ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ  ಕೊರೊನಾ ಮಾರ್ಗಸೂಚಿ ಪಾಲನೆಗೆ ಜನಜಾಗೃತಿ
ಮೈಸೂರು

ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆಗೆ ಜನಜಾಗೃತಿ

March 31, 2021

ಮೈಸೂರು,ಮಾ.30(ಎಸ್‍ಪಿಎನ್)-ಕೋವಿಡ್-19 ಸೋಂಕಿನ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಕೆ.ಆರ್.ವಿಭಾಗದ ಎಸಿಪಿ ಎಂ.ಎಸ್.ಪೂರ್ಣಚಂದ್ರ ತೇಜಸ್ವಿ ನೇತೃತ್ವದಲ್ಲಿ(ಕುವೆಂಪುನಗರ ವ್ಯಾಪ್ತಿ) ಹಾಗೂ ಎನ್.ಆರ್.ವಿಭಾಗದ ಎಸಿಪಿ ಎಂ.ಶಿವಶಂಕರ್ ನೇತೃತ್ವದಲ್ಲಿ(ಹೆಬ್ಬಾಳ ವ್ಯಾಪ್ತಿ) ಪ್ರತ್ಯೇಕವಾಗಿ ಕೋವಿಡ್-19 ಮಾರ್ಗಸೂಚಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಮೈಸೂರು ಕುವೆಂಪುನಗರ ಕಾಂಪೆÉ್ಲಕ್ಸ್ ಬಳಿ ರೋಟರಿ ಶ್ರೀಗಂಧ ಮೈಸೂರು, ಶ್ರೀರಾಂಪುರ ವಿಪ್ರ ಬಳಗ, ಸುಯೋಗ ಆಸ್ಪತ್ರೆ ಹಾಗೂ ಕುವೆಂಪುನಗರ ಪೊಲೀಸರ ಸಹಯೋಗದಲ್ಲಿ ಏರ್ಪಡಿಸಿದ್ದ ಕೋವಿಡ್-19 ಮಾರ್ಗಸೂಚಿ ಜಾಗೃತಿ ಕಾರ್ಯಕ್ರಮದಲ್ಲಿ ಎಸಿಪಿ ಪೂರ್ಣಚಂದ್ರ ತೇಜಸ್ವಿ ಭಾಗವಹಿಸಿ ಮಾತನಾಡಿದರು.

ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯವೂ ಶತಕದ ಗಡಿ ದಾಟುತ್ತಿದೆ. 2ನೇ ಅಲೆ ತೀವ್ರಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಾರ್ಗಸೂಚಿಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಬೇರೆ ರಾಜ್ಯ ಮತ್ತು ವಿದೇಶದಿಂದ ಮೈಸೂರಿಗೆ ಬಂದವರು ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜ್ವರ, ನೆಗಡಿ, ಕೆಮ್ಮು, ಗಂಟಲು ನೋವು ಕಾಣಿಸಿಕೊಂಡ ತಕ್ಷಣ ಸೋಂಕಿತರು ಚಿಕಿತ್ಸೆ ಪಡೆದು ಸೋಂಕು ತಡೆಗೆ ಸಹಕರಿಸಬೇಕು. ಇತ್ತೀಚೆಗೆ ವಿದೇಶಿಯರು ಮೈಸೂರಿನ ವಸತಿ ನಿಲಯ, ಬಾಡಿಗೆ ಮನೆ, ಪಿಜಿಗಳಿಗೆ ಬಂದಿದ್ದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ನಂತರ ಕಾಂಪೆÉ್ಲಕ್ಸ್ ಆವರಣದ ಅಂಗಡಿ ಮಾಲೀಕರು ಮತ್ತು ಪ್ರಮುಖ ರಸ್ತೆಗಳಲ್ಲಿನ ಅಂಗಡಿ, ವಾಣಿಜ್ಯ ಮಳಿಗೆಗಳಿಗೆ ತೆರಳಿದ ಅಧಿಕಾರಿಗಳು, ಅಂಗಡಿ ಮಾಲೀಕರಿಗೆ ಕೊರೊನಾ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು. ಗ್ರಾಹಕರಿಗೆ ಮಾಸ್ಕ್ ಬಳಸುವಂತೆ ಅಂಗಡಿ ಮಾಲೀಕರೇ ಸೂಚಿಸಬೇಕು ಎಂದು ಗಮನ ಸೆಳೆದರು.

ಪೊಲೀಸ್ ಇನ್‍ಸ್ಪೆಕ್ಟರ್ ಜೆ.ಸಿ.ರಾಜು, ಸಬ್ ಇನ್‍ಸ್ಪೆಕ್ಟರ್ ಇರ್ಷಾದ್, ರೋಟರಿ ಶ್ರೀಗಂಧ ಮೈಸೂರು ಸದಸ್ಯ ಶ್ರೀನಿವಾಸ್, ಜಯಪ್ರಕಾಶ್, ಕೃಷ್ಣಮೂರ್ತಿ, ಮಧುಸೂದನ್, ವೆಂಕಟ ಮೂರ್ತಿ, ದೇವಪ್ಪ ಸೇರಿದಂತೆ ಇತರರಿದ್ದರು.

ಹೆಬ್ಬಾಳ್‍ನಲ್ಲೂ ಕೋವಿಡ್ ಜಾಗೃತಿ: ಮೇಟಗಳ್ಳಿ ಠಾಣಾ ವ್ಯಾಪ್ತಿಯ ಹೆಬ್ಬಾಳು ಮುಖ್ಯ ರಸ್ತೆಯಿಂದ ಸೂರ್ಯ ಬೇಕರಿ ವೃತ್ತದವರಿಗೆ ಕೋವಿಡ್-19 ಮಾರ್ಗಸೂಚಿಗಳ ಬಗ್ಗೆ ಎನ್.ಆರ್.ವಿಭಾಗದ ಎಸಿಪಿ ಎಂ.ಶಿವಶಂಕರ್ ಅವರ ನೇತೃತ್ವ ದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಘ-ಸಂಸ್ಥೆಗಳ ಪ್ರಮುಖರು ಜನಜಾಗೃತಿ ಮೂಡಿಸಿದರು.

Translate »