ಕುವೆಂಪು ಕನ್ನಡಿಗರ ದಿಕ್ಸೂಚಿ
ಮೈಸೂರು

ಕುವೆಂಪು ಕನ್ನಡಿಗರ ದಿಕ್ಸೂಚಿ

December 30, 2020

ಮೈಸೂರು ಮಹಾನಗರಪಾಲಿಕೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗನ್‍ಹೌಸ್ ಬಳಿಯ ಕುವೆಂಪು ಉದ್ಯಾನವನದಲ್ಲಿ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕನ್ನಡ ಸಾಹಿತ್ಯಕ್ಕಷ್ಟೇ ಸೀಮಿತವಾಗದೆ ಕನ್ನಡಿಗರ ಬದುಕು ಹಸನಾಗಿಸಲು ಮೌಲಿಕ ಸಂದೇಶ ಮತ್ತು ಚಿಂತನೆಗಳನ್ನು ನೀಡಿದವರು ಕುವೆಂಪು. ಅವರ ಸಾಹಿತ್ಯದ ಮೂಲಕ ಜಾತ್ಯತೀತ ನಿಲುವುಗಳನ್ನು ಸರ್ವರಿಗೂ ಸಮಪಾಲು ಎಂಬ ಆಶಯಗಳನ್ನು ಉದ್ದಕ್ಕೂ ಸಾದರಪಡಿಸಿದವರು.

ಕನ್ನಡ ಆಡಳಿತ ಭಾಷೆಯಾದರೆ ಸಾಲದು, ಜನಮಾನಸ ಭಾಷೆಯಾಗಬೇಕು. ಪ್ರತೀ ಹಂತದಲ್ಲೂ ಕನ್ನಡಿಗರ ಮನೆ ಮಾತಾಗಬೇಕು ಎನ್ನುವ ಮೂಲಕ ಕನ್ನಡದ ದಿಕ್ಸೂಚಿಯಾದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಗರಪಾಲಿಕೆ ಆಯುಕ್ತ ಡಾ.ಗುರುದತ್ತ ಹೆಗಡೆ, ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಶಿವಕುಮಾರ್, ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಪದಾಧಿಕಾರಿಗಳಾದ ಕೆ.ಎಸ್.ನಾಗರಾಜು, ಕೆ.ಎಸ್.ಶಿವರಾಮು, ರಾಜಶೇಖರ ಕದಂಬ, ಕನ್ನಡ ಚಳವಳಿಯ ತಾಯೂರು ವಿಠಲ ಮೂರ್ತಿ, ಮೂಗೂರು ನಂಜುಂಡಸ್ವಾಮಿ, ಬಿ.ಎ.ಶಿವಶಂಕರ್ ಇನ್ನಿತರರು ಇದ್ದರು.

Translate »