ರೈತ ಸಂಘವನ್ನು ಯುವ ಸಮೂಹ ಮತ್ತಷ್ಟು ಬಲಪಡಿಸಲಿ: ಸುನೀತಾ ಪುಟ್ಟಣ್ಣಯ್ಯ ಸಲಹೆ
ಮೈಸೂರು

ರೈತ ಸಂಘವನ್ನು ಯುವ ಸಮೂಹ ಮತ್ತಷ್ಟು ಬಲಪಡಿಸಲಿ: ಸುನೀತಾ ಪುಟ್ಟಣ್ಣಯ್ಯ ಸಲಹೆ

February 19, 2021

ಮೈಸೂರು, ಫೆ.18(ಎಂಟಿವೈ)- ರೈತ ನಾಯಕ ಪುಟ್ಟಣ್ಣಯ್ಯ ಅಗಲಿ 3 ವರ್ಷ ಗಳು ಕಳೆದಿದ್ದರೂ ಕರ್ನಾಟಕ ರಾಜ್ಯ ರೈತ ಸಂಘ ಇನ್ನೂ ಜೀವಂತವಾಗಿದೆ. ಪುಟ್ಟ ಣ್ಣಯ್ಯ ಬಿಟ್ಟು ಹೋದ ರೈತ ಸಂಘವನ್ನು ಯುವ ಸಮೂಹ ಮತ್ತಷ್ಟು ಬಲಪಡಿಸ ಬೇಕು ಎಂದು ದಿ.ಪುಟ್ಟಣ್ಣಯ್ಯ ಅವರ ಪತ್ನಿ ಸುನೀತಾ ಪುಟ್ಟಣ್ಣಯ್ಯ ಸಲಹೆ ನೀಡಿದ್ದಾರೆ.

ಮೈಸೂರಿನ ಕಲಾಮಂದಿರದಲ್ಲಿ ಕರ್ನಾ ಟಕ ರಾಜ್ಯ ರೈತ ಸಂಘಟನೆ ಹಾಗೂ ಹಸಿರು ಸೇನೆ ಗುರುವಾರ ಆಯೋಜಿಸಿದ್ದ `ಕೆ.ಎಸ್.ಪುಟ್ಟಣ್ಣಯ್ಯ ನೆನಪು ಹಾಗೂ ಸಂಘದ ರಾಜ್ಯ ಮಟ್ಟದ ಸಮಾರಂಭ’ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಹಲವು ಸಂಘಟನೆಗಳಿವೆ. ರೈತರ ಹೋರಾಟ ಎಂದಾಗ ಎಲ್ಲಾ ಸಂಘÀ ಟನೆಗಳು ಮನಸ್ತಾಪ ಮರೆತು, ಒಗ್ಗಟ್ಟಿನಿಂದ ಸಂಘಟಕರಾಗಬೇಕು. ಇದೇ ಪುಟ್ಟಣ್ಣಯ್ಯ ಅವರು ಹಾಕಿಕೊಟ್ಟ ಹಾದಿ. ಇದನ್ನು ಹೋರಾಟ ಗಾರರು ಮರೆಯಬಾರದು ಎಂದರು.

ಸದಾ ನಿಮ್ಮೊಂದಿಗೆ: ಪುಟ್ಟಣ್ಣಯ್ಯ ಒಂದು ದಿನವೂ ಮನೆಯಲ್ಲಿರಲಿಲ್ಲ. ಸದಾ ರೈತರ ಹೋರಾಟದಲ್ಲಿ ಜಿಲ್ಲೆಗಳಲ್ಲಿ ಸಂಚರಿಸು ತ್ತಿದ್ದರು. ಅಂದು ನಮಗೆ ಅವರ ಹೋರಾಟ ತಿಳಿಯುತ್ತಿರಲಿಲ್ಲ, ಇಂದು ಅವರು ಏತಕ್ಕಾಗಿ ಹೋರಾಡುತ್ತಿದ್ದರು ಎಂದು ನಮಗೆ ಅರ್ಥ ವಾಗುತ್ತಿದೆ. ರೈತರ ಹೋರಾಟಕ್ಕೆ ನಮ್ಮ ಕುಟುಂಬ ಸದಾ ರೈತ ಸಂಘ ಹಾಗೂ ರೈತ ನಾಯಕರೊಂದಿಗಿರಲಿದೆ ಎಂದು ಹೇಳಿ ಭಾವುಕರಾದರು.

ರೈತ ಹೋರಾಟಗಾರ್ತಿ ನಂದಿನಿ ಜಯ ರಾಮ್ ಮಾತನಾಡಿ, ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಸಾನ್ ಏಕತಾ ಸಂಘ ಟನೆ ನಡೆಸುತ್ತಿರುವ ಹೋರಾಟದಲ್ಲಿ ನೂರಾರು ಸಂಘಟನೆಗಳು ಒಗ್ಗೂಡಿ ಲಜ್ಜೆಗೆಟ್ಟ ಸರ್ಕಾರ ವನ್ನು ಎಚ್ಚರಿಸುತ್ತಿವೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ದೆಹಲಿ ಮಾದರಿ ಹೋರಾಟ ಅನಿವಾರ್ಯ. ಎಲ್ಲಾ ಸಂಘಟನೆಗಳೂ ಒಗ್ಗೂಡಿ ರೈತ ವಿರೋಧಿ ಕಾಯ್ದೆ ಹಿಂಪಡೆವವ ರೆಗೂ ಹೋರಾಟ ನಡೆಸಬೇಕು ಎಂದರು.

500 ಯುವಕರ ಸೇರ್ಪಡೆ: ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಯ 500 ಯುವಕರು ಸೇರ್ಪಡೆಗೊಂಡರು. ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿ ಸಲು, ರೈತ ವಿರೋಧಿ ಕಾಯ್ದೆಗಳ ಬಗ್ಗೆ ಧ್ವನಿ ಎತ್ತಲು ರೈತ ಸಂಘಟನೆ ಮೂಲಕ ಹೋರಾಟ ಮಾಡಲು ಸೇರ್ಪಡೆಗೊಳ್ಳು ತ್ತಿದ್ದೇವೆ ಎಂದು ಯುವ ಸಮೂಹ ಪ್ರತಿಜ್ಞೆ ಮಾಡಿತು. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಸಾಹಿತಿ ದೇವನೂರ ಮಹದೇವ, ಕೃಷಿ ಆರ್ಥಿಕ ತಜ್ಞ ಡಾ.ಸಿ.ಎನ್. ಪ್ರಕಾಶ್ ಕಮ್ಮರಡಿ, ಜೆ.ಎಂ.ವೀರಸಂಗಯ್ಯ, ನುಲೇನೂರು ಶಂಕ್ರಪ್ಪ, ಮಧುಚಂದನ್, ಹೊಸಕೋಟೆ ಬಸವ ರಾಜು, ಹೊಸೂರು ಕುಮಾರ್, ರವಿಕಿರಣ್ ಪುಣಚ, ಪ್ರಸನ್ನ ಎನ್. ಗೌಡ, ನಾಗರತ್ನಮ್ಮ ಪಾಟೀಲ್, ನೇತ್ರಾವತಿ, ಗುರುಪ್ರಸಾದ್ ಕೆರೆಗೋಡು, ಪ್ರೊ.ಶಬ್ಬೀರ್ ಮುಸ್ತಫಾ, ಉಮಾದೇವಿ, ಆಲಗೂಡು ಶಿವಕುಮಾರ್ ಸೇರಿದಂತೆ ಎಲ್ಲಾ ಜಿಲ್ಲೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಹೊಸ ಹೆಸರಿನೊಂದಿಗೆ ಭಾರೀ ನಿರೀಕ್ಷೆ ಹುಟ್ಟುಹಾಕಿದ `ಕರ್ನಾಟಕ ರಾಜ್ಯ ರೈತ ಸಂಘ’
ಮೈಸೂರು, ಫೆ.18(ಎಂಟಿವೈ)- `ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’, ಈಗ ಹೊಸ ಹೆಸರು, ಹೊಸ ಹುರುಪು, ಹೊಸ ಬೈಲಾದೊಂದಿಗೆ ನವೀಕರಣಗೊಂಡಿದೆ. `ಕರ್ನಾಟಕ ರಾಜ್ಯ ರೈತ ಸಂಘ’ ಹೆಸರಿನೊಂದಿಗೆ ಲಾಂಛನ, ಧ್ವಜ, ಟವೆಲ್ (ಶಾಲು) ಎಲ್ಲವನ್ನೂ ಸಮಗ್ರವಾಗಿ ಬದಲಿಸಿಕೊಂಡು ಹೊಸ ನಿರೀಕ್ಷೆಗಳನ್ನೂ ಹುಟ್ಟುಹಾಕಿದೆ!

ಮೈಸೂರಿನ ಕಲಾಮಂದಿರದಲ್ಲಿ `ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ನೆನಪು’ ಹಾಗೂ ರೈತ ಸಂಘದ ಹೊಸ ಆಯಾಮ ಕುರಿತ ರಾಜ್ಯ ಮಟ್ಟದ ರೈತ ಸಮಾ ವೇಶದಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ, ಹಸಿರು ಟವೆಲ್ ಹಾಕಿ ಕೊಂಡು ಸಣ್ಣ ಸಣ್ಣ ಗುಂಪು ಕಟ್ಟಿಕೊಂಡು `ರೈತ ಸಂಘ’ ಎಂದು ಹೇಳಿಕೊಂಡು ಅಕ್ರಮ ಚಟುವಟಿಕೆಯಲ್ಲಿ ಕೆಲವರು ತೊಡಗಿದ್ದಾರೆ. ಹಾಗಾಗಿ `ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ ಹೆಸರನ್ನು ಅನಿವಾರ್ಯ ವಾಗಿ ಮಾರ್ಪಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯ ರೈತ ಸಂಘವು ಕಳೆದ 45 ವರ್ಷಗಳಿಂದ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಾಮಾಣಿಕ ಹೋರಾಟ ನಡೆಸುವ ಮೂಲಕ ಸರ್ಕಾರದ ಕಣ್ತೆರೆಸುವ ಕಾರ್ಯ ನಡೆಸುತ್ತಿದೆ. ಪ್ರತಿಫಲಾಪೇಕ್ಷೆ, ಸ್ವಾರ್ಥ ಇಲ್ಲದೆ ಹೋರಾ ಡುತ್ತಾ ಬಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಸಿರು ಟವೆಲ್/ಶಾಲು ದುರ್ಬಳಕೆಯಾಗುತ್ತಿದೆ. ರಾಜಕಾರಣಿ ಗಳೂ ಹಸಿರು ಟವೆಲ್ ಹಾಕಿಕೊಳ್ಳಲು ಆರಂಭಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ವೇಳೆ ಮಾತ್ರ ಹಸಿರು ಟವೆಲ್ ಹಾಕಿಕೊಂಡು ನಂತರ ಅದನ್ನು ಎತ್ತಿಡುತ್ತಾರೆ. ಹಸಿರು ಟವೆಲ್‍ನ ತತ್ವ-ಸಿದ್ಧಾಂತ ರಾಜಕಾರಣಿಗಳಿಗೆ ತಿಳಿದಿಲ್ಲ. ಇತ್ತೀಚೆಗೆ ಸಚಿವ ಬಿ.ಸಿ.ಪಾಟೀಲ್ ಹಸಿರು ಟವೆಲ್ ಹಾಕಿಕೊಂಡು ಮೈಸೂರಿಗೆ ಬಂದಿದ್ದಾಗ ರೈತರು ಅವರಿಗೆ ಬಿಸಿ ಮುಟ್ಟಿಸಿದ್ದಾರೆ ಎಂದರು.

ರೈತ ಸಂಘ ಮುನ್ನಡೆಸಿದ ಹೆಚ್.ಎಸ್.ರುದ್ರಪ್ಪ, ಪ್ರೊ. ನಂಜುಂಡಸ್ವಾಮಿ, ಸುಂದರೇಶ್, ಕೆ.ಎಸ್.ಪುಟ್ಟಣ್ಣಯ್ಯ ಅವರ ಮಾರ್ಗದಲ್ಲಿ ರೈತ ಸಂಘ ಪ್ರಾಮಾಣಿಕ ಹೋರಾಟ ನಡೆಸುತ್ತಾ ಬಂದಿದೆ. ಅದನ್ನೇ ಮುಂದು ವರೆಸಿಕೊಂಡು ಹೋಗಲು `ಹೆಸರು, ಟವೆಲ್, ಧ್ವಜ, ಲಾಂಛನ’ ಬದಲಿಸಲಾಗಿದೆ ಎಂದು ವಿವರಿಸಿದರು.

ಐಕ್ಯ ಹೋರಾಟ: ಬಡಗಲಪುರ ನಾಗೇಂದ್ರ ಮಾತ ನಾಡಿ, ಕರ್ನಾಟಕ ರಾಜ್ಯ ರೈತ ಸಂಘದ ಮೊದಲ ತಲೆಮಾರಿನ ನಾಯಕರಾದ ಸ್ವಾತಂತ್ರ್ಯ ಹೋರಾಟ ಗಾರ ಹೆಚ್.ಎಸ್.ರುದ್ರಪ್ಪ, ಪ್ರೊ.ನಂಜುಂಡಸ್ವಾಮಿ, ಸುಂದರೇಶ್, 2ನೇ ತಲೆಮಾರಿನ ನಾಯಕ ಕೆ.ಎಸ್. ಪುಟ್ಟಣ್ಣಯ್ಯನಂತಹ ನಾಯಕರು ಆದರ್ಶ, ಮಾನವತಾ ವಾದ, ನೇರ ನಡೆ-ನುಡಿ ಗುಣದಿಂದ ಪ್ರೇರಿತಗೊಂಡಿ ರುವ ಅಪಾರ ಸಂಖ್ಯೆಯ ರೈತ ಮುಖಂಡರು ರೈತ ಸಂಘದ ಹೋರಾಟವನ್ನು ಸರಿದಾರಿಯಲ್ಲಿ ಕೊಂಡೊಯ್ಯ ಬೇಕೆಂಬ ಆಶಯ ಹೊಂದಿದ್ದಾರೆ. ಸಂಘದ ಸದಸ್ಯರ ಸಮ್ಮತಿ ಪಡೆದು `ಕರ್ನಾಟಕ ರಾಜ್ಯ ರೈತ ಸಂಘ’ ಎಂದು ಹೆಸರು ಬದಲಿಸಲಾಗಿದೆ. ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿಯಲ್ಲಿ ನಮ್ಮ ರೈತ ಸಂಘ ಮುಂದುವರೆಯಲಿದೆ. ಹೋರಾಟದಲ್ಲಿ ಐಕ್ಯತೆ ಪ್ರದರ್ಶಿ ಸಲು ಬದ್ಧ. ಇದರಲ್ಲಿ ಸಂಶಯ ಬೇಡ ಎಂದÀರು.

ದೇಶದ ಸಂವಿಧಾನ ಮಾದರಿಯಲ್ಲೇ ರೈತ ಸಂಘಕ್ಕೂ ಸಂವಿಧಾನ ರಚಿಸಿಕೊಂಡಿದ್ದೇವೆ. ಸಂಘವನ್ನು ಬಲ ಪಡಿಸುವ ನಿಟ್ಟಿನಲ್ಲಿ ಸಂವಿಧಾನವನ್ನು ದುರ್ಬಲ ಗೊಳಿಸದೇ ಇರಲು ಷರತ್ತು ವಿಧಿಸಿಕೊಂಡಿದ್ದೇವೆ. ಸಂಘಟನೆಯಲ್ಲಿ ಪದಾಧಿಕಾರಿಗಳ ಆಯ್ಕೆ ವಿಚಾರ, ವರ್ಷಕ್ಕೊಮ್ಮೆ ಪದಾಧಿಕಾರಿಗಳು ಆಸ್ತಿ ಘೋಷಣೆ ಮಾಡುವುದು, ಆರ್ಥಿಕ ಚಟುವಟಿಕೆ ಪಾರದರ್ಶಕ ವಾಗಿಸಲು ಕ್ರಮ ಸೇರಿದಂತೆ ವಿವಿಧ ಅಂಶಗಳುಳ್ಳ 55 ಪರಿಚ್ಛೇದ ಇರುವ ಸಂವಿಧಾನ ರಚಿಸಲಾಗಿದೆ ಎಂದರು.

ಹೃದಯವಂತ ಕೆ.ಎಸ್.ಪುಟ್ಟಣ್ಣಯ್ಯ: ಕರ್ನಾಟಕ ರಾಜ್ಯ ರೈತ ಸಂಘದ ವರಿಷ್ಠರು, ಶಾಸಕರೂ ಆಗಿದ್ದ ಕೆ.ಎಸ್. ಪುಟ್ಟಣ್ಣಯ್ಯ ಹೃದಯವಂತ ನಾಯಕ. ಮಾನವತಾವಾದಿ ಯಾಗಿದ್ದ ಅವರು, ಆಡಳಿತ ವ್ಯವಸ್ಥೆಯಲ್ಲಿದ್ದ ರೈತರ ಬಗೆಗಿನ ನಿರ್ಲಕ್ಷ್ಯ ಧೋರಣೆಯಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡುವ ಏಕೈಕ ಉದ್ದೇಶದಿಂದ ವಿಧಾನಸಭೆ ಮೆಟ್ಟಿಲೇರಿದರು. 1994ರಲ್ಲಿ ಮೊದಲ ಬಾರಿಗೆ ಶಾಸಕ ರಾಗಿದ್ದ ಪುಟ್ಟಣ್ಣಯ್ಯ ವಿಧಾನಸಭೆಯಲ್ಲಿ ಮೊದಲ ಭಾಷಣ ದಲ್ಲೇ ಗಮನ ಸೆಳೆದಿದ್ದರು. ಗ್ರಾಮೀಣ ಪ್ರದೇಶ ಮಹಿಳೆ ಯರು ಎದುರಿಸುತ್ತಿದ್ದ ಗರ್ಭಕೋಶ ಖಾಯಿಲೆ ಸಂಬಂ ಧಿಸಿದಂತೆ ಪ್ರಸ್ತಾಪ ಮಾಡುವ ಮೂಲಕ ರಾಜ್ಯದಲ್ಲಿ ಯಶಸ್ವಿನಿ ಕಾರ್ಡ್ ಜಾರಿಗೆ ತರಲು ಶ್ರಮಿಸಿದ್ದರು.

ಯಾವುದೇ ಸರ್ಕಾರ ಬಂದರೂ ರೈತರ ಸಮಸ್ಯೆ ಬಗ್ಗೆ ಚರ್ಚಿಸಲು ಪುಟ್ಟಣ್ಣಯ್ಯ ಅವರನ್ನು ಆಹ್ವಾನಿಸು ತ್ತಿದ್ದವು. ಒಮ್ಮೆ ಜನತಾದಳದಿಂದ ಲೋಕಸಭಾ ಚುನಾ ವಣೆಗೆ ಸ್ಪರ್ಧಿಸುವಂತೆ ಆಹ್ವಾನ ಬಂದಾಗ ತಿರಸ್ಕರಿಸಿ ದ್ದರು. 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿ ಯೂರಪ್ಪ ಅವರು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಭರವಸೆ ನೀಡಿದರೂ ಪುಟ್ಟಣ್ಣಯ್ಯ ತಿರಸ್ಕರಿಸಿದರು. ಆ ಮೂಲಕ ರೈತ ನಾಯಕರು ಅಧಿಕಾರದ ಹಿಂದೆ ಹೋದವರಲ್ಲ ಎಂಬುದನ್ನು ತೋರಿಸಿದ್ದರು ಎಂದು ನೆನಪಿಸಿದರು.

ಪಾಂಡವಪುರದಿಂದ ಮೆರವಣಿಗೆ: ಸಮಾರಂಭಕ್ಕೆ ಮಂಡ್ಯ ಜಿಲ್ಲೆಯ ಪಾಂಡವಪುರದಿಂದ ಕೆ.ಎಸ್.ಪುಟ್ಟ ಣ್ಣಯ್ಯ ಅಭಿಮಾನಿಗಳು, ರೈತ ಸಂಘದ ಕಾರ್ಯ ಕರ್ತರು 200ಕ್ಕೂ ಹೆಚ್ಚು ಬೈಕ್‍ಗಳಲ್ಲಿ, 8 ಟೆಂಪೋ ಗಳಲ್ಲಿ ರೈತ ಧ್ವಜ, ಪುಟ್ಟಣ್ಣಯ್ಯನವರ ಭಾವಚಿತ್ರ ಹಿಡಿದು ಮೈಸೂರಿನ ಕಲಾಮಂದಿರದವರೆಗೂ ಮೆರವಣಿಗೆ ಬಂದು ಗಮನ ಸೆಳೆದರು.

 

Translate »