ಮೈಸೂರು,ಅ.21(ಆರ್‍ಕೆಬಿ)-ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲು ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಬೆಂಗಳೂರು ಫ್ರೀಡಂ ಪಾರ್ಕ್‍ನಲ್ಲಿ ಅಹೋರಾತ್ರಿ ಹೋರಾಟ ನಡೆಸುತ್ತಿರುವುದನ್ನು ಬೆಂಬಲಿಸಿ ಮೈಸೂರಲ್ಲಿಯೂ ನಾಯಕರ ಪಡೆಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಹುಣಸೂರು ರಸ್ತೆಯಲ್ಲಿರುವ ಮಹರ್ಷಿ ವಾಲ್ಮೀಕಿ ರಸ್ತೆಯ ನಾಮಫಲಕದ ಬಳಿ ಜಮಾವಣೆ ಗೊಂಡ ಪ್ರತಿಭಟನಕಾರರು, ಪರಿಶಿಷ್ಟ ಪಂಗಡದವರು ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದು, ಸಂವಿಧಾನದ ಮೂಲ ಆಶಯದಂತೆ ಸರ್ವರಿಗೂ ಸಮಪಾಲು, ಸಮಬಾಳು ಅಡಿಯಲ್ಲಿ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣವೇ ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ನೀಡುವುದಾಗಿ ಹೇಳಿದ್ದನ್ನು ಮರೆತಿದ್ದಾರೆ. ಕೂಡಲೇ ಮೀಸಲಾತಿ ಹೆಚ್ಚಳ ಮಾಡದಿದ್ದರೆ ಪ್ರತಿಭಟನೆ ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮೈಸೂರು ನಾಯಕರ ಪಡೆ ಅಧ್ಯಕ್ಷ ಪಡುವಾರಹಳ್ಳಿ ರಾಮಕೃಷ್ಣ ನೇತೃತ್ವದ ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯ ಲೋಕೇಶ್ ಪಿಯಾ, ಕ್ಯಾತನಹಳ್ಳಿ ಸಿ.ನಾಗರಾಜ್, ವಿನೋದ್ ನಾಗವಾಲ, ತಿಮ್ಮನಾಯಕ, ಗೋಪಿ, ರವಿನಾಯಕ, ನಾರಾಯಣ ಸ್ವಾಮಿ, ಅಜಯ್, ಶಿವಣ್ಣ, ರಾಮನಾಯಕ, ರಾಮಣ್ಣ, ಗೋವಿಂದರಾಜು ಇನ್ನಿತರರಿದ್ದರು.