ಪ್ರವಾಹ: ನದಿಪಾತ್ರದ ಧಾರ್ಮಿಕ ಶ್ರದ್ಧಾ, ಪ್ರವಾಸಿ ತಾಣಗಳು ಜಲಾವೃತ
ಮಂಡ್ಯ

ಪ್ರವಾಹ: ನದಿಪಾತ್ರದ ಧಾರ್ಮಿಕ ಶ್ರದ್ಧಾ, ಪ್ರವಾಸಿ ತಾಣಗಳು ಜಲಾವೃತ

July 17, 2018

ಶ್ರೀರಂಗಪಟ್ಟಣ:  ಕೃಷ್ಣರಾಜ ಸಾಗರ ಅಣೆಕಟ್ಟೆ ಸಂಪೂರ್ಣ ಭರ್ತಿ ಯಾದ ಹಿನ್ನೆಲೆಯಲ್ಲಿ ಜಲಾಶಯದಿಂದ ಸುಮಾರು 80 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಮುಂದುವರೆದಿದೆ.

ಪಟ್ಟಣದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಟ್ಟಣದ ಪಶ್ಚಿಮ ವಾಹಿನಿಯಲ್ಲಿರುವ ಪುರಾತನ ಮಂಟಪ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಜಲಾವೃತವಾಗಿವೆ. ಚೆಕ್‍ಪೋಸ್ಟ್ ಬಳಿಯ ಸಾಯಿ ಮಂದಿರಕ್ಕೆ ನೀರು ನುಗ್ಗಿದ್ದು, ಜನರು ಹಾಗೂ ಪ್ರವಾಸಿಗರು ತಂಡೋಪತಂಡ ವಾಗಿ ವೆಲೆಸ್ಲಿ ಸೇತುವೆ ಬಳಿ ಜಮಾವಣೆ ಗೊಂಡು ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿಳುತ್ತಿದ್ದಾರೆ.

ಅಲ್ಲದೇ ಪ್ರಸಿದ್ಧ ಪ್ರವಾಸಿ ತಾಣ ಕೆಆರ್‌ಎಸ್‌ನ ಬೃಂದಾವನ ಮತ್ತು ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವೇಶ ನಿಷೇಧಿಸಲಾಗಿದೆ.

ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಎಸ್ಪಿ ರಾಧಿಕಾ ಸೇರಿದಂತೆ ಅಧಿಕಾರಿಗಳ ತಂಡ ಕಾವೇರಿ ನದಿ ವ್ಯಾಪ್ತಿಯಲ್ಲಿ ಗಸ್ತು ನಡೆಸಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾದರೆ ಮತ್ತಷ್ಟು ನೀರು ಬಿಡುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ದೊರೆತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನದಿ ಪಾತ್ರದ ಆಯಕಟ್ಟಿನ ಸ್ಥಳಗಳಿಗೆ ಪೆÇಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಅಲ್ಲದೇ ಪ್ರವಾಹ ಪೀಡಿತ ಪ್ರದೇಶಗಳ ಮೇಲೆ ಎನ್‍ಡಿ ಆರ್‍ಎಫ್ ಪಡೆ ಹದ್ದಿನ ಕಣ್ಣಿಟ್ಟಿದೆ. ತುರ್ತು ಅಗತ್ಯ ಪರಿಹಾರ ಕಾರ್ಯಚರಣೆಗಾಗಿ ಕಾವೇರಿ ನದಿ ದಂಡೆ ಬಳಿ ಹೆಲಿಪ್ಯಾಡ್ ಕೂಡ ನಿರ್ಮಾಣ ಮಾಡಲಾಗಿದೆ.

ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದ ಬಳಿಯ ಗೌತಮ ಕ್ಷೇತ್ರ ದ್ವೀಪ ದಂತಾಗಿ ಜಲಾವೃತಗೊಂಡಿದ್ದರೂ, ಆಶ್ರಮ ಬಿಟ್ಟು ಕ್ಷೇತ್ರದ ಶ್ರೀಗಜಾನನ ಸ್ವಾಮೀಜಿ ಹೊರ ಬರಲು ಒಪ್ಪುತ್ತಿಲ್ಲ. ನಡುಗಡ್ಡೆಯಲ್ಲಿ ಸಿಲುಕಿರುವ ಸ್ವಾಮೀಜಿ ಮತ್ತು 6 ಮಂದಿ ಭಕ್ತರನ್ನು ಹೇಗಾದರೂ ಮಾಡಿ ಕರೆ ತರಲು ಜಿಲ್ಲಾಧಿಕಾರಿಗಳು ಖುದ್ದು ಸ್ಥಳಕ್ಕೆ ಆಗ ಮಿಸಿ ನಡೆಸಿದ ಪ್ರಯತ್ನ ವಿಫಲವಾಗಿದೆ.

ಆದರೆ ಸ್ವಾಮೀಜಿ ಜೊತೆಗಿದ್ದ 6 ಮಂದಿ ಯಲ್ಲಿ ಜಯಂತಿ ನಗರದ ಚೇತನ್ ಎಂಬಾತ ನನ್ನು ಆತನ ಕುಟುಂಬದ ಸದಸ್ಯರೇ ತೆಪ್ಪದ ಮೂಲಕ ರಕ್ಷಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಜಲಾಶಯಕ್ಕೆ ಒಳಹರಿವು ಹೆಚ್ಚಾ ಗುತ್ತಿದ್ದು, ಅಣೆಕಟ್ಟೆಯಿಂದ ಮತ್ತಷ್ಟು ನೀರನ್ನು ನದಿಗೆ ಹರಿಸುವ ಸಂಭವ ಹೆಚ್ಚಾಗಿ ರುವುದರಿಂದ ಜಿಲ್ಲಾಡಳಿತಕ್ಕೆ ಇದೊಂದು ತಲೆನೋವಾಗಿ ಪರಿಣಮಿಸಿದೆ.

ಪಶ್ಚಿಮ ವಾಹಿನಿಯ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗಿದ್ದರಿಂದ ನದಿ ದಡದಲ್ಲೇ ಭಕ್ತರು ಪೂಜೆ ಮಾಡುತ್ತಿ ದ್ದಾರೆ. ಅಷ್ಟೇ ಅಲ್ಲದೇ ಪಕ್ಷಿಪ್ರಿಯರ ತಾಣವಾದ ವಿಶ್ವವಿಖ್ಯಾತ ರಂಗನತಿಟ್ಟು ಪಕ್ಷಿಧಾಮ ಕೂಡ ಜಲಾವೃತವಾಗಿದೆ. ಹಾಗಾಗಿ ಪಕ್ಷಿಧಾಮಕ್ಕೆ ಡಿಸಿಎಫ್ ಸಿದ್ದರಾಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Translate »