ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಆವರಣದಲ್ಲೇ ಭಾನುವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರ ಆತಂಕ ಹೆಚ್ಚಿಸಿದೆ. ಮಂಡಕಳ್ಳಿ ಸಮೀಪದ ಶ್ರೀನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸಂಚರಿಸಿ, ನಿವಾಸಿಗಳಲ್ಲಿ ಆತಂಕ ಹುಟ್ಟಿಸಿ ರುವ ಚಿರತೆಯೇ ಇಂದು ವಿಮಾನ ನಿಲ್ದಾಣದ ಆವರಣದಲ್ಲಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.
ವಿಮಾನ ನಿಲ್ದಾಣದ ಆವ ರಣದಲ್ಲಿ ಕಾಣಿಸಿಕೊಂಡ ಚಿರತೆಯನ್ನು ಮೈಸೂರಿನ ವಿಜಯನಗರದ ನಿವಾಸಿ ಧನಂಜಯ, ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಚೆನ್ನೈಗೆ ಪ್ರಯಾಣ ಬೆಳೆಸಿದ ನಮ್ಮ ತಾಯಿಯನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿ ವಾಪಸ್ಸಾಗುತ್ತಿದ್ದಾಗ ಚಿರತೆ ಕಾಣಿಸಿತು. ಮುಂದೆ ಸಾಗುತ್ತಿದ್ದ ಕಾರೊಂದರ ಮುಂದೆಯೇ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಜಿಗಿದ ಚಿರತೆ, ಕೆಲಕಾಲ ಅಲ್ಲಿಯೇ ಇತ್ತು. ದ್ವಿಚಕ್ರ ವಾಹನಗಳಲ್ಲಿ ಹೋಗಿದ್ದರೆ ಖಂಡಿತ ದಾಳಿ ನಡೆಸುತ್ತಿತ್ತು. ನಿಲ್ದಾಣದ ಕಾಂಪೌಂಡ್ ಒಳಗೇ ಚಿರತೆ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ. ಯಾವುದೇ ರಕ್ಷಣೆಯಿಲ್ಲ ಎಂಬ ಭೀತಿ ಸೃಷ್ಟಿಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಅಲೆದಾಡುತ್ತಿರುವ ಚಿರತೆ: ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಶ್ರೀನಗರ ದಲ್ಲಿ ಮೂರ್ನಾಲ್ಕು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಹಾಗೂ ಬಲೆ ಅಳವಡಿಸಿ, ಹುಡುಕಾಟ ನಡೆಸುತ್ತಿ ದ್ದಾರೆ. ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮಂಡಕಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಬಂದಿಲ್ಲವಾದರೂ ಕೂಡಲೇ ಅಲ್ಲಿಯೂ ಕಾರ್ಯಾಚರಣೆ ನಡೆಸಲಾಗುವುದು ಎಂದು ಆರ್‍ಎಫ್‍ಓ ದೇವರಾಜ್ ತಿಳಿಸಿದ್ದಾರೆ.