ಮೈಸೂರು: ಸುಳ್ಳು ದಾಖಲೆ ನೀಡಿ ಜಾತಿ ಪ್ರಮಾಣ ಪತ್ರ ಪಡೆದಿದ್ದ ಇಬ್ಬರ ವಿರುದ್ಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸರು, ತಿ.ನರಸೀ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಹುಣಸೂರು ಗ್ರಾಮದ ನಿವಾಸಿಗಳಾದ ಶೋಭ ಮತ್ತು ನಾಗರಾಜು ಎಂಬುವರ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾ ಲಯದ ಎಡಿಜಿಪಿ ನಾಹಜಾನಿ ಅವರ ನಿರ್ದೇಶನದ ಮೇರೆಗೆ ಡಿ.6ರಂದು ಮೈಸೂರಿನ ಸಬ್‍ಇನ್ಸ್‍ಪೆಕ್ಟರ್ ಲೋಕಾಕ್ಷಿ ಅವರು, ಶೋಭ ಮತ್ತು ನಾಗರಾಜು ಅವರ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ.
ಶೋಭ ಮತ್ತು ನಾಗರಾಜ್ ಅವರು ಶಾಲಾ ದಾಖಲಾತಿ ಪ್ರಕಾರ ಪ್ರವರ್ಗ-1ರಲ್ಲಿ ಬರುವ ಪರಿವಾರ ಜಾತಿಗೆ ಸೇರಿದವರಾಗಿದ್ದು, ಸರ್ಕಾರದ ಮೀಸಲಾತಿ ಪಡೆಯಲು, ತಿ.ನರಸೀ ಪುರ ತಹಸಿಲ್ದಾರ್ ಅವರಿಂದ ಪರಿಶಿಷ್ಠ ಪಂಗಡ ನಾಯಕ ಜಾತಿಗೆ ಸೇರಿರುವುದಾಗಿ ಪ್ರಮಾಣ ಪತ್ರ ಪಡೆದಿದ್ದರು. ಇವರು ಬೆಂಗಳೂರು ಅಲ್ಪ ಸಂಖ್ಯಾತರ ನಿರ್ದೇಶನಾ ಲಯದ ಪ್ರಥಮ ದರ್ಜೆ ಗಣಕಯಂತ್ರ ಸಹಾಯಕರ ಹುದ್ದೆಗೆ ಆಯ್ಕೆ ಆಗಿದ್ದು, ಇವರಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡುವ ಸಲುವಾಗಿ ಸಮಾಜ ಇಲಾಖೆಯ ಮೈಸೂರು ಘಟಕದ ಜಂಟಿ ನಿರ್ದೇಶಕರು, ಈ ಕುರಿತು ರಕ್ತ ಸಂಬಂಧಿಗಳ ಶಾಲಾ ದಾಖಲಾತಿಗಳನ್ನು ಪರಿಶೀಲಿಸಿದಾಗ ಜಾತಿ ಕಾಲಂನಲ್ಲಿ `ಪರಿವಾರ’ ಎಂದು ನಮೂದಾಗಿತ್ತು. ಆದ್ದರಿಂದ ಇವರಿಗೆ ನೀಡಿದ್ದ ಎಸ್ಟಿ ನಾಯಕ ಜಾತಿ ಪ್ರಮಾಣ ಪತ್ರವನ್ನು ರದ್ದು ಪಡಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದ ಜಾತಿ ಪರಿಶೀಲನಾ ಸಮಿತಿಯು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವರದಿ ನೀಡಿ, ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ತಾವು ನೀಡಿದ್ದ ವರದಿಯಲ್ಲಿ ಉಲ್ಲೇಖಿಸಿದ್ದರು.