ಮೈಸೂರು, ಅ.22(ಪಿಎಂ)- ಮೈಸೂರು ನಗರದ ಬೀದಿದೀಪಗಳಿಗೆ 109.91 ಕೋಟಿ ರೂ. ವೆಚ್ಚದಲ್ಲಿ ಎಲ್‍ಇಡಿ ಬಲ್ಬ್ ಅಳವಡಿಸುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಮುಂದಿನ 10-15 ದಿನಗಳಲ್ಲಿ ಟೆಂಡರ್ ಕರೆಯುವ ಸಾಧ್ಯತೆ ಇದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಗುರುವಾರ ಮಾಧ್ಯಮದ ಜತೆ ಮಾತನಾಡಿದ ಅವರು, ಬೀದಿದೀಪಗಳಿಗೆ ಎಲ್‍ಇಡಿ ಬಲ್ಬ್ ಅಳವಡಿಕೆಯಿಂದ ಯಾವ ರೀತಿ ಸುಧಾರಣೆ ಆಗಲಿದೆ ಎಂಬ ಬಗ್ಗೆ ಮೇಯರ್ ಮತ್ತು ಪಾಲಿಕೆ ಸ್ಥಾಯಿ ಸಮಿತಿಗಳ ಸದಸ್ಯರಿಗೆ ಪಿಪಿಟಿ ಮೂಲಕ ಬುಧವಾರ ಮಾಹಿತಿ ನೀಡಲಾಯಿತು ಎಂದರು.
ಟೆಂಡರ್‍ಗೆ ಹೋಗುವ ಮುನ್ನ ಏನೇನು ಮಾರ್ಪಾಡು ಮಾಡಿಕೊಳ್ಳಬೇಕು ಎಂಬುದನ್ನು ಚರ್ಚಿಸಲು ನಗರಾಭಿವೃದ್ಧಿ ಇಲಾಖೆ ಮುಂದಿನವಾರ ಸಭೆ ಕರೆದಿದೆ. ಹೆಚ್ಚಿನ ಪ್ರಮಾಣದ ಮಾರ್ಪಾಡು ಅಗತ್ಯವಿಲ್ಲವಾದರೆ ಬೇಗ ಟೆಂಡರ್ ಆಗಬಹುದು ಎಂದರು. ಮೈಸೂರಿನ ರಸ್ತೆಗಳ 9 ಸಾವಿರ ವಿದ್ಯುತ್ ದೀಪಗಳು ಸದ್ಯ ಎಲ್‍ಇಡಿಯವೇ ಆಗಿವೆ. ಉಳಿದ 52 ಸಾವಿರ ಬಲ್ಬ್‍ಗಳನ್ನು ಬದಲಿಸಿ ಎಲ್‍ಇಡಿ ಬಲ್ಬ್ ಅಳವಡಿಸಬೇಕಿದೆ ಎಂದು ವಿವರಿಸಿದರು.