂಗ್, ಮಧ್ಯೆ ಮಧ್ಯೆ ಪೌಷ್ಟಿಕ ತಿನಿಸು, ಮಲಗಲು ಸೂಕ್ತÀ ಸ್ಥಳಾವಕಾಶ, ಸ್ವಚ್ಛಂದ, ಆಹ್ಲಾದಕರ ಪರಿಸರ…

ಆಹಾರ ಹುಡುಕಬೇಕು ಎಂಬ ಗೋಜಿಲ್ಲ. ಹತ್ತಾರು ಕಿಲೋಮೀಟರ್ ಅಲೆದು ಅರ್ಧ ಹೊಟ್ಟೆ ತುಂಬುವ ಕಷ್ಟವಿಲ್ಲ. ಈಗ ದಸರಾ ದೆಸೆಯಿಂದ ಅಲ್ಪ ದಿನವಾದರೂ ವೈಭೋಗದ ಜೀವನ. ಆರೋಗ್ಯ ಕಾಪಾಡುವ ನಿಟ್ಟಿನಲ್ಲೂ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಹಾಗಾಗಿಯೇ ಗಜಪಡೆ ಸ್ವಚ್ಛಂದವಾಗಿ ದಿನ ದೂಡುತ್ತಿವೆ. ಇಂತಹ ಆಹ್ಲಾದಕರ ಪರಿಸರದಲ್ಲಿ ಸಂಗಾತಿಯ ಸಹವಾಸಕ್ಕೆ ಹಾತೊರೆಯುತ್ತಿವೆ. ಧನಂಜಯನಿಗೆ ಲಕ್ಷಿö್ಮÃಯತ್ತ ಏನೋ ಒಂಥರಾ ಮನಸ್ಸು ಸೆಳೆಯುತ್ತಿದೆ. ಹಾಗೆಯೇ ಅಲ್ಪ ಮದದ ವಿಕ್ರಮನಿಗೂ ಕುಮ್ಕಿ ಆನೆ ಕಾವೇರಿ ಮೇಲೆ ಮೋಹ. ಧನಂಜಯ ಹಾಗೂ ಲಕ್ಷಿö್ಮÃಯಂತೂ ಪ್ರಣಯ ಮುನ್ಸೂಚನೆ ನೀಡಿದ್ದಾರೆ. ಇದೆಲ್ಲಾ ಪ್ರಕೃತಿ ಸಹಜವಲ್ಲವೆ? ಯಾವುದೇ ಕಿರಿಕಿರಿ ಇಲ್ಲ. ಸುತ್ತ ಸುಂದರ ಪರಿಸರ. ಹಾಗಾಗಿ ಗಜಪಡೆಯಲ್ಲಿ ಮದ-ಮೋಹ ಸಹಜ.

ಅರಮನೆ ವೀಕ್ಷಣೆಗೆ ಬರುವ ಪ್ರವಾಸಿಗರು ಈ ಆನೆಗಳ ಸಲ್ಲಾಪದ ದೃಶ್ಯ, ಆನೆಗಳ ಜಲಕ್ರೀಡೆ ದೃಶ್ಯದ ಫೋಟೊ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಸುರಕ್ಷತೆಯ ದೃಷ್ಟಿಯಲ್ಲಿ ಆನೆಗಳ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ತ್ರಿನೇಶ್ವರ ದೇವಾಲಯದ ಸಮೀಪದಿಂದಲೇ ಆನೆಗಳನ್ನು ನೋಡಿಕೊಂಡು ಹೋಗುತ್ತಿದ್ದಾರೆ. ದಸರಾ ಸಮಯ ದಲ್ಲಿ ಅರಮನೆಯ ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.

Translate »