ಆರೋಪಿಗಳಿಗೆ ಶಿಕ್ಷೆ ಕೊಡಿಸುವತ್ತ ತನಿಖೆಯಲ್ಲಿ ಬದ್ಧತೆ ಇರಲಿ ನಗರ ಪೊಲೀಸರಿಗೆ ಡಿಜಿಪಿ ಪ್ರವೀಣ್ ಸೂದ್ ಕಿವಿಮಾತು
ಮೈಸೂರು

ಆರೋಪಿಗಳಿಗೆ ಶಿಕ್ಷೆ ಕೊಡಿಸುವತ್ತ ತನಿಖೆಯಲ್ಲಿ ಬದ್ಧತೆ ಇರಲಿ ನಗರ ಪೊಲೀಸರಿಗೆ ಡಿಜಿಪಿ ಪ್ರವೀಣ್ ಸೂದ್ ಕಿವಿಮಾತು

August 30, 2021

ಮೈಸೂರು,ಆ.೨೯(ಎಂಟಿವೈ)-ಆರೋಪಿಗಳ ಸುಳಿವು ಇಲ್ಲದೇ ಇದ್ದರೂ ಚಿನ್ನಾಭರಣ ಮಳಿಗೆ ದರೋಡೆ, ಶೂಟೌಟ್ ಪ್ರಕರಣ ಹಾಗೂ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ ಪತ್ತೆ ಮಾಡಲು ಪ್ರದರ್ಶಿಸಿದ ಬದ್ಧತೆ ಆರೋಪಿಗಳಿಗೆ ಶಿಕ್ಷೆ ಕೊಡಿಸುವತ್ತಲೂ ಇರಲಿ ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್‌ಸೂದ್ ಕಿವಿಮಾತು ಹೇಳಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ ಪೊಲೀಸ್ ಅಧಿಕಾರಿಗಳು ಹಾಗೂ ದರೋಡೆ, ಶೂಟೌಟ್, ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಪಾಲ್ಗೊಂಡಿದ್ದ ತನಿಖಾಧಿಕಾರಿ ಸೇರಿದಂತೆ ವಿವಿಧ ಪೊಲೀಸ್ ಠಾಣೆ ಇನ್ಸ್ಪೆಕ್ಟರ್‌ಗಳೊಂದಿಗೆ ಉಪಾಹಾರ ಕೂಟದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಮೈಸೂರು ನಗರ ಮಾತ್ರವಲ್ಲದೆ, ರಾಜ್ಯದಲ್ಲಿ ಸಂಚಲನ ಉಂಟು ಮಾಡಿದ್ದ ಎರಡು ಪ್ರಕರಣವನ್ನು ಭೇದಿಸಿರುವುದು ಶ್ಲಾಘನೀಯ. ಈ ಎರಡೂ ಪ್ರಕರಣದಲ್ಲಿ ಯಾವುದೇ ಸ್ಪಷ್ಟ ಸುಳಿವು ಇಲ್ಲದೇ ಇದ್ದರೂ ಆರೋಪಿಗಳನ್ನು ದಸ್ತಗಿರಿ ಮಾಡಲು ಪಟ್ಟ ಶ್ರಮವನ್ನು ಮುಕ್ತಕಂಠದಿAದ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ತನಿಖಾಧಿಕಾರಿಗಳು ಇದು ವರೆಗೂ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿ ಸಿದ್ದಾರೆ. ಮುಂದಿನ ತನಿಖೆಯಲ್ಲೂ ಇನ್ನಷ್ಟು ಚಾಕಚಕ್ಯತೆ, ಬದ್ಧತೆಯಿಂದ ಆರೋಪಿಗಳ ವಿಚಾರಣೆ ಮಾಡಿ ತಕ್ಕ ಶಿಕ್ಷೆ ಕೊಡಿಸುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಮೈಸೂರು ನಗರ ಮಾತ್ರವಲ್ಲದೆ ದಕ್ಷಿಣ ವಲಯದಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಕಾರ್ಯೋನ್ಮುಖರಾಗಬೇಕು. ಅದರಲ್ಲೂ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ದಲ್ಲಿ ಬಂಧಿಸಿರುವ ಆರೋಪಿಗಳನ್ನು ಸಮಗ್ರವಾಗಿ ವಿಚಾರಣೆಗೊಳಪಡಿಸಬೇಕು
ಎಂದು ಸೂಚಿಸಿದರಲ್ಲದೆ, ಮುಂದಿನ ಹಂತದ ತನಿಖೆ ಸ್ವರೂಪದ ಬಗ್ಗೆ ಮಾರ್ಗ ದರ್ಶನ ನೀಡಿದ್ದಾರೆ. ಆರೋಪಿಗಳನ್ನು ಸ್ಥಳ ಪರಿಶೀಲನೆ ಕರೆದೊಯ್ಯುವ ವೇಳೆ ಕೈಗೊಳ್ಳಬೇಕಾದ ಕ್ರಮ, ವಿಚಾರಣೆ ಸಂದರ್ಭದಲ್ಲಿ ಅನುಸರಿಸಬೇಕಾದ ಮಾನದಂಡದ ಬಗ್ಗೆಯೂ ವಿವರಿಸಿದರು. ಮೈಸೂರಲ್ಲಿ ಅಪರಾಧ ಪ್ರಕರಣ ಗಳ ಹೆಚ್ಚಳವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಅತ್ಯಾಚಾರ ಪ್ರಕರಣ ಬೇದಿಸಿದ ಪೊಲೀಸರ ತಂಡಕ್ಕೆ ರಾಜ್ಯ ಸರ್ಕಾರ ಘೋಷಿಸಿದ್ದ ನಗದು ಪುರಸ್ಕಾರವನ್ನು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ವಿತರಿಸಿದರು. ಬಳಿಕ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊದಿಗೆ ಉಪಹಾರ ಸೇವಿಸಿ, ಕರ್ತವ್ಯದಲ್ಲಿ ದಕ್ಷತೆ ಪ್ರದರ್ಶಿಸಲು ಪ್ರೇರೇಪಿಸಿದರು. ಈ ಸಂದರ್ಭದಲ್ಲಿ ಎಡಿಜಿಪಿ ಪ್ರತಾಪ್ ರೆಡ್ಡಿ, ದಕ್ಷಿಣ ವಲಯದ ಐಜಿಪಿ ಪ್ರವೀಣ್ ಮಧುಕರ್ ಪವಾರ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ಎಸ್ಪಿ ಆರ್.ಚೇತನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »