ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಮಹಾರಾಣಿ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನೆ
ಮೈಸೂರು

ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಮಹಾರಾಣಿ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನೆ

July 17, 2018

ಮೈಸೂರು:  ಕಾಲೇಜಿನಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‍ಎಸ್) ಮೈಸೂರು ಜಿಲ್ಲಾ ಸಮಿತಿ ಆಶ್ರಯದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಪ್ರಸಕ್ತ ಶೈಕ್ಷಣಿಕ ಸಾಲಿಗೆ ಕಾಲೇಜು ಆರಂಭಗೊಂಡು 15 ದಿನಗಳು ಕಳೆದರೂ ಕೊಠಡಿಗಳ ಕೊರತೆಯಿಂದ ಸರಿಯಾಗಿ ತರಗತಿ ನಡೆಯುತ್ತಿಲ್ಲ. ಪ್ರಾಯೋಗಿಕ ತರಗತಿಗಾಗಿ ಅಗತ್ಯವಾದ ಉಪಕರಣಗಳೂ ಲಭ್ಯವಿಲ್ಲ. ಒಂದೂವರೆ ಸಾವಿರ ವಿದ್ಯಾರ್ಥಿನಿಯರಿಗೆ ಮೂಲಸೌಲಭ್ಯ ವ್ಯವಸ್ಥೆ ಕಲ್ಪಿಸಲು ಸಾಮಥ್ರ್ಯ ಹೊಂದಿರುವ ಕಾಲೇಜಿನಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ 4 ಸಾವಿರ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲಾಗಿದೆ. ಆದರೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಇಡೀ ದೇಶದಲ್ಲೇ ಒಂದೇ ಕ್ಯಾಂಪಸ್‍ನಲ್ಲಿ ಅತೀ ಹೆಚ್ಚು ವಿದ್ಯಾರ್ಥಿನಿಯರನ್ನು ಹೊಂದಿರುವ ಮಹಾರಾಣಿ ವಿಜ್ಞಾನ ಕಾಲೇಜು ಇತ್ತೀಚೆಗಷ್ಟೇ ಶತಮಾನೋತ್ಸವ ಆಚರಿಸಿಕೊಂಡಿದೆ. ಜೊತೆಗೆ ನ್ಯಾಕ್ ಸಮಿತಿಯಿಂದ `ಎ’ ಗ್ರೇಡ್ ಮಾನ್ಯತೆಗೂ ಭಾಜನವಾಗಿದೆ. ಇಷ್ಟೆಲ್ಲಾ ಹೆಸರಿದ್ದರೂ ಕಾಲೇಜಿನಲ್ಲಿ ಮೂಲಸೌಲಭ್ಯವಿಲ್ಲದೆ, ವಿದ್ಯಾರ್ಥಿನಿಯರು ಯಾತನೆ ಅನುಭವಿಸಬೇಕಾಗಿದೆ. ಸಮಸ್ಯೆಗಳನ್ನು ಈ ಹಿಂದೆಯೇ ಪ್ರಾಂಶುಪಾಲರ ಗಮನಕ್ಕೆ ತಂದಿದ್ದು, ಹೀಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಶೌಚಾಲಯಕ್ಕೆ ಇಂದು ಶುಚಿ ಭಾಗ್ಯ: ಗಬ್ಬು ನಾರುತ್ತಿದ್ದ ಶೌಚಾಲಯವನ್ನು ಇಂದು ಸ್ವಚ್ಛಗೊಳಿಸಲಾಗಿದೆ. ಇಂದು ಪ್ರತಿಭಟನೆ ನಡೆಸುವ ವಿಚಾರ ತಿಳಿದು ಶುಚಿಗೊಳಿಸಲು ಕ್ರಮ ವಹಿಸಿದ್ದಾರೆ. ಆದರೆ ವಾರಕ್ಕೂ ಹೆಚ್ಚು ಕಾಲದಿಂದ ಶೌಚಾಲಯ ಗಬ್ಬೇದ್ದು ನಾರುತ್ತಾ ದುರ್ವಾಸನೆಯಿಂದ ಕೂಡಿತ್ತು. ಕಾಲೇಜು ಪ್ರವೇಶಾತಿ ವೇಳೆ ಪ್ರತಿ ವಿದ್ಯಾರ್ಥಿನಿಯರಿಂದ 600 ರೂ.ಗಳನ್ನು ಕಾಲೇಜಿನ ಅಭಿವೃದ್ಧಿ ಹೆಸರಿನಲ್ಲಿ ಪಡೆಯಲಾಗುತ್ತದೆ. ಹೀಗಿದ್ದರೂ ಕಾಲೇಜಿಗೆ ಮೂಲಸೌಲಭ್ಯ ಕಲ್ಪಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದರು.

ಪ್ರತಿದಿನ ಕಾಲೇಜಿನ ಕೊಠಡಿ, ಪ್ರಾಯೋಗಾಲಯ ಕೊಠಡಿ ಹಾಗೂ ಶೌಚಾಲಯವನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು. ವಿಶ್ರಾಂತಿ ಕೊಠಡಿ ವ್ಯವಸ್ಥೆಗೊಳಿಸಿ, ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಬೇಕು. ಅಗತ್ಯಕ್ಕೆ ಅನುಗುಣವಾಗಿ ಅಟೆಂಡರ್, ಸ್ವಚ್ಛತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಎಐಎಂಎಸ್‍ಎಸ್ ಜಿಲ್ಲಾ ಕಾರ್ಯದರ್ಶಿ ಪಿ.ಸಂಧ್ಯಾ, ಸಂಘಟನೆ ಕಾರ್ಯಕರ್ತರಾದ ಸೀಮಾ, ಶೋಭಾ ಸೇರಿದಂತೆ ಕಾಲೇಜಿನ ಹಲವು ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿದ್ಯಾರ್ಥಿನಿಯರನ್ನು ಹೆದರಿಸಿ, ಬೆದರಿಸಿ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನವನ್ನು ಕಾಲೇಜಿನ ಪ್ರಾಂಶುಪಾಲರು ಹಾಗೂ ಕೆಲ ಅಧ್ಯಾಪಕರು ಮಾಡಿದ್ದಾರೆ. ಇಲ್ಲವಾಗಿದ್ದರೆ, ಇಡೀ ಕಾಲೇಜಿನ ವಿದ್ಯಾರ್ಥಿನಿಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಎಐಎಂಎಸ್‍ಎಸ್ ಜಿಲ್ಲಾ ಕಾರ್ಯದರ್ಶಿ ಪಿ.ಸಂಧ್ಯಾ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಪ್ರತಿಭಟನೆಗೆ ತೆರಳದಂತೆ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ಸೇರಿದಂತೆ ಕೆಲ ಅಧ್ಯಾಪಕರು ತಾಕೀತು ಮಾಡಿದ್ದಾರೆ. ಇದಕ್ಕೆ ಹೆದರಿದ ವಿದ್ಯಾರ್ಥಿಯರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಇದೇ ಕಾರಣಕ್ಕೆ ಕೆಲವೇ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಇದೀಗ ದೂರವಾಣಿ ಕರೆ ಮಾಡುತ್ತಿರುವ ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸುವುದಾಗಿ ತಿಳಿಸಿದ್ದಾರೆ. ಇದು ವಿದ್ಯಾರ್ಥಿನಿಯರ ಮೂಲಭೂತ ಹಕ್ಕನ್ನು ದಮನ ಮಾಡುವ ಕೃತ್ಯ ಎಂದು ಆಪಾದಿಸಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಮಹಾರಾಣಿ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರು ಸೋಮವಾರ ಪ್ರತಿಭಟನೆ ನಡೆಸಿದರು.

Translate »