ಮೈಸೂರು, ಅ.22(ಆರ್‍ಕೆಬಿ)- ನಿಯಮಬಾಹಿರವಾಗಿ ಕಾರ್ಮಿಕರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ಸಿಲ್ಕ್ ವೀವಿಂಗ್ ಫ್ಯಾಕ್ಟರಿ ಎಂಪ್ಲಾಯೀಸ್ ಯೂನಿಯನ್ ನೇತೃತ್ವದಲ್ಲಿ ಹೊರಗುತ್ತಿಗೆ ಕಾರ್ಮಿಕರು ಮೈಸೂರು ಪುರಭವನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.
ನ್ಯಾಯಕ್ಕಾಗಿ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೇ 39 ಕಾರ್ಮಿಕರನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರತಿಭಟನಾನಿರತರು ಘೋಷಣೆ ಕೂಗಿದರು. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಕಾರ್ಮಿಕರನ್ನು ಸೇವೆಗೆ ಮತ್ತೆ ನೇಮಿಸಿಕೊಳ್ಳು ವಂತೆ ಕೆಎಸ್‍ಐಸಿ ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು. ನ್ಯಾಯ ಸಿಗದಿದ್ದರೆ ಕುಟುಂಬದ ಸದಸ್ಯರ ಜತೆಗೂಡಿ ಕಾರ್ಖಾನೆ ಮುಂದೆ ಮತ್ತು ಮುಖ್ಯಮಂತ್ರಿಗಳು ಆಗಮಿಸುವ ದಿನ ಘೇರಾವ್ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮಾಜಿ ಮೇಯರ್ ಪುರುಷೋತ್ತಮ್, ಕಾಂಗ್ರೆಸ್ ಯುವಮುಖಂಡ ನವೀನ್ ಕುಮಾರ್, ಅನಿಲ್‍ಕುಮಾರ್, ಹೊರಗುತ್ತಿಗೆ ಕಾರ್ಮಿಕರು ಪ್ರತಿಭಟನೆಯಲ್ಲಿದ್ದರು.