ಸರಳ, ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತಗೊಂಡ ಸಿದ್ದಲಿಂಗಪುರ ಷಷ್ಠಿ ಜಾತ್ರೆ
ಮೈಸೂರು

ಸರಳ, ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತಗೊಂಡ ಸಿದ್ದಲಿಂಗಪುರ ಷಷ್ಠಿ ಜಾತ್ರೆ

December 21, 2020

ಮೈಸೂರು,ಡಿ.20(ಎಂಟಿವೈ)- ಅಪಾರ ಸಂಖ್ಯೆಯ ಭಕ್ತರ ಆಗಮನದೊಂದಿಗೆ ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದ್ದ ಮೈಸೂರು ತಾಲೂಕಿನ ಸಿದ್ದಲಿಂಗಪುರದ ಶ್ರೀ ಷಷ್ಠಿ ಸುಬ್ರಹ್ಮಣ್ಯೇಶ್ವರಸ್ವಾಮಿ ಜಾತ್ರೆ ಭಾನುವಾರ ಕೋವಿಡ್-19 ಹಿನ್ನೆಲೆಯಲ್ಲಿ ಭಕ್ತರ ಪ್ರವೇಶ ನಿರ್ಬಂಧದ ನಡುವೆ ಸರಳ ಹಾಗೂ ಸಾಂಪ್ರದಾಯಿಕ ಪೂಜೆಗಷ್ಟೇ ಸೀಮಿತವಾಗಿ ಆಚರಿಸಲಾಯಿತು.

ಹಳೆ ಮೈಸೂರು ಭಾಗದಲ್ಲಿ ಶ್ರೀ ಷಷ್ಠಿ ಸುಬ್ರಹ್ಮಣ್ಯೇಶ್ವರಸ್ವಾಮಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಸಿದ್ದಲಿಂಗಪುರದಲ್ಲಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ಷಷ್ಠಿ ಜಾತ್ರಾ ಮಹೋ ತ್ಸವವನ್ನು ಈ ಬಾರಿ ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಕೇವಲ ಸಾಂಪ್ರದಾಯಿಕ ಪೂಜೆ ಹಾಗೂ ಸರಳ ಆಚರಣೆಗಷ್ಟೇ ಸೀಮಿತಗೊಳಿಸಲಾಗಿತ್ತು. ಜಿಲ್ಲಾಡಳಿತ ದೇವಾಲಯದ ಬಳಿ ಭಕ್ತರ ಆಗಮನಕ್ಕೆ ನಿಷೇಧ ಹೇರಿದ್ದರಿಂದ ನೂರಾರು ಮಂದಿ ಭಕ್ತರು ದೂರದಿಂ ದಲೇ ದೇವಾಲಯದತ್ತ ಕೈ ಮುಗಿದು ಪ್ರಾರ್ಥಿಸಿ, ಮನೆಗೆ ಮರಳಿದರು.

ಸಾಂಪ್ರದಾಯಿಕ ಪೂಜೆ: ಪ್ರತಿವರ್ಷ ಮಾರ್ಗಶಿರ ಮಾಸದ ಸ್ಕಂದ(ಶುದ್ಧ) ಷಷ್ಠಿಯ ದಿನ ಸಿದ್ದಲಿಂಗಪುರದ ಶ್ರೀ ಷಷ್ಠಿ ಸುಬ್ರಹ್ಮ ಣ್ಯೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಜಾತ್ರೆ ನಡೆಯುವುದು ಸಂಪ್ರ ದಾಯ. ಅದರಂತೆ ಇಂದು ಆಚರಿಸಿದ ಷಷ್ಠಿ ಜಾತ್ರೆಯಲ್ಲಿ ವಿವಿಧ ಪೂಜಾ ಕೈಂಕರ್ಯ ಜರುಗಿದವು. ಶ್ರೀ ಷಷ್ಠಿ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯದ ಅರ್ಚಕ ಎಂ.ವಿ.ಸುಬ್ರಹ್ಮಣ್ಯ ನೇತೃತ್ವದಲ್ಲಿ ಮುಂಜಾನೆ 3 ಗಂಟೆಯಿಂ ದಲೇ ಸುಬ್ರಹ್ಮಣೇಶ್ವರ ಸ್ವಾಮಿ ಮೂರ್ತಿಗೆ ಮಹಾನ್ಯಾಸಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾ ರ್ಚನೆ, ಅಷ್ಟ್ಟಾವಧಾನ ಸೇವೆ ನೆರವೇರಿಸ ಲಾಯಿತು. ಬೆಳಗ್ಗೆ 6 ಗಂಟೆವರೆಗೂ ವಿಶೇಷ ಪೂಜಾ ಕೈಂಕರ್ಯ ಜರುಗಿದವು.
ಬೆಳ್ಳಿ ನಾಗಾಭರಣ ಧಾರಣೆ: ಸುಮಾರು 300ಕ್ಕೂ ಹೆಚ್ಚು ವರ್ಷಗಳ ಹಿಂದೆ ನಿರ್ಮಿಸ ಲಾಗಿರುವ ಈ ದೇವಾಲಯ ಪುರಾತನ ಪ್ರಸಿದ್ಧವಾಗಿದೆ. ಮೈಸೂರು ಭಾಗದಲ್ಲಿ ಚಿಕ್ಕ ಸುಬ್ರಹ್ಮಣ್ಯ ಎಂದೇ ಹೆಸರು ಪಡೆದಿರುವ ಈ ಕ್ಷೇತ್ರ ಹಲವಾರು ನಂಬಿಕೆ ಮತ್ತು ಆಚ ರಣೆಗೆ ಬುನಾದಿ ಹಾಕಿಕೊಟ್ಟಿದೆ. ಈ ದೇವಾ ಲಯಕ್ಕೆ ಮೈಸೂರು ರಾಜವಂಶ್ಥರಾದ ಜಯ ಚಾಮರಾಜೇಂದ್ರ ಒಡೆಯರ್ ಅವರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹೆಸರಿನಲ್ಲಿ ಬೆಳ್ಳಿಯ ನಾಗಾಭರಣ ವನ್ನು ಮಾಡಿಸಿ 1973ರಲ್ಲಿ ಈ ದೇವಾಲಯಕ್ಕೆ ಕೊಡುಗೆ ನೀಡಿದ್ದಾರೆ. 6 ಅಡಿ ಎತ್ತರದ ಹುತ್ತಕ್ಕೆ 7 ಹೆಡೆ, 14 ಕೆಂಪು ಕಣ್ಣು, 7 ಹಸಿರು ಪಚ್ಚೆ ನಾಲಿಗೆಯುಳ್ಳ ಬೆಳ್ಳಿಯ ನಾಗಾ ಭರಣವನ್ನು ಪ್ರತಿವರ್ಷ ಷಷ್ಠಿ ದಿನ ದಂದು ಧರಿಸಲಾಗುತ್ತದೆ. ಅರಮನೆಯಲ್ಲಿ ಈ ನಾಗಾಭರಣವಿದ್ದು, ಬಿಗಿಭದ್ರತೆಯಲ್ಲಿ ತಂದು ಜಾತ್ರೆ ಮುಗಿದ ನಂತರ, ಅರ ಮನೆಗೆ ಕೊಂಡೊಯ್ಯಲಾಗುತ್ತದೆ. ಇಂದು ಮುಂಜಾನೆ ವಿಶೇಷ ಪೂಜಾ ಕೈಂಕರ್ಯ ಮುಗಿದ ನಂತರ ನಾಗಾಭರಣ ಧರಿಸಿ ಅಲಂಕಾರ ಮಾಡಲಾಯಿತು.

ದೇವಾಲಯದ ಹೊರಗೆ ಕೈ ಮುಗಿದರು: ಸಿದ್ದಲಿಂಗಪುರದ ಷಷ್ಠಿ ಜಾತ್ರೆ ಮೈಸೂರು ಭಾಗದಲ್ಲಿ ತನ್ನದೇ ಆದ ಪಾವಿತ್ರ್ಯತೆ ಮತ್ತು ಮಹತ್ವವನ್ನು ಹೊಂದಿದೆ. ಅಲ್ಲದೆ ಸಿದ್ದ ಲಿಂಗಪುರ, ಕಳಸ್ತವಾಡಿ, ಮೇಳಾಪುರ, ನಾಗನಹಳ್ಳಿ, ಶ್ರೀರಂಗಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಈ ಜಾತ್ರಾ ಮಹೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಹೊಂದಿದ್ದಾರೆ. ಅಲ್ಲದೆ ವಿವಾಹ ವಾಗದೇ ಇರುವವರು, ಮಕ್ಕಳಾಗದೇ ಇರುವವರು ಹರಕೆ ಹೊತ್ತು ಷಷ್ಠಿ ಜಾತ್ರೆ ಯಂದ ಸುಬ್ರಹ್ಮಣೇಶ್ವರ ಸ್ವಾಮಿ ದೇವಾ ಲಯಕ್ಕೆ ಬಂದು ಹಾಲು-ತುಪ್ಪ ನೀಡಿ, ಪೂಜೆ ಸಲ್ಲಿಸುವುದು ವಾಡಿಕೆ. ಪ್ರತಿವರ್ಷ ಮುಂಜಾನೆಯಿಂದ ರಾತ್ರಿವರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಈ ಬಾರಿ ಪ್ರವೇಶ ನಿರ್ಬಂಧಿಸಿದ್ದರೂ ವಿವಿಧೆಡೆಯಿಂದ ಭಕ್ತರು ದೇವಾಲಯದತ್ತ ಆಗಮಿಸುತ್ತಲೇ ಇದ್ದರಲ್ಲದೆ ಮುಂಭಾಗದ ರಸ್ತೆಯಲ್ಲಿಯೇ ನಿಂತು ಕೈ ಮುಗಿಯುತ್ತಿದ್ದರು.

ಹುತ್ತಕ್ಕೆ ತನಿ ಎರೆದರು: ಭಕ್ತರಿಗೆ ಪ್ರವೇಶ ನಿರ್ಬಂಧಿಸಿರುವ ವಿಚಾರ ತಿಳಿಯದೇ ತಂಡೋಪ ತಂಡವಾಗಿ ಭಕ್ತರು ದೇವಾಲಯದತ್ತ ಬರುತ್ತಲೇ ಇದ್ದರು. ಎರಡೂ ಬದಿ ಯಲ್ಲೂ ಪೊಲೀಸರು ದೇವಾಲಯದತ್ತ ಭಕ್ತರು ಬರದಂತೆ ಕಟ್ಟೆಚ್ಚರ ವಹಿಸಿದ್ದರು. ಇದರಿಂ ದಾಗಿ ದೇವಾಲಯದಿಂದ 600 ಮೀಟರ್ ದೂರದಲ್ಲಿದ್ದ ಗದ್ದೆಯೊಂದಕ್ಕೆ ಹೊಂದಿ ಕೊಂಡಂತೆ ಇದ್ದ ಖಾಲಿ ಜಾಗದಲ್ಲಿ ಹುತ್ತಕ್ಕೆ ಬಂದ ಭಕ್ತರು ಹಾಲೆರೆಯಲು(ತನಿ) ಮುಂದಾದರು. ಇದರಿಂದ ಕ್ಷಣ ಮಾತ್ರದಲ್ಲಿ ಆ ಹುತ್ತ ಇದ್ದ ಸ್ಥಳ ಭಕ್ತಿಯ ತಾಣವಾಗಿ, ಜಾತ್ರಾ ಸೊಬಗು ಮೂಡಿಸುವ ಸ್ಥಳವಾಗಿ ಮಾರ್ಪಟ್ಟಿತು. ಆ ಜಾಗದ ಬಳಿ ವಾಹನ ನಿಲ್ಲಿಸಲು ವಿಶಾಲವಾದ ಜಾಗ ಇದ್ದಿದ್ದರಿಂದ ಬೇರೆಡಿಯಿಂದ ಭಕ್ತರಿಗೆ ನೆರವಾಯಿತು. ಇದನ್ನೇ ಸದುಪಯೋಗಪಡಿಸಿಕೊಂಡ ಕೆಲ ವ್ಯಾಪಾರಿಗಳು ವಿವಿಧ ವಸ್ತುಗಳು, ಆಟಿಕೆ ಮಾರಾಟ ಮಾಡಲು ಮುಂದಾದರು. ಇದರಿಂದ ಆ ಸ್ಥಳದಲ್ಲಿ ಜಾತ್ರಾ ಮೆರಗು ಕಟ್ಟಿದ್ದರಿಂದ ದೇವಾಲಯದತ್ತ ಬರುತ್ತಿದ್ದ ಭಕ್ತರೆಲ್ಲರೂ ಹುತ್ತದತ್ತ ತೆರಳುವಂತಾಯಿತು.
ಷಷ್ಠಿಯ ದಿನ ಪ್ರತಿವರ್ಷ ಚಿಕ್ಕ ರಥೋತ್ಸವವನ್ನು ನಡೆಸಲಾಗುತ್ತಿತ್ತು. ಜಾತ್ರೆಯಂದು ಮಧ್ಯಾಹ್ನ 12ಕ್ಕೆ ದೇವಾಲಯದ ಮುಂಭಾಗ ಒಂದು ಸುತ್ತು ರಥೋತ್ಸವ ನೆರವೇರುತ್ತಿತ್ತು. ಈ ಬಾರಿ ಕೊರೊನಾದಿಂದ ರಥೋತ್ಸವಕ್ಕೆ ತಡೆಹಿಡಿಯಲಾಗಿದ್ದು, ಅದರ ಬದಲಾಗಿ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ದೇವಾಲಯದ ಆವರಣದಲ್ಲಿಯೇ ಪ್ರಾಕಾರೋತ್ಸವ ನಡೆಸಲಾಯಿತು.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಪುತ್ರ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಹಾಗೂ ಇನ್ನಿತರರೊಂದಿಗೆ ಸಿದ್ದಲಿಂಗಪುರದ ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆದರು. ಉರಗ ತಜ್ಞ ಸ್ನೇಕ್ ಶ್ಯಾಮ್ ಹಾಗೂ ಇನ್ನಿತರರು ದರ್ಶನ ಪಡೆದರು. ಮೇಟಗಳ್ಳಿ ಠಾಣೆ ಇನ್ಸ್‍ಪೆಕ್ಟರ್ ಮಲ್ಲೇಶ್, ಸಬ್‍ಇನ್ಸ್‍ಪೆಕ್ಟರ್ ಸ್ಮಿತಾ ನೇತೃತ್ವದಲ್ಲಿ ದೇವಾಲಯ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Translate »