ಶಸ್ತ್ರ ಚಿಕಿತ್ಸೆ ನಂತರ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ
ಮೈಸೂರು

ಶಸ್ತ್ರ ಚಿಕಿತ್ಸೆ ನಂತರ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

December 8, 2018

ಮೈಸೂರು: ಮೈಸೂರಿನ ಸರಸ್ವತಿಪುರಂನಲ್ಲಿರುವ ಸಿಗ್ಮಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾದ ರೋಗಿಯೊಬ್ಬರು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯತೆಯಿಂದ ಅವರ ಸಾವು ಸಂಭವಿಸಿದೆ ಎಂದು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಮರಾಜನಗರ ತಾಲೂಕು ಕಟ್ನವಾಡಿ ಗ್ರಾಮದ ಶ್ರೀಮತಿ ಸುನಂದ ಎಂಬುವರು ತಮ್ಮ ತಂದೆ ನಿವೃತ್ತ ಶಿಕ್ಷಕ ಎಸ್.ನಾಗಯ್ಯ ಅವರು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ನೀಡಿದ ದೂರನ್ನು ಪೊಲೀಸರು ಅಸ್ವಾಭಾವಿಕ ಸಾವು ಎಂದು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ವಿವರ: ತಮ್ಮ ತಂದೆ ನಾಗಯ್ಯ ಅವರಿಗೆ ಮಲ ವಿಸರ್ಜನೆಯಲ್ಲಿ ರಕ್ತ ಬೀಳುತ್ತಿದ್ದ ಕಾರಣ ಸಿಗ್ಮಾ ಆಸ್ಪತ್ರೆಯ ವೈದ್ಯ ಡಾ.ಸಿದ್ದೇಶ್ ಅವರ ಬಳಿ ನ.1ರಂದು ತೋರಿಸಲಾಗಿ, ಅವರು ಪರೀಕ್ಷಿಸಿ ಪೈಲ್ಸ್ ಗಂಟು ಇದೆ ಎಂಬ ಕಾರಣದಿಂದ ಆಪರೇಷನ್ ಮಾಡಬೇಕು.

ಅದಕ್ಕೆ 60 ಸಾವಿರ ರೂ. ಪ್ಯಾಕೇಜ್ ಶುಲ್ಕವಾಗುತ್ತದೆ ಎಂದಿದ್ದರು ಎಂದು ಸುನಂದ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ತಮ್ಮ ತಂದೆಯನ್ನು ನ.13ರಂದು ಆಸ್ಪತ್ರೆಗೆ ದಾಖಲಿಸಿದ್ದು, ನ.14ರಂದು ಡಾ. ಸಿದ್ದೇಶ್ ಆಪರೇಷನ್ ಮಾಡಿದರು. ನಂತರ ರಕ್ತ ಸೋರಿಕೆಯಾಗುತ್ತಿದೆ ಎಂದು 10 ಪಿಂಟ್ ರಕ್ತ ತಂದುಕೊಡುವಂತೆ ಕೇಳಿದ್ದರು. ನಾವೂ ಕೂಡ ರಕ್ತ ತಂದುಕೊಟ್ಟೆವು. ಅಲ್ಲದೇ ರಕ್ತ ಸೋರಿಕೆ ನಿಲ್ಲುವುದಕ್ಕೆ ಅವರು ಸೂಚಿಸಿದ ಔಷಧಿಗಳನ್ನೂ ತಂದುಕೊಟ್ಟೆವು. ಹಾಗಿದ್ದರೂ ರಕ್ತ ನಿಲ್ಲದೇ ಇದ್ದರಿಂದ ಡಾ. ಸಿದ್ದೇಶ್, ನ.16ರಂದು ಮತ್ತೊಂದು ಆಪರೇಷನ್ ಮಾಡಿ ದರು. ಅದೂ ಕೂಡ ವಿಫಲವಾಗಿದ್ದು, ನ.26ರಂದು 3ನೇ ಬಾರಿಗೆ ಆಪರೇಷನ್ ಮಾಡಿ ದರು. ಒಟ್ಟಾರೆ ನಾವು 15 ಲಕ್ಷ ರೂ.ಗಳನ್ನು ಅದಕ್ಕಾಗಿ ವೆಚ್ಚ ಮಾಡಿದ್ದೇವೆ. ಆದರೆ ಡಿ.3ರಂದು ಚಿಕಿತ್ಸೆ ಫಲಕಾರಿಯಾಗದೇ ತಮ್ಮ ತಂದೆ ಸಾವನ್ನಪ್ಪಿರುವುದಾಗಿ ಡಾ.ಸಿದ್ದೇಶ್ ತಿಳಿಸಿದರು ಎಂದು ತಮ್ಮ ದೂರಿನಲ್ಲಿ ತಿಳಿಸಿರುವ ಸುನಂದ ಅವರು, ವೈದ್ಯರ ನಿರ್ಲಕ್ಷ್ಯತೆಯಿಂದ ತಮ್ಮ ತಂದೆಯ ಸಾವು ಸಂಭವಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

Translate »