ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಅಂಬರೀಶ್ ಹೆಸರು ನಾಮಕರಣಕ್ಕೆ ಸಲಹೆ
ಮೈಸೂರು

ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಅಂಬರೀಶ್ ಹೆಸರು ನಾಮಕರಣಕ್ಕೆ ಸಲಹೆ

December 8, 2018

ಮೈಸೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೂಲ ಮಂಡ್ಯ ಆದರೂ ಅವರು ಹುಟ್ಟಿ, ಬೆಳೆದಿದ್ದೆಲ್ಲವೂ ಮೈಸೂರಿನಲ್ಲಿಯೇ. ಆದ್ದರಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಅಂಬರೀಶ್ ಹೆಸರು ನಾಮಕರಣ ಮಾಡುವ ಮೂಲಕ ಅವರನ್ನು ಗೌರವಿಸುವಂತಾಗಬೇಕು ಎಂದು ಸಾಹಿತಿ ಬನ್ನೂರು ರಾಜು ಸಲಹೆ ನೀಡಿದ್ದಾರೆ.ಮೈಸೂರಿನ ಶಿವರಾಂಪೇಟೆ ವಿನೋಬ ರಸ್ತೆಯಲ್ಲಿ ಅಂಬರೀಶ್ ಅಭಿಮಾನಿ ಬಳಗ ಶುಕ್ರವಾರ ಆಯೋಜಿಸಿದ್ದ ಅಂಬರೀಶ್ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬರೀಶ್ ಮಂಡ್ಯದ ಗಂಡು ನಿಜ. ಆದರೆ ಅವರು ಹುಟ್ಟಿದ್ದು ಮೈಸೂರಿನ ಜಯ ನಗರದಲ್ಲಿರುವ ಅವರ ತಾತ ಖ್ಯಾತ ಪಿಟೀಲು ವಾದಕ ಪಿಟೀಲು ಚೌಡಯ್ಯನವರ ಮನೆಯಲ್ಲಿ. ನಂತರ ಅವರ ಓದು, ಓಡಾಟ, ಸಿನಿಮಾ ರಂಗಪ್ರವೇಶ ಇವೆಲ್ಲವೂ ಮೈಸೂರಿನಲ್ಲೇ ಆಗಿದ್ದು. ಹೀಗಾಗಿ ಅವರು ಮೈಸೂರು ಜಾಣ. ಅವರ ಮೈಸೂರಿನ ಒಡನಾಟದ ಹಿನ್ನೆಲೆಯಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಅಂಬರೀಶ್ ಹೆಸರಿಡುವುದು ಸೂಕ್ತ ಹಾಗೂ ಗೌರವ ಸಲ್ಲಿಸಿದಂತಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಇದನ್ನು ಗಮನಿಸಿ, ಆದಷ್ಟು ಬೇಗ ನಾಮಕರಣ ಮಾಡುವ ಪ್ರಯತ್ನ ಮಾಡಲಿ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಅಂಬರೀಶ್ ಅವರ ಆತ್ಮೀಯ ಗೆಳೆಯರಾಗಿದ್ದ ದಿವಂಗತ ವೈರಮುಡಿ ಅವರ ಪುತ್ರಿ ರಾಣಿ ಅವರು ಅಂಬಿ ಪುಣ್ಯ ಸ್ಮರಣೆ ಅಂಗವಾಗಿ ತಮ್ಮ ತಂದೆ ನಡೆಸುತ್ತಿದ್ದ ಅಂಗಡಿ ಬಳಿ ಸಾಂಕೇತಿಕವಾಗಿ ಅಂಬರೀಶ್ ಹೆಸರಿನಲ್ಲಿ ಎರಡು ಸಸಿಗಳನ್ನು ನೆಟ್ಟು, ತಮ್ಮ ತಂದೆ ಅಂಬರೀಶ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಪ್ಯಾಲೆಸ್ ಬಾಬು, ಮಹದೇವ, ಮಹೇಶ್ ಭಜರಂಗಿ, ಪ್ರವೀಣ್‍ಶೆಟ್ಟಿ, ಹರೀಶ್, ರಘುಕುಮಾರ್, ಅಶೋಕ ಇನ್ನಿತರರು ಉಪಸ್ಥಿತರಿದ್ದರು.

Translate »