ಮೈಸೂರು, ಮಾ.23(ಆರ್‍ಕೆಬಿ)- ಕೊರೊನಾ ವೈರಸ್ ತಡೆಗಟ್ಟುವ ದೃಷ್ಟಿ ಯಿಂದ ನಿನ್ನೆಯಷ್ಟೇ ಜನತಾ ಕಫ್ರ್ಯೂ ಯಶಸ್ವಿಯಾಗಿ ಪೂರೈಸಿದ ಮೈಸೂರಿನಲ್ಲಿ ಸೋಮವಾರವೂ ಬಂದ್ ವಾತಾವರಣ ಕಂಡು ಬಂದಿತು. ಸರ್ಕಾರ ಲಾಕ್‍ಡೌನ್ ಜಾರಿಗೊಳಿಸಿ, ಕೆಲ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಸಾರಿಗೆ ಬಸ್‍ಗಳು ರಸ್ತೆಗಿಳಿಯ ಲಿಲ್ಲ. ಹೀಗಾಗಿ ಮೈಸೂರು ನಗರ ಬಸ್ ನಿಲ್ದಾಣ ಮತ್ತು ಗ್ರಾಮಾಂತರ ಬಸ್ ನಿಲ್ದಾಣ ದಲ್ಲಿ ಜನರು ಕಂಡು ಬರಲಿಲ್ಲ. ಪೊಲೀಸರು ನಿಲ್ದಾಣದಲ್ಲಿ ಕಾವಲಿದ್ದು, ಜನರು ಬಸ್ ನಿಲ್ದಾಣದ ಒಳಗೆ ಪ್ರವೇಶಿಸದಂತೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದರು.
ಮಾ.31ರವರೆಗೆ ರೈಲು ಸಂಚಾರ ರದ್ದು ಗೊಳಿಸಿರುವ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣ ಬಿಕೋ ಎನ್ನುತ್ತಿತ್ತು. ನಿಲ್ದಾಣದ ಮುಖ್ಯ ಪ್ರವೇಶ ದ್ವಾರವನ್ನು ಬ್ಯಾರಿಕೇಡ್‍ಗಳಿಂದ ಮುಚ್ಚಲಾಗಿತ್ತು. ಪೊಲೀಸ್ ಕಾವಲು ಹಾಕಲಾಗಿತ್ತು.
ದೇವರಾಜ ಅರಸು ರಸ್ತೆ, ಸಯ್ಯಾಜಿ ರಾವ್ ರಸ್ತೆ, ಶಿವರಾಂಪೇಟೆ, ಮಂಡಿ ಮೊಹಲ್ಲಾ ಸೇರಿದಂತೆ ನಗರದ ಬಹುತೇಕ ರಸ್ತೆಗಳಲ್ಲಿ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಹೀಗಾಗಿ ಬಂದ್ ವಾತಾವರಣ ಕಂಡು ಬಂದಿತು.
ಅಗತ್ಯ ವಸ್ತುಗಳಾದ ತರಕಾರಿ, ಹಾಲು, ಔಷಧಿ, ಬ್ಯಾಂಕ್, ಎಟಿಎಂ, ಅಂಚೆ ಕಚೇರಿ, ಕಿರಾಣಿ ಹಾಗೂ ಪೆಟ್ರೋಲ್ ಪಂಪ್‍ಗಳು ಕಾರ್ಯ ನಿರ್ವಹಿಸಿದವು. ಹೀಗಾಗಿ ಅಲ್ಲೆಲ್ಲಾ ಜನಜಂಗುಳಿ ಇತ್ತು. ಸರ್ಕಾರಿ ಕಚೇರಿಗಳು ತೆರೆದಿದ್ದರೂ ಜನ ಸಂದಣಿ ಇರಲಿಲ್ಲ. ಬಸ್, ರೈಲು ವ್ಯವಸ್ಥೆ ಇರಲಿಲ್ಲವಾದ್ದರಿಂದ ಕೆಲವು ಕಚೇರಿಗಳಲ್ಲಿ ಸಿಬ್ಬಂದಿ ಕಡಿಮೆ ಸಂಖ್ಯೆಯಲ್ಲಿದ್ದರು.ಹೋಟೆಲ್, ಕ್ಯಾಂಟೀನ್‍ಗಳು ಮುಚ್ಚಲ್ಪಟ್ಟಿದ್ದವು. ಕೆಲವು ಹೋಟೆಲ್‍ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಮಾತ್ರ ಇತ್ತು.