ಜನಸಂಖ್ಯೆ ಆಧಾರಿತ ಮೀಸಲಾತಿ ಜಾರಿಗೊಳಿಸಲಿ ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹ
ಮೈಸೂರು

ಜನಸಂಖ್ಯೆ ಆಧಾರಿತ ಮೀಸಲಾತಿ ಜಾರಿಗೊಳಿಸಲಿ ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹ

February 9, 2020

ಮೈಸೂರು, ಫೆ.8(ಪಿಎಂ)- ಈಗಿರುವ ಮೀಸಲಾತಿ ಪದ್ಧತಿ ಬದಲಿಗೆ ಜನಸಂಖ್ಯೆ ಆಧಾರಿತ ಮೀಸಲಾತಿ ಜಾರಿಗೆ ತರಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಹೇಳಿದೆ. ಇದಕ್ಕೆ ನಮ್ಮ ವಿರೋಧವಿದೆ. ನಾವು ಮೀಸಲು ಕೊಡಿ ಎಂದು ಕೇಳಿಲ್ಲ. ಆದಿ ಕಾಲದಿಂದ ಇಂದಿಗೂ ಅಸ್ಪøಶ್ಯತೆ ಜಾರಿಯಲ್ಲಿದೆ. ಜಾತಿ-ಧರ್ಮದ ಹೆಸರಿನಲ್ಲಿ ದೌರ್ಜನ್ಯ ಇಂದಿಗೂ ನಡೆಯುತ್ತಲೇ ಇವೆ. ಈ ನಡುವೆ ಮೀಸಲಾತಿ ಪದ್ಧತಿ ತೆಗೆದು ಹಾಕುವ ಮಾತುಗಳು ಕೇಳಿ ಬರುತ್ತಿವೆ. ಈಗ ಮೇಲ್ವರ್ಗಕ್ಕೂ ಶೇ.10 ರಷ್ಟು ಮೀಸಲು ನೀಡಲಾಗಿದೆ. ಹಾಗಾಗಿ ಜನಸಂಖ್ಯಾ ಆಧಾರಿತವಾಗಿ ಮೀಸಲು ನೀಡಲಿ. ಇದರಿಂದ ಸರ್ವಜನಾಂಗದ ಅಭಿ ವೃದ್ಧಿಗೆ ಅವಕಾಶವಿದೆ ಎಂದರು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಜನಸಂಖ್ಯೆಗೆ ಅನು ಗುಣವಾಗಿ ಮೀಸಲಾತಿ ಹೆಚ್ಚಿಸುವ ಕುರಿತು ವರದಿ ನೀಡಲು ರಚಿಸಿರುವ ನ್ಯಾ.ಹೆಚ್.ಎನ್. ನಾಗಮೋಹನ ದಾಸ್ ಆಯೋಗ ಫೆ.10ರಂದು ಬೆಳಿಗ್ಗೆ 11ಕ್ಕೆ ಮೈಸೂರಿನ ಕಲಾಮಂದಿರ ದಲ್ಲಿ ಜಿಲ್ಲಾ ಮಟ್ಟದ ಅಹವಾಲು ಸ್ವೀಕೃತಿ ಮತ್ತು ಸಮಾಲೋಚನೆ ಸಭೆ ಕರೆದಿದೆ. ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಂಧುಗಳು ಸಭೆಗೆ ಆಗಮಿಸಬೇಕೆಂದು ಮನವಿ ಮಾಡಿದರಲ್ಲದೆ, ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.

Translate »