21 ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ; ಕೋವಿಡ್ ಕಫ್ರ್ಯೂ ಅವಧಿಯಲ್ಲಿ ಮರಳಿ ಬಂದ ಮಗ!
ಹಾಸನ

21 ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ; ಕೋವಿಡ್ ಕಫ್ರ್ಯೂ ಅವಧಿಯಲ್ಲಿ ಮರಳಿ ಬಂದ ಮಗ!

April 29, 2021

ಹಾಸನ, ಏ.28- ಕೊರೊನಾ ಮಹಾಮಾರಿಯ ಪರಿಣಾಮ ಈಗ ರಾಜ್ಯ ಸರ್ಕಾರ 14 ದಿನಗಳ ಕೋವಿಡ್ ಕಫ್ರ್ಯೂ ಘೋಷಿಸಿದೆ. ಇದು ದುಡಿಯುವ ವರ್ಗದವರು, ಬಡವರಿಗೆ ಕಷ್ಟ ಎಂಬಂತೆ ಮಾಡಿದ್ದರೆ, ಇಲ್ಲೊಂದು ಕುಟುಂಬದಲ್ಲಿನ ಸಂತಸಕ್ಕೆ ಕಾರಣ ವಾಗಿದೆ. ಕಫ್ರ್ಯೂ ಕ್ರಮಗಳು ಕೆಲವೆಡೆ ಕುಟುಂಬದ ಸದಸ್ಯರನ್ನ ದೂರ ಮಾಡಿದ್ದರೆ, ಹಾಸನ ಜಿಲ್ಲೆಯ ಹೊಂಗೆರೆ ಗ್ರಾಮದಲ್ಲಿ 21 ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ ಮನೆಯ ಹಿರಿಯ ಮಗ ಈಗ ಮನೆಗೆ ಮರಳುವಂತೆ ಮಾಡಿದೆ.

ಹೊಂಗೆರೆಯ ರಾಜೇಗೌಡ-ಅಕ್ಕಯ್ಯಮ್ಮ ದಂಪತಿಯ ಹಿರಿಯ ಪುತ್ರ ಶೇಖರ್ (ಈಗ 37 ವರ್ಷ) 21 ವರ್ಷಗಳ ನಂತರ ಮನೆಗೆ ಮರಳಿದ್ದಾರೆ.
ಗ್ರಾಮದಲ್ಲಿ 7ನೇ ತರಗತಿವರೆಗೂ ಚೆನ್ನಾಗಿಯೇ ಓದಿಕೊಂಡಿದ್ದ ಶೇಖರ್ 16ನೇ ವಯಸ್ಸಿನಲ್ಲಿ ಇದ್ದಕಿದ್ದಂತೆ ಮನೆ ತೊರೆದು ಹೋಗಿದ್ದರು. ಮಗ ಹೋದ ಮೇಲೆ ಈ ದಂಪತಿ ಕಣ್ಣೀರು ಹಾಕಿದ್ದರು. ಊರಿನವರು ಶೇಖರ್ ಜೀವಂತ ಬದುಕಿಲ್ಲ ಅಂತೆಲ್ಲಾ ಮಾತನಾಡಿಕೊಂಡಿದ್ದರು. ಆದರೆ, ಶೇಖರ್ ಈಗ ದಿಢೀರ್ ಮಂಗಳವಾರ ರಾತ್ರಿ ಮನೆಗೆ ವಾಪಸಾಗಿದ್ದಾರೆ. `ಇಳಿ ವಯಸ್ಸಿನಲ್ಲಾದರೂ ಮಗ ಬಂದನಲ್ಲ’ ಎಂದು ಶೇಖರ್ ತಾಯಿ ಬಹಳ ಸಂತಸಗೊಂಡಿದ್ದಾರೆ. `ಕೊರೊನಾ ಲಾಕ್‍ಡೌನ್ ತಂದೊಡ್ಡಿದ ಕಷ್ಟದ ನಡುವೆ ನಮ್ಮೂರೆ ಚೆಂದ. ಅಲ್ಲೇ ಬದುಕಿ ಬಾಳಬೇಕು ಎಂಬುದು ಅರಿವಾಯಿತು. ಕಷ್ಟಗಳ ಮೇಲೆ ಕಷ್ಟ ಬಂದಾಗ ಸಾಕಪ್ಪಾ ಸಾಕು ಎನಿಸಿತ್ತು. ಹಾಗಾಗಿ, ಹುಟ್ಟಿದೂರಿಗೆ ವಾಪಸ್ ಬಂದೆ’ ಎಂದು ಶೇಖರ್ ಹೇಳಿಕೊಂಡಿದ್ದಾರೆ.

Translate »