ವಿಶ್ವನಾಥ್‍ಗೆ ಟಿಕೆಟ್ ತಪ್ಪಿಸಲು ನಾನೇನು ಬಿಜೆಪಿ ಹೈಕಮಾಂಡಾ: ಸಿದ್ದರಾಮಯ್ಯ
ಮೈಸೂರು

ವಿಶ್ವನಾಥ್‍ಗೆ ಟಿಕೆಟ್ ತಪ್ಪಿಸಲು ನಾನೇನು ಬಿಜೆಪಿ ಹೈಕಮಾಂಡಾ: ಸಿದ್ದರಾಮಯ್ಯ

June 19, 2020

ಬೆಂಗಳೂರು,ಜೂ.18-ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರಿಗೆ ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ತಪ್ಪಿ ಸಲು ನಾನು ಬಿಜೆಪಿ ಹೈಕಮಾಂಡಾ, ಅವನಿಗೆ ಬುದ್ಧಿ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದ ರಾಮಯ್ಯ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಟಿಕೆಟ್ ಕೈ ತಪ್ಪಲು ಸಿದ್ದರಾಮಯ್ಯ, ಕುಮಾರಸ್ವಾಮಿ ಕಾರಣ ಎಂಬ ವಿಶ್ವನಾಥ್ ಅವರ ಮಾತುಗಳಿಗೆ ಪ್ರತಿಕ್ರಿಯಿ ಸಿದ ಸಿದ್ದರಾಮಯ್ಯ, ಬಿಜೆಪಿಗೂ ನಾನೇ ಹೈಕಮಾಂಡಾ, ಅವರಿಗೇನೂ ಬುದ್ಧಿ ಇಲ್ಲವೇ ಎಂದು ಪ್ರಶ್ನಿಸಿದರು.

ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ನನ್ನ ಮತ್ತು ಡಿಕೆ ಶಿವಕುಮಾರ್ ಅವರ ಅಭಿಪ್ರಾಯ ಕೇಳಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಅಲ್ಲಿ ಅನುಭವಸ್ಥರು ಇರಬೇಕು. ಹಾಗಾಗಿ ಹಿರಿಯರನ್ನು ಪರಿಗಣಿಸಿದೆ. ಬಿ.ಕೆ. ಹರಿಪ್ರಸಾದ್ ಹಾಗೂ ನಸೀರ್ ಅಹ್ಮದ್ ಇಬ್ಬರೂ ಒಮ್ಮತದ ಅಭ್ಯರ್ಥಿಗಳು ಎಂದು ಸಿದ್ದರಾಮಯ್ಯ ಹೇಳಿದರು.

ಈ ಎರಡು ಸ್ಥಾನಗಳಿಗೆ ಸುಮಾರು 270 ಅರ್ಜಿಗಳು ಬಂದಿದ್ದವು. ಆ ಎಲ್ಲವನ್ನೂ ಹೈಕಮಾಂಡ್‍ಗೆ ಕಳುಹಿಸ ಲಾಗಿತ್ತು. ಅಂತಿಮವಾಗಿ ಹೈಕಮಾಂಡ್ ಈ ಇಬ್ಬರನ್ನು ಆಯ್ಕೆಮಾಡಿದೆ ಎಂದು ತಿಳಿಸಿದರು.

ಮತ್ತೊಂದೆಡೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಹೆಚ್.ವಿಶ್ವನಾಥ್ ಯಾವ ಸಂದರ್ಭದಲ್ಲಿ ಯಾವ ರೀತಿ ಹೇಳಿಕೆ ಕೊಡುತ್ತಾರೆಯೋ ಹೇಗೆ ನಡೆದು ಕೊಳ್ಳುತ್ತಾರೆಯೋ ಯಾರಿಗೂ ಅರ್ಥವಾಗುವುದಿಲ್ಲ. ಅವರು ಮೇಲ್ಮನೆ ಪ್ರವೇಶಿಸದಂತೆ ನಾನು ತಡೆಯಲು ಸಾಧ್ಯವೆ? ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಹಿರಿಯ ಅನುಭವಿ ರಾಜ ಕಾರಣಿ ವಿಶ್ವನಾಥ್. ಕುಮಾರಸ್ವಾಮಿಯಿಂದ ಟಿಕೆಟ್ ತಪ್ಪಿತು ಎಂದು ಅವರು ಯಾವ ಆಧಾರದ ಮೇಲೆ ಹೇಳಿಕೆ ನೀಡಿದ್ದಾರೋ ನನಗಂತೂ ಗೊತ್ತಿಲ್ಲ. ಬಿಜೆಪಿ ಪಕ್ಷದ ಮೇಲೂ ನಾನು ಪ್ರಭಾವ ಬೀರುತ್ತೇನೆ ಎಂದು ಅವರಿಗನಿಸಿದ್ದರೆ ವಿಶ್ವನಾಥ್ ಅವರಿಗೆ ಧನ್ಯವಾದ ಸಲ್ಲಿಸಲೇಬೇಕು ಎಂದು ವ್ಯಂಗ್ಯವಾಡಿದರು.

ವಿಶ್ವನಾಥ್ ಅವರ ಬಗ್ಗೆ ಮಾತನಾಡಲು ಅಥವಾ ಯೋಚನೆ ಮಾಡಲು ತಮಗೆ ಆಸಕ್ತಿಯಿಲ್ಲ. ಕುಮಾರಸ್ವಾಮಿ ಆಡಳಿತ ರಾಕ್ಷಸೀ ಆಡಳಿತ ಎಂದಿದ್ದರು. ಈಗ ಕುಮಾರಸ್ವಾಮಿ ಸರ್ಕಾರ ಮುಂದುವರೆದಿದ್ದರೆ ಈವರೆಗೆ 50 ಸಾವಿರ ಜನ ಸಾವನ್ನಪ್ಪುತ್ತಿದ್ದರು ಎಂದು ಬಾಲಿಶ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು.

ಇಂತಹವರಿಂದ ತಮಗೆ ಸರ್ಟಿಫಿಕೇಟ್ ಅವಶ್ಯಕತೆ ಯಿಲ್ಲ. ಋಣಮುಕ್ತ ಕಾಯಿದೆ, ಸಾಲಮನ್ನಾ ಸೇರಿದಂತೆ ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿ ಸಿರುವ ತೃಪ್ತಿ ತಮಗಿದೆ. ಇಂದಲ್ಲ ನಾಳೆ ತಾವು ಮಾಡಿದ ಕೆಲಸಗಳನ್ನು ಜನರು ನೆನಪಿಸಿಕೊಳ್ಳುವ ಕಾಲವೇನು ದೂರಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

Translate »