ದಸರಾಗೆ ಬಂದ `ಲಕ್ಷ್ಮಿ’ಗೆ ಪುತ್ರ ಪ್ರಾಪ್ತಿ
ಮೈಸೂರು

ದಸರಾಗೆ ಬಂದ `ಲಕ್ಷ್ಮಿ’ಗೆ ಪುತ್ರ ಪ್ರಾಪ್ತಿ

September 14, 2022

ಮೈಸೂರು, ಸೆ.13- ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆಯ 22 ವರ್ಷದ ಹೆಣ್ಣಾನೆ `ಲಕ್ಷ್ಮಿ’ ಅರಮನೆ ಅಂಗಳದಲ್ಲಿ ಮಂಗಳವಾರ ರಾತ್ರಿ 8.10ಕ್ಕೆ ಗಂಡು ಮರಿಗೆ ಜನ್ಮ ನೀಡಿದೆ. ದಸರಾ ಮಹೋತ್ಸವದ ಸಂದರ್ಭದಲ್ಲಿ ಅರಮನೆ ಅಂಗಳದಲ್ಲಿ ದಸರಾ ಆನೆಯೊಂದು ಮರಿಗೆ ಜನ್ಮ ನೀಡಿದ ಎರಡನೇ ಪ್ರಸಂಗ ಇದಾ ಗಿದ್ದು, ರಾಜವಂಶಸ್ಥರು ಸೇರಿದಂತೆ ಗಜಪಡೆಯ ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಅಧಿಕಾರಿಗಳಲ್ಲಿ ಸಂತಸ ಮೂಡಿದೆ. ರಾಜವಂಶಸ್ಥ ಶೀಕಂಠದತ್ತ ನರಸಿಂಹರಾಜ ಒಡೆಯರ್ ಸಹೋದರಿ ವಿಶಾಲಾಕ್ಷಿ ದೇವಿಯವರು ಸಾಕಿ ಬೆಳೆಸಿದ್ದ `ಲಕ್ಷ್ಮಿ’ ಇದೀಗ ಅರಮನೆ ಅಂಗಳದಲ್ಲೇ ತನ್ನ ಎರಡನೇ ಮರಿಗೆ ಜನ್ಮ ನೀಡಿರುವುದು ವಿಶೇಷವಾಗಿದೆ. ಈ ಹಿಂದೆ ತಾಯಿಯಿಂದ ಬೇರ್ಪಟ್ಟ ಮರಿಯನ್ನು ಅರಣ್ಯ ಇಲಾಖೆ ಒಪ್ಪಿಗೆ ಮೇರೆಗೆ ಬಂಡೀಪುರ ಕಾಡಂಚಿನ ತಮ್ಮ ರೆಸಾರ್ಟ್‍ನಲ್ಲಿ ಸಾಕಿ ಸಲಹಿದ್ದ ವಿಶಾಲಾಕ್ಷಿ ದೇವಿಯವರು, ನಂತರ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಇದನ್ನು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ್ದರು. ಮನೆ ಮಗಳಂತೆ ಸಾಕಿದ್ದ `ಲಕ್ಷ್ಮಿ’ಯನ್ನು ನೋಡಲು ವಿಶಾಲಾಕ್ಷಿ ದೇವಿಯವರ ಮಕ್ಕಳು ರಾಂಪುರ ಕ್ಯಾಂಪ್‍ಗೆ ತೆರಳಿ, ಈಕೆಗೆ ಕಬ್ಬು-ಬೆಲ್ಲ ನೀಡಿ ಉಪಚರಿಸುವುದನ್ನು ಇಂದಿಗೂ ರೂಢಿಸಿಕೊಂಡಿದ್ದಾರೆ.

ಮೊದಲ ಬಾರಿಗೆ ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು 2017ರಲ್ಲಿ `ಲಕ್ಷ್ಮಿ’ಯನ್ನು ಕರೆತರಲಾಗಿತ್ತು. ಆದರೆ ಸಿಡಿಮದ್ದು ತಾಲೀಮು ವೇಳೆ ಬೆದರಿದ್ದರಿಂದ ಆ ವರ್ಷ ಜಂಬೂಸವಾರಿಯಲ್ಲಿ ಭಾಗಿಯಾಗಲು ಸಾಧ್ಯವಾಗದೆ, ಅರಮನೆ ಅಂಗಳದಲ್ಲೇ ಉಳಿಯ ಬೇಕಾಯ್ತು. ಇದೀಗ 2ನೇ ಬಾರಿಗೆ `ಲಕ್ಷ್ಮಿ’ಯನ್ನು ಆ.7ರಂದು ಮೊದಲ ತಂಡದಲ್ಲೇ ಕರೆತರಲಾಗಿತ್ತು. ಅಂದಿನಿಂದ ಈವರೆಗೂ ತಾಲೀಮಿನಲ್ಲಿ ಭಾಗಿಯಾಗಿತ್ತು. ಆ ವೇಳೆ ಇತರೆ ಆನೆಗಳಂತೆ ಸಹಜವಾಗಿತ್ತು. ಆದರೆ ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ `ಲಕ್ಷ್ಮಿ’ ವರ್ತನೆಯಲ್ಲಿ ಕೊಂಚ ಬದಲಾವಣೆ ಕಂಡುಬಂದಿದೆ. ಇದನ್ನು ಗಮನಿಸಿದ ಮಾವುತರು, ವೈದ್ಯರ ಗಮನಕ್ಕೆ ತಂದಿದ್ದಾರೆ. ನಂತರ ವೈದ್ಯರು ಪರೀಕ್ಷೆ ಮಾಡಿದಾಗ ಲಕ್ಷ್ಮಿ ತುಂಬು ಗರ್ಭಿಣಿಯಾಗಿದ್ದು ಆಕೆಗೆ ಪ್ರಸವದ ನೋವು ಕಾಣಿಸಿಕೊಂಡಿರುವುದು ಖಚಿತವಾಗಿದೆ. ಕೂಡಲೇ ಮುಂಜಾಗ್ರತಾ ಕ್ರಮವಾಗಿ ಆಕೆಯನ್ನು ಬ್ರಹ್ಮಪುರಿ ಗೇಟ್ ಸಮೀಪ ಅಡುಗೆ ತಯಾರಿಸುವ ಸ್ಥಳದಲ್ಲಿ ನಿಗಾ ವಹಿಸಲಾಗಿತ್ತು. ರಾತ್ರಿ 8.10ರ ವೇಳೆಗೆ `ಲಕ್ಷ್ಮಿ’ ಗಂಡುಮರಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮರಿ ಆರೋಗ್ಯವಾಗಿವೆ.

ವಿಷಯ ತಿಳಿದು ಡಿಸಿಎಫ್‍ಓ ಡಾ.ವಿ.ಕರಿಕಾಳನ್, ಪಶುವೈದ್ಯ ಡಾ.ಮುಜೀಬ್, ಆರ್‍ಎಫ್‍ಓ ಸಂತೋಷ್ ಹೂಗಾರ್ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಗಜಪಡೆಯ ಹಿರಿಯ ಮಾವುತರ ಸಹಕಾರದೊಂದಿಗೆ `ಲಕ್ಷ್ಮಿ ಹಾಗೂ ಮರಿ’ಯ ಆರೈಕೆ ಮಾಡಲಾಗುತ್ತಿದ್ದು, ಅವುಗಳ ಸಮೀಪಕ್ಕೆ ಯಾರೂ ಹೋಗದಂತೆ ಎಚ್ಚರವಹಿಸಲಾಗಿದೆ. `ಲಕ್ಷ್ಮಿ’ ತನ್ನ ಕರುಳಕುಡಿಗೆ ಹಾಲುಣಿಸಿ ತಾಯ್ತನದ ಸುಖದಲ್ಲಿ ಮಿಂದೇಳುತ್ತಿದ್ದಾಳೆ.
ಈ ಹಿಂದೆ ದುರ್ಗಾಪರಮೇಶ್ವರಿ, ವಿಜಯ, ಚೈತ್ರಾ ಜಂಬೂಸವಾರಿಯಲ್ಲಿ ಪಾಲ್ಗೊಂಡು ಕ್ಯಾಂಪ್‍ಗೆ ವಾಪಸ್ಸಾದ 2-3 ದಿನದಲ್ಲಿ ಮರಿಗೆ ಜನ್ಮ ನೀಡಿದ್ದವು. ಆದರೆ ದಸರಾ ಆರಂಭದ ಹೊಸ್ತಿಲಲ್ಲಿ ಅರಮನೆ ಅಂಗಳದಲ್ಲೇ ಮರಿಗೆ ಜನ್ಮ ನೀಡಿದ ಎರಡನೇ ಪ್ರಸಂಗ ಇದಾಗಿದ್ದು, 15 ವರ್ಷದ ಹಿಂದೆ `ಸರಳ’ ಹೆಣ್ಣು ಮರಿಗೆ ಜನ್ಮ ನೀಡಿದ್ದಳು. ಅದಕ್ಕೆ `ಚಾಮುಂಡಿ’ ಎಂದು ಹೆಸರಿಟ್ಟಿದ್ದನ್ನು ಸ್ಮರಿಸಬಹುದು.

ಮಾವುತರಿಗೆ ತಿಳಿದಿರಲಿಲ್ಲ: ಸಾಮಾನ್ಯವಾಗಿ ಗರ್ಭಿಣಿ ಆನೆಯನ್ನು ದಸರಾಗೆ ಕರೆತರಲು ಅರಣ್ಯ ಅಧಿಕಾರಿಗಳು ಒಪ್ಪುವುದಿಲ್ಲ. ಈ ಬಾರಿ 2ನೇ ತಂಡದಲ್ಲಿ ಆಯ್ಕೆಯಾಗಿದ್ದ `ಕುಂತಿ’ ಗರ್ಭಿಣಿ ಎನ್ನುವುದು ಸೆ.5ರಂದು ತಿಳಿದಿದ್ದರಿಂದ ಆಕೆಯ ಬದಲಾಗಿ `ಸುಗ್ರೀವ’ನನ್ನು ಕರೆತರಲಾಗಿದೆ. ಆದರೆ `ಲಕ್ಷ್ಮಿ’ ಗರ್ಭಿಣಿ ಎನ್ನುವುದು ಅಧಿಕಾರಿಗಳು, ಮಾವುತರು ಹಾಗೂ ಕಾವಾಡಿಗಳಿಗೆ ತಿಳಿದಿರಲಿಲ್ಲ. ಆನೆಯ ವರ್ತನೆ ಸಹಜವಾಗಿದ್ದ ಕಾರಣ ಎಲ್ಲಾ ಆನೆಗಳಂತೆ ಇದಕ್ಕೂ ಸಾಮಾನ್ಯ ಆರೋಗ್ಯ ತಪಾಸಣೆಯನ್ನಷ್ಟೇ ಮಾಡಲಾಗಿತ್ತು. ಸೂಕ್ಷ್ಮ ತಿಳಿದಿದ್ದರೆ ಅಗತ್ಯ ತಪಾಸಣೆ ನಡೆಸಲಾಗುತ್ತಿತ್ತು. ರಾಂಪುರ ಶಿಬಿರದಲ್ಲಿರುವ ಜಯಪ್ರಕಾಶ್ ಮಿಲನ ದಿಂದ ಲಕ್ಷ್ಮಿಗೆ ಈ ಮರಿ ಜನಿಸಿರಬಹುದೆಂದು ಹೇಳಲಾಗುತ್ತಿದೆ. ಈಗಾಗಲೇ ಅರಮನೆ ಮಂಡಳಿ ಈ ಮರಿಗೆ `ಗಣಪತಿ’ ಎಂದು ನಾಮಕರಣ ಮಾಡುವ ಚಿಂತನೆಯಲ್ಲಿದೆ.

Translate »