ಭೂ ಸುಧಾರಣೆ ಕಾಯ್ದೆ ತಿದ್ದುಪಡಿ: ಮೌನ ತಾಳಿರುವ ವಿರೋಧ ಪಕ್ಷ
ಮೈಸೂರು

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ: ಮೌನ ತಾಳಿರುವ ವಿರೋಧ ಪಕ್ಷ

June 19, 2020

ಮೈಸೂರು, ಜೂ.18(ಎಂಟಿವೈ)- ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ರೈತ ವಿರೋಧಿ ಅಂಶ ಸೇರಿಸಿರುವ ಬಗ್ಗೆ ವಿರೋಧ ಪಕ್ಷಗಳು ಬಲವಾಗಿ ಖಂಡಿಸದೇ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಕೂಡಲೇ ವಿರೋಧ ಪಕ್ಷಗಳು ಮೌನ ಮುರಿದು ತಮ್ಮ ನಿಲುವು ಪ್ರಕಟಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕುರಿತು ವಿರೋಧ ಪಕ್ಷಗಳು ಈವರೆಗೂ ತುಟಿ ಬಿಚ್ಚಿಲ್ಲ. ಆಡಳಿತ ಮತ್ತು ವಿರೋಧ ಪಕ್ಷಗಳು ಒಳಒಪ್ಪಂದ ಮಾಡಿಕೊಂಡು ಕಾಯ್ದೆಗೆ ತಿದ್ದುಪಡಿ ಮಾಡಿರಬಹುದು ಎಂಬ ಸಂಶಯ ಕಾಡುತ್ತಿದೆ. ಈ ತಿದ್ದುಪಡಿಯಿಂದ ಕೃಷಿ ಕ್ಷೇತ್ರಕ್ಕೆ ಭಾರಿ ಹೊಡೆತ ಬೀಳಲಿದೆ. ಸಣ್ಣ ರೈತರು ಸುಲಭವಾಗಿ ಭೂಮಿ ಕಳೆದುಕೊಳ್ಳಲಿದ್ದಾರೆ ಎಂದು ವಿಷಾದಿಸಿದರು.

ಮಣ್ಣಿನ ಮಕ್ಕಳು ಮಾತಾಡಲಿ: ಕೆಪಿಸಿಸಿ ನಿಯೋ ಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿದ್ದುಪಡಿ ಕಾಯ್ದೆ ಬಗ್ಗೆ ತುಟಿ ಬಿಚ್ಚಿಲ್ಲ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಯೇ ಹೊರತು, ಅವರೇ ಹೇಳಿಕೊಂಡಂತೆ ಬೀದಿಗಿಳಿದು ಹೋರಾಟ ನಡೆಸಿಲ್ಲ. ರಾಜ್ಯಸಭೆಗೆ ಈಗಷ್ಟೇ ಆಯ್ಕೆ ಯಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಾಯ್ದೆ ತಿದ್ದುಪಡಿ ಬಗ್ಗೆ ಇದುವರೆಗೂ ಮಾತಾಡಿಲ್ಲ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರೂ ಕಾಯ್ದೆ ಬಗ್ಗೆ ಎಲ್ಲಿಯೂ ಬಾಯಿ ಬಿಟ್ಟಿಲ್ಲ. ವಿರೋಧ ಪಕ್ಷಗಳ ಈ ನಡೆ ಅನುಮಾನಗಳಿಗೆ ಕಾರಣವಾಗಿದೆ. ಸಾಮಾಜಿಕ ನ್ಯಾಯದ ಪರವಾಗಿರುವ ಹಿರಿಯ ರಾಜಕಾರಣಿ ವಿ. ಶ್ರೀನಿವಾಸಪ್ರಸಾದ್ ಮತ್ತು ಅರಸು ಅವರ ಕಟ್ಟಾ ಅಭಿ ಮಾನಿ ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಸಹ ಮೌನವಾಗಿರುವುದು ವಿಷಾದನೀಯ ಎಂದರು.

ವೆಬಿನಾರ್ ಮೂಲಕ ಚರ್ಚೆ: ಕರ್ನಾಟಕ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿ ಗಳಿಂದ ಉಂಟಾಗಿರುವ ಪರಿಣಾಮಗಳ ಬಗ್ಗೆ ಸಾರ್ವ ಜನಿಕರಿಗೆ ಅರಿವು ಮೂಡಿಸಲು ಜೂ.20ರಂದು ವೆಬಿ ನಾರ್ ಮೂಲಕ ರಾಜ್ಯ ಮಟ್ಟದ ಸಂವಾದ ಆಯೋಜಿ ಸಲಾಗಿದೆ. ಚಿಂತಕ ಪೆÇ್ರ.ರವಿವರ್ಮ ಕುಮಾರ್ ಭೂ ಸುಧಾರಣೆ ಕಾಯ್ದೆ-ಕಾಯ್ದೆ ತಿದ್ದುಪಡಿಗಳು-ಪರಿಣಾಮ ಬಗ್ಗೆ ಮಾತನಾಡಲಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದು ಪಡಿಗಳು-ಕೃಷಿ ಉತ್ಪಾದನೆ ಮತ್ತು ಕೃಷಿ ಮಾರುಕಟ್ಟೆ ಮೇಲಾಗುವ ಪರಿಣಾಮದ ಕುರಿತು ಜಸ್ಟಿಸ್ ಎಚ್.ಎನ್. ನಾಗಮೋಹನ್‍ದಾಸ್ ವಿಷಯ ಮಂಡಿಸಲಿದ್ದಾರೆ.

ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಹಾಗೂ ಕೃಷಿ ಉತ್ಪನ್ನಗಳ ಬಗ್ಗೆ ಚಿಂತಕ ಶಿವಸುಂದರ್, ವಿದ್ಯುತ್ ಕಾಯ್ದೆ ತಿದ್ದುಪಡಿ-ನೀರಾವರಿ ಪಂಪ್‍ಸೆಟ್ ನಿಯಮ ಗಳ ಕುರಿತು ಜಿ.ಸಿ.ಭೈರಾರೆಡ್ಡಿ ಮಾತನಾಡಿದರೆ, ಈ ಸರಣಿ ತಿದ್ದುಪಡಿಗಳು, ಕಾನೂನುಗಳ ಹಿಂದಿರುವ ರಾಜಕಾರಣ-ಚಳವಳಿ, ಮುಂದೆ ಬರಲಿರುವ ಸವಾಲು ಗಳ ಕುರಿತು ಚಿಂತಕ ಸಿದ್ದನಗೌಡ ಪಾಟೀಲ್ ವಿಷಯ ಮಂಡಿಸುವರು ಎಂದರು. ಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ರಾಜ್ಯ ಮುಖಂಡ ಹೆಚ್.ಸಿ.ಲೋಕೇಶ್ ರಾಜೇಅರಸ್, ವಿಭಾಗೀಯ ಸಂಘಟನಾ ಕಾರ್ಯ ದರ್ಶಿ ಸರಗೂರು ನಟರಾಜ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಮೈಸೂರು ತಾಲೂಕು ಅಧ್ಯಕ್ಷ ಪಿ.ಮರಂ ಕಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಜಿಲ್ಲಾ ಮಹಿಳಾ ಅಧ್ಯಕ್ಷೆ ನೇತ್ರಾವತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಂದ್ರೇಗೌಡ ಇದ್ದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಖಂಡಿಸಿ ನಾಳೆ ರೈತರಿಂದ ಹೆದ್ದಾರಿ ತಡೆ
ಮೈಸೂರು, ಜೂ.18(ಎಂಟಿವೈ)- ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಜೂ.20ರಂದು ರಾಜ್ಯಾದ್ಯಂತ ಹೆದ್ದಾರಿ ತಡೆ ಚಳವಳಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಟಿ.ರಾಮೇಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರ ಬುಡಮೇಲು ಮಾಡುತ್ತಿವೆ. ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಹಾಪ್‍ಕಾಮ್ಸ್ ಕಾಯ್ದೆಗಳ ತಿದ್ದುಪಡಿ, ಎಂಎಸ್‍ಪಿ ನೀತಿಗಳು, ಹೊಸ ವಿದ್ಯುತ್ ನೀತಿ, ಪ್ರಸ್ತಾಪದಲ್ಲಿರುವ ಹೊಸ ಬೀಜ ನೀತಿಗಳ ಬದಲಾವಣೆ ಮೂಲಕ ಕೃಷಿಕ್ಷೇತ್ರವನ್ನು ಪೂರ್ಣ ಕಾಪೆರ್Çರೇಟ್ ಕಂಪನಿಗಳಿಗೆ ಒತ್ತೆ ಇಡಲಿವೆ. ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಜೂ.20 ರಂದು ರಾಜ್ಯಾದ್ಯಂತ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಲಾಗು ವುದು. ಅಂದು ಬೆಳಗ್ಗೆ 11.30ಕ್ಕೆ ಮೈಸೂರು-ಬೆಂಗಳೂರು ಹೆದ್ದಾರಿಯ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದರು. ರಾಜ್ಯ ಸಂಚಾಲಕ ಎನ್.ನಂಜೇಗೌಡ ಮಾತನಾಡಿ, ಭೂ ಸುಧಾರಣೆ ಕಾಯ್ದೆಯ ಜೀವಾಳವಾಗಿರುವ 79 ಎ ಮತ್ತು ಬಿ ಕಲಂಗಳನ್ನು ಸರ್ಕಾರ ರದ್ದುಪಡಿಸಿದೆ. ಪರಿಣಾಮ ಕೃಷಿ ಭೂಮಿಗಳು ಸುಲಭವಾಗಿ ಲಾಭಕೋರ ಹಣವಂತರ ಪಾಲಾಗಲಿವೆ. ಇದು ಸಣ್ಣ ಕೃಷಿಕರನ್ನು ಒಕ್ಕಲೆಬ್ಬಿಸುವ ಹುನ್ನಾರವಾಗಿದೆ. ಮುಂದಿನ ದಿನಗಳಲ್ಲಿ ದೇಶದ ಆಹಾರ ಸ್ವಾವಲಂಬನೆ ಮತ್ತು ಆಹಾರ ಸಾರ್ವಭೌಮತೆ ಇಲ್ಲವಾಗಲಿದೆ. ಆದ್ದರಿಂದ ರೈತರ ಪಾಲಿನ ಕರಾಳ ಕಾಯ್ದೆಗಳ ವಿರುದ್ಧ ಹೋರಾಟಕ್ಕೆ ಸಾರ್ವಜನಿಕರು ಸಹಕರಿಸ ಬೇಕು ಎಂದು ಮನವಿ ಮಾಡಿದರು. ಸಂಘದ ಸರಗೂರು ತಾಲೂಕು ಅಧ್ಯಕ್ಷ ನಾಗಣ್ಣ, ಜಿಲ್ಲಾ ಸಂಚಾಲಕ ಮಹದೇವು, ತಿ.ನರಸೀಪುರ ತಾಲೂಕು ಅಧ್ಯಕ್ಷ ಪ್ರದೀಪ್, ಮಾಧ್ಯಮ ಕಾರ್ಯದರ್ಶಿ ಮಂಜು ಕಿರಣ್, ಎಸ್.ರಘು ಹಿಮ್ಮಾವು ಸುದ್ದಿಗೋಷ್ಠಿಯಲ್ಲಿದ್ದರು.

Translate »