ಮೈಸೂರಲ್ಲೇ ಫಿಲಂ ಸಿಟಿ ನಿರ್ಮಾಣವಾಗಲಿ
ಸಿನಿಮಾ

ಮೈಸೂರಲ್ಲೇ ಫಿಲಂ ಸಿಟಿ ನಿರ್ಮಾಣವಾಗಲಿ

March 13, 2020

ಮಾನ್ಯರೆ,
“ಫಿಲಂ ಸಿಟಿ” ಮೈಸೂರು ಜಿಲ್ಲೆಯಲ್ಲೇ ಉಳಿಸಿಕೊಳ್ಳಲು ಉಗ್ರ ಹೋರಾಟಕ್ಕೆ ಹೋಟೆಲ್ ಮಾಲೀಕರ ಸಂಘ ನಿರ್ಧಾರ-ಮಾಡಿರುವುದು ಸಮಯೋಚಿತವು ಔಚಿತ್ಯ ಪೂರ್ಣವೂ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸಿದ್ದರಾಮಯ್ಯನವರು ಮುಖ್ಯ ಮಂತ್ರಿಗಳಾಗಿದ್ದಾಗ ಫಿಲಂಸಿಟಿಗೆ ಬೇಕಾದ ಅನುದಾನವನ್ನು ಮೀಸಲಿಟ್ಟು ಅದಕ್ಕೆ ಬೇಕಾದ ಜಾಗವನ್ನು ಇಮ್ಮಾವು ಬಳಿ ಸಹ ಗುರುತಿಸಲಾಗಿದೆ.

ಮುಖ್ಯಮಂತ್ರಿಗಳು ಬದಲಾದ ತಕ್ಷಣ ಫಿಲಂ ಸಿಟಿಯನ್ನು ಅವರವರ ಲಾಭಕ್ಕೆ ಅವರವರ ರಾಜಕೀಯ ಕಾರಣಗಳಿಗೆ ಚಿತ್ರನಗರಿಯನ್ನು ಚೆಂಡಿನಂತೆ ಎತ್ತಿ ಬಿಸಾಡುತ್ತಿರುವುದು ಮೈಸೂರು ಜಿಲ್ಲೆಯ ಜನರಿಗೆ ಮತ್ತು ಪ್ರವಾಸೋಧ್ಯಮಕ್ಕೆ ಬೆಣ್ಣೆ ಆಸೆ ತೋರಿಸಿ ಸಣ್ಣ ತನ್ನಿಸಲು ಹೊರಟಿರುವುದು ಯಾವ ನ್ಯಾಯ? ಖ್ಯಾತ ನಿರ್ದೇಶಕರುಗಳಾದ ಎಸ್.ವಿ.ರಾಜೇಂದ್ರ ಸಿಂಗ್‍ಬಾಬು, ಡಿ.ರಾಜೇಂದ್ರ ಬಾಬು, ಮಹೇಶ್‍ಬಾಬು, ಎನ್.ಓಂ ಪ್ರಕಾಶ್‍ರಾವ್, ಎಂ.ಎಸ್.ರಮೇಶ್ ನಾಗಾಭರಣ ರಂತಹ ದಿಗ್ಗಜ್ಜರು ಸುಲಲಿತ ಚಿತ್ರೀಕರಣಕ್ಕಾಗಿ ಮೊದಲ ಪ್ರಾಧಾನ್ಯತೆ ಕೊಡುವುದು ಮೈಸೂರು ಜಿಲ್ಲೆಗೇನೆ. ನೀರು ಹಳ್ಳದ ಕಡೆಗೆ ಹರಿಯುವುದು ವಾಡಿಕೆ. ಆದರೆ ನಮ್ಮನ್ನಾಳುವವರು ದಿಣ್ಣೆಯ ಕಡೆಗೆ. ಹರಿಸಲು ಹೊರಟಿರುವುದು ಎಂಥ ವಿಪರ್ಯಾಸ ಈಗ ನಿರ್ಮಿಸ ಹೊರಟಿರುವುದು ಕೃತಕ ಚಿತ್ರನಗರ ಅಷ್ಟೇ. ಯಾರ ತಪ್ಪಸ್ಸಿನ ಫಲವೋ ಏನೋ ಪ್ರಕೃತಿದತ್ತವಾದ ಚಿತ್ರನಗರಿ ಮೈಸೂರು ಜಿಲ್ಲೆಯಲ್ಲಿ ಧರೆಗಿಳಿದಿದೆ. ಬರೀ ಕನ್ನಡ ಚಿತ್ರರಂಗ ಮಾತ್ರವಲ್ಲ! ಭಾರತೀಯ ಚಿತ್ರರಂಗ ಅಷ್ಟೇ ಅಲ್ಲ, “ಹಾಲಿವುಡ್” ಚಿತ್ರರಂಗದವರು ಸಹ ಭಾರತೀಯ ಗ್ರಾಮೀಣ ಸೊಗಡು ಇರುವ ಕಥೆಗಳಿಗೆ ಮೊದಲ ಪ್ರಾಶಸ್ತ್ಯ ಕೊಡುವುದು ಮೈಸೂರು ಜಿಲ್ಲೆಗೇನೆ ಎಂದರೆ ಅತಿಶಯೋಕ್ತಿ ಆಗಲಾರದು, ಅದಕ್ಕೆ ಉದಾಹರಣೆ ಎಂಬಂತೆ. ಸಾವಿರದ ಒಂಭೈನೂರ ತೊಂಬತ್ತಾರು(1996)ರಲ್ಲಿ ಇಟಲಿ ದೇಶದ ಫಿಲಂ ಪ್ರೊಡಕ್ಷನ್ ರವರು ಒಂದು ಮೈಸೂರಿನ ಹತ್ತಾರು ಹೋಟೆಲ್‍ಗಳಲ್ಲಿ ಬೀಡು ಬಿಟ್ಟು ನಮ್ಮ ಬಾಲಿವುಡ್ ನಟರಾದ “ಕಬೀರ್‍ಬೇಡಿಯವರನ್ನು ನಾಯಕನನ್ನಾಗಿ “ಟ್ರಿಯಾಂಫ್ ಆಫ್ ಸ್ಯಾಂಡೋಕನ್” ಎಂಬ ಚಿತ್ರದ ತಯಾರಿಕೆಗಾಗಿ ನಿರಂತರ ಆರು ತಿಂಗಳ ಕಾಲ ಠಿಕಾಣಿ ಹೊಡಿತ್ತು! ಆಗ ನನ್ನನ್ನು ಸಹ ಪೆಸ್ಟ್ ಕಂಟ್ರೋಲ್ ಸೇಫ್ಟಿ ಟೀಂನಲ್ಲಿ ಹುಳ ಹುಪ್ಪಟೆ, ಕ್ರಿಮಿ ಕೀಟಗಳಿಂದ ಚಿತ್ರೀಕರಣಕ್ಕೆ ಅಡೆತಡೆಯಾಗಬಾರದೆಂದು ನಿಯೋಜಿಸಿಕೊಂಡಿದ್ದರು. ಆಗ ನಾನು ಸಹ ಆರ್ಥಿಕವಾಗಿ ಸ್ವಲ್ಪ ಏಳಿಗೆ ಕಂಡೆ. ಅವರ ಮೇಕಪ್, ಕಾಸ್ಟ್ಯೂಂ ಬದಲಾಯಿಸುವ ಕ್ಯಾಮರಾಮಾನ್‍ಗಳ ಸ್ವಚ್ಛತೆಗಾಗಿ ಒಂದು ಪೌರ ಕಾರ್ಮಿಕ ಕುಟುಂಬವೇ ಅಲ್ಲಿ ಬಿಡಾರ ಹೂಡಿತ್ತು. ಚಿತ್ರೀಕರಣಕ್ಕೆ ಬೇಕಾದ ಸಂಪನ್ಮೂಲಗಳು ಕೈಗೆಟಕುವ ದರದಲ್ಲಿ ಸಿಗುತ್ತವೆ. ಟ್ರಾಫಿಕ್ ಜಾಮ್ ಸಮಸ್ಯೆ ಎಂಬುದು ಇಲ್ಲವೇ ಇಲ್ಲ. ಇಂತಹ ಯಾವುದೇ. ಸೌಲಭ್ಯಗಳು ರಾಮ ನಗರದಲ್ಲಾಗಲೀ ಅಥವಾ ಹೆಸರ ಘಟ್ಟದಲ್ಲಾಗಲೀ ಸಿಗಲು ಸಾಧ್ಯವೇ ಇಲ್ಲ. ಚಿತ್ರರಂಗದ ಕಷ್ಟ-ಸುಖ, ಸಾಧಕ-ಬಾಧಕಗಳನ್ನು ಬಿಲ್ಲವರು ನಿರ್ಮಾಪಕರು ಮತ್ತು ನಿರ್ದೇಶಕರುಗಳು ಚಿತ್ರನಗರ ಎಲ್ಲಿ ಸ್ಥಾಪಿಸಬೇಕು ಎಂಬ ಅಂತಿಮ ನಿರ್ಧಾರವನ್ನು ಅವರ ಹೆಗಲಿಗೆ ಹಾಕುವುದು ಒಳಿತು. ಇದರ ಮಧ್ಯೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಠಕ್ಕೆ ಬಿದ್ದು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಚಿತ್ರನಗರಿಯನ್ನು ಮೈಸೂರು ಜಿಲ್ಲೆಯಲ್ಲಿಯೇ ಉಳಿಸಲಿ ಮತ್ತು ಮೈಸೂರು ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂಬುದೇ ನಮ್ಮ ಕೋರಿಕೆ.

-ಎಂ.ಸಿದ್ದರಾಜು, 1689, ಕಾವೇರಿ ಮುಖ್ಯರಸ್ತೆ, ರಾಘವೇಂದ್ರನಗರ, ಮೈಸೂರು.

Translate »