ಪ್ರಾಣಿ-ಪಕ್ಷಿಗಳ ಹಿತದೃಷ್ಟಿಯಿಂದ ಥಂಡಿ ಸಡಕ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ: ನಾಗರಿಕರ ಆಗ್ರಹ
ಮೈಸೂರು

ಪ್ರಾಣಿ-ಪಕ್ಷಿಗಳ ಹಿತದೃಷ್ಟಿಯಿಂದ ಥಂಡಿ ಸಡಕ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ: ನಾಗರಿಕರ ಆಗ್ರಹ

October 22, 2020

ಮೈಸೂರು, ಅ.21(ಎಂಟಿವೈ)- ಪ್ರಾಣಿ-ಪಕ್ಷಿಗಳ ಹಿತದೃಷ್ಟಿಯಿಂದ ಮೈಸೂರು ಮೃಗಾಲಯ ಹಾಗೂ ಕಾರಂಜಿ ಕೆರೆ ನಡುವೆ ಇರುವ ಥಂಡಿ ಸಡಕ್‍ನಲ್ಲಿ(ರಸ್ತೆಯಲ್ಲಿ) ವಾಹನ ಸಂಚಾರ ನಿರ್ಬಂಧಿಸುವಂತೆ ಆಗ್ರಹಿಸಿ ಮೈಸೂರು ಪ್ರಜ್ಞಾವಂತ ನಾಗರಿಕರ ವೇದಿಕೆ ಸದಸ್ಯರು ಪ್ರತಿಭಟಿಸಿದರು. `ವನ್ಯಪ್ರಾಣಿ ಪಕ್ಷಿಸಂಕುಲ ಉಳಿಸಿ’ ಘೋಷಣಾ ಫಲಕ ಪ್ರದರ್ಶಿಸಿ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸುವ ಮೂಲಕ ಪ್ರಾಣಿ-ಪಕ್ಷಿಗಳ ಸಂರಕ್ಷಣೆಗೆ ಸಹಕರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಯುವ ಮುಖಂಡ ಎನ್.ಎಂ.ನವೀನ್‍ಕುಮಾರ್ ಮಾತನಾಡಿ, ಮೈಸೂರು ಮಹಾರಾಜರು ದೂರದೃಷ್ಟಿಯಿಂದ ನೀಡಿರುವ ಮಹೋನ್ನತ ಕೊಡುಗೆಯಿಂದಾಗಿ ಮೈಸೂರು ನಗರ ಸಾಂಸ್ಕೃತಿಕ ರಾಜಧಾನಿಯಾಗಿಯೂ, ಸ್ವಚ್ಛನಗರಿಯಾಗಿಯೂ ಗುರುತಿಸಿಕೊಂಡಿದೆ. ಅದರಿಂದಲೇ ವಿಶ್ವದೆಲ್ಲೆಡೆ ಮನ್ನಣೆಗೆ ಸಾಧ್ಯವಾಗಿದೆ. 1892ರಲ್ಲಿ ಸ್ಥಾಪಿತಗೊಂಡ ಮೈಸೂರು ಮೃಗಾಲಯದಲ್ಲಿ ಪ್ರಸ್ತುತ 1320ಕ್ಕೂ ಹೆಚ್ಚು ಪ್ರಾಣಿ ಪಕ್ಷಿಗಳಿವೆ. ಮೃಗಾಲಯ ಮತ್ತು ಕಾರಂಜಿಕೆರೆಗೆ ಭೇಟಿ ನೀಡುವ ಪ್ರವಾಸಿಗರಿಂದಲೇ ಮೈಸೂರು ಪ್ರವಾಸೋದ್ಯಮಕ್ಕೆ ಹೆಚ್ಚು ಆದಾಯ ಸಂಗ್ರಹವಾಗುತ್ತಿದೆ. ಆದರೆ, ಥಂಡಿ ಸಡಕ್ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿರುವುದರಿಂದ ವಾಹನಗಳ ಹೊಗೆ, ಶಬ್ದದಿಂದ ಮೃಗಾಲಯ, ಕಾರಂಜಿಕೆರೆಯಲ್ಲಿರುವ ಪ್ರಾಣಿ-ಪಕ್ಷಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.

ಸುಂದರ, ನೈಸರ್ಗಿಕ ಕಾರಂಜಿಕೆರೆಗೆ ವಿವಿಧೆಡೆಯಿಂದ ವಲಸೆ ಪಕ್ಷಿಗಳು ಬಂದು ಸಂತಾನೋತ್ಪತ್ತಿ ಮಾಡುತ್ತವೆ. ಈ ಪಕ್ಷಿಗಳಿಗೆ ವಾಹನ ಸಂಚಾರದಿಂದ ತೊಂದರೆಯಾಗು ತ್ತಿದೆ. ಹಾಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸುವಂತೆ ಮನವಿ ಮಾಡುವೆ ಎಂದರು. ಪ್ರಜ್ಞಾವಂತ ನಾಗರಿಕರ ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಯೋಗೇಶ್ ನಾಯ್ಡು, ನವೀನ್ ಕೆಂಪಿ, ರಾಕೇಶ್ ಕುಂಚಿಟಿಗ, ಸುಚೀಂದ್ರ, ಚಕ್ರಪಾಣಿ, ಶಶಿ ಇನ್ನಿತರರು ಪಾಲ್ಗೊಂಡಿದ್ದರು.

Translate »