`ಪಾಂಚಜನ್ಯ’ದಂತೆ `ಪ್ರಜಾಧ್ವನಿ’ ಯಾತ್ರೆ ಯಶಸ್ವಿ
ಮೈಸೂರು

`ಪಾಂಚಜನ್ಯ’ದಂತೆ `ಪ್ರಜಾಧ್ವನಿ’ ಯಾತ್ರೆ ಯಶಸ್ವಿ

January 14, 2023

ಮೈಸೂರು, ಜ.13(ಎಸ್‍ಬಿಡಿ)- ಪಾಂಚಜನ್ಯ ಯಾತ್ರೆಯಂತೆ ಪ್ರಜಾಧ್ವನಿ ಯಾತ್ರೆಯೂ ಯಶಸ್ವಿಯಾಗಲಿದ್ದು, ಮುಂದಿನ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‍ಗೆ ಅಧಿಕಾರ ನೀಡಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ `ಪ್ರಜಾಧ್ವನಿ ಯಾತ್ರೆ’ ಬಗ್ಗೆ ಮಾಹಿತಿ ನೀಡಿದ ಅವರು, ಎಸ್.ಎಂ.ಕೃಷ್ಣ ಅವರ ನೇತೃತ್ವದಲ್ಲಿ ನಡೆದಿದ್ದ ಪಾಂಚಜನ್ಯ ಯಾತ್ರೆ ಯಶಸ್ವಿಯಾಗಿ ಕಾಂಗ್ರೆಸ್‍ಗೆ ಬಹುಮತ ಲಭಿಸಿದ್ದರಿಂದ ಕೃಷ್ಣ ಅವರು ಮುಖ್ಯಮಂತ್ರಿ ಯಾಗಿದ್ದರು. ಹಾಗೆಯೇ ಪ್ರಜಾಧ್ವನಿ ಯಾತ್ರೆಯೂ ಯಶಸ್ವಿಯಾಗಲಿದ್ದು, ಮತ ದಾರರು ಕಾಂಗ್ರೆಸ್‍ಗೆ ಬಹುಮತ ನೀಡಲಿ ದ್ದಾರೆಂಬ ವಿಶ್ವಾಸ ಗಟ್ಟಿಯಾಗಿದೆ ಎಂದರು.

ದಕ್ಷಿಣ ಭಾರತದಲ್ಲೇ ಕರ್ನಾಟಕದ ಜನತೆ ಬಿಜೆಪಿಗೆ 2008ರಲ್ಲಿ ಅವಕಾಶ ನೀಡಿ ದ್ದರು. ಆದರೆ ಆಗ ಮೂವರು ಸಿಎಂ ಆದರು. 6 ಸಚಿವರು ಭ್ರಷ್ಟಾಚಾರದಿಂದ ಜೈಲಿಗೆ ಹೋಗಿದ್ದರು. ಇದೀಗ ಎರಡನೇ ಬಾರಿ ಅಧಿಕಾರ ಹಿಡಿದಿರುವಾಗಲೂ ಮೂವರ ಸಚಿವರು ಭ್ರಷ್ಟಾಚಾರದಿಂದ ರಾಜೀನಾಮೆ ನೀಡಿದ್ದಾರೆ. ದೇಶದ ಅತ್ಯಂತ ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿದೆ. 300 ಆಶ್ವಾಸನೆ ನೀಡಿದ್ದ ಬಿಜೆಪಿ ಈಡೇರಿಸಿದ್ದು 60 ಮಾತ್ರ. ಅಭಿವೃದ್ಧಿ ಸಂಬಂಧ ಮಾತ ನಾಡುವ ಧೈರ್ಯ ಯಾವ ನಾಯಕರಿಗೂ ಇಲ್ಲ. ರಾಮನಗರದಲ್ಲಿ ರಾಮನ ದೇವ ಸ್ಥಾನ, ಮಂಡ್ಯದಲ್ಲಿ ಹನುಮಂತನ ದೇವ ಸ್ಥಾನ ಕಟ್ಟಿಸಬೇಕೆಂದು ಭಾವನಾತ್ಮಕ ವಿಚಾರ ಗಳ ಬಗ್ಗೆಯೇ ಮಾತನಾಡುತ್ತಾರೆ. ಆಡಳಿತ ವಿರೋಧಿ ಅಲೆ ಎದ್ದಿದೆ. ಹಾಗಾಗಿ ಜನ ಅಭಿ ವೃದ್ಧಿಯೇ ಮಾನದಂಡವಾಗಿರುವ ಕಾಂಗ್ರೆಸ್ ಬೆಂಬಲಿಸುವುದು ಖಚಿತ ಎಂದರು.

ಗೆಲುವೇ ಮಾನದಂಡ: ಈವರೆಗೆ ಚುನಾವಣೆ ಘೋಷಣೆ ಬಳಿಕ ಸಿದ್ಧತಾ ಪ್ರಕ್ರಿಯೆ ಆರಂಭವಾಗುತ್ತಿತ್ತು. ಆದರೆ ಈ ಬಾರಿ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸ ಲಾಗಿದೆ. ಪ್ರತಿ ಕ್ಷೇತ್ರಕ್ಕೂ ಉಸ್ತುವಾರಿ ನೇಮಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಪಕ್ಷದ ಪ್ರಮುಖರಾದ ರಣದೀಪ್ ಸಿಂಗ್ ಸುರ್ಜೇ ವಾಲ ಹಾಗೂ ಕೆ.ಸಿ.ವೇಣುಗೋಪಾಲ್ ಅವರು ನಾಳೆ ಉಸ್ತುವಾರಿಗಳ ಸಭೆ ನಡೆ ಸಲಿದ್ದಾರೆ. ಮುಂದಿನ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು ಗೆಲುವೇ ಮಾನದಂಡ ಎನ್ನುವ ರೀತಿಯಲ್ಲಿ ಅಭ್ಯರ್ಥಿ ಗಳ ಆಯ್ಕೆ ಮಾಡಿ, ದೆಹಲಿಯಲ್ಲಿ ಪಟ್ಟಿ ಪ್ರಕಟಿಸುವುದರಿಂದ ಯಾವುದೇ ಗೊಂದಲ ವಾಗದು ಎಂದು ಅಭಿಪ್ರಾಯಿಸಿದರು.

ಪ್ರತಿ ಜಿಲ್ಲೆಯಲ್ಲೂ ಘೋಷಣೆ: ಪ್ರಜಾ ಧ್ವನಿ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮಾತನಾಡಿ, ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಅಧಿ ಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಕಲ್ಪಿಸು ತ್ತೇವೆಂದು ಘೋಷಿಸಿದ್ದು, ರಾಜ್ಯದೆಲ್ಲೆಡೆ ಭಾರೀ ಚರ್ಚೆಯಲ್ಲಿದೆ. ಹೀಗೆಯೇ ಯಾತ್ರೆಯಲ್ಲಿ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಕಾರ್ಯಕ್ರಮ ಘೋಷಿ ಸುವ ಚಿಂತನೆ ಇದೆ. ಅವುಗಳನ್ನು ಈಡೇರಿಸುವ ವಿಶ್ವಾಸವನ್ನೂ ಜನರಲ್ಲಿ ತುಂಬಲಾಗುವುದು. ಮನಿ ಮೇಕಿಂಗ್ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನ ರೋಸಿ ಹೋಗಿದ್ದಾರೆ. ಎಲ್ಲಾ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲೂ ಸಂಪೂರ್ಣ ವಿಫಲವಾಗಿರುವ ಬಿಜೆಪಿಯನ್ನು ಜನ ದಿಕ್ಕರಿಸಲಿದ್ದಾರೆ ಎಂದು ಹೇಳಿದರು.

ಹೆಚ್ಚಿದ ಸರ್ಕಾರದ ಸಾಲ: ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಸರ್ಕಾರದ ಸಾಲ ಏರಿಕೆಯಾಗುತ್ತಲೇ ಇದೆ. ಕೇಂದ್ರದಿಂದ 14 ಮತ್ತು 15ನೇ ಹಣಕಾಸು ಯೋಜನೆಯಡಿ ರಾಜ್ಯಕ್ಕೆ ಬರಬೇಕಿರುವ 15 ಸಾವಿರ ಕೋಟಿ ಹಣವನ್ನು ಕೇಳಲು ಬಿಜೆಪಿ ಸಂಸದರಿಗೆ ಧೈರ್ಯವಿಲ್ಲ. ಜಿಎಸ್‍ಟಿ ಸಂದಾಯದಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕ, ಕೇಂದ್ರಕ್ಕೆ ದೊಡ್ಡ ನಿಧಿಯಂತಿದೆ. ಪ್ರಸಕ್ತ ಶೇ.80ರಷ್ಟು 1.05 ಲಕ್ಷ ಕೋಟಿ ರೂ. ಈಗಾಗಲೇ ಸಂದಾಯವಾಗಿದೆ. ಕರ್ನಾಟಕದಲ್ಲಿ 86 ಸಾವಿರ ಕೋಟಿ ರೂ. ನೆರೆ ನಷ್ಟವಾಗಿದೆ ಎಂದು ಎನ್‍ಡಿಆರ್‍ಎಫ್ ವರದಿ ನೀಡಿದ್ದರೂ ಕೇಂದ್ರ ಬಿಡುಗಡೆ ಮಾಡಿದ್ದು 10 ಸಾವಿರ ಕೋಟಿ ಮಾತ್ರ. ರಾಜ್ಯ ಸರ್ಕಾರ 86 ಸಾವಿರ ಕೋಟಿಗೆ ವಲ್ರ್ಡ್ ಬ್ಯಾಂಕ್ ಮುಂದೆ ನಿಲ್ಲುವಂತಾಯ್ತು. ಬಜೆಟ್‍ನಲ್ಲಿ ಮೀಸಲಿಟ್ಟ ಶೇ.50ರಷ್ಟು ಹಣವನ್ನೂ ಖರ್ಚು ಮಾಡಿಲ್ಲ. ಜಿಎಸ್‍ಟಿ ಯಿಂದ ಯಾವುದೇ ಯೋಜನೆಯಿಲ್ಲ. ಸಿಎಂ ಬಳಗದಲ್ಲೇ ವರ್ಗಾವಣೆ ದಂದೆ, 40 ಪರ್ಸೆಂಟ್ ವ್ಯವಹಾರ ನಡೆಯುತ್ತಿದೆ. ಬಿಜೆಪಿ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರದ ಬಗ್ಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇನ್ನಿತರ ನಾಯಕರ ನೇತೃತ್ವದಲ್ಲಿ ಯಾತ್ರೆ ಮೂಲಕ ಜನರಿಗೆ ತಿಳಿಸಲಿದ್ದೇವೆ ಎಂದರು. ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕರಾದ ವಾಸು, ಬಾಲರಾಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »