ಬ್ಯಾಂಕ್‍ಗಳಲ್ಲಿ ಕನಿಷ್ಠ ಅಗತ್ಯ ಸೇವೆ ಮಾತ್ರ ಲಭ್ಯ
ಮೈಸೂರು

ಬ್ಯಾಂಕ್‍ಗಳಲ್ಲಿ ಕನಿಷ್ಠ ಅಗತ್ಯ ಸೇವೆ ಮಾತ್ರ ಲಭ್ಯ

March 24, 2020
  • ಎಟಿಎಂ ಸೇವೆ ಎಂದಿನಂತೆ ಲಭ್ಯ
  • ಬ್ಯಾಂಕ್ ಶಾಖೆಗಳಲ್ಲಿ ಸಾಮಾಜಿಕ ಅಂತರಕ್ಕೆ ಆದ್ಯತೆ
  • ಸಣ್ಣಪುಟ್ಟ ಕೆಲಸಕ್ಕೆ ಬ್ಯಾಂಕಿಗೆ ಹೋಗದಂತೆ ಮನವಿ
  • ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ಪರ್ಯಾಯವಾಗಿ ಬಳಸಲು ಸಲಹೆ

ಮೈಸೂರು, ಮಾ.23(ಪಿಎಂ)- ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರದ ಆದೇಶದಂತೆ ಮೈಸೂರು ಜಿಲ್ಲೆ ಲಾಕ್ ಡೌನ್ ನಿರ್ಬಂಧಕ್ಕೆ ಒಳಗಾಗಿದೆ. ಇಲ್ಲಿನ ಬ್ಯಾಂಕಿಂಗ್ ಸೇವೆ ಲಾಕ್‍ಡೌನ್ ನಿರ್ಬಂಧ ದಿಂದ ಹೊರತಾಗಿದ್ದರೂ ಕನಿಷ್ಠ ಅಗತ್ಯ ಸೇವೆಗೆ ಸೀಮಿತಗೊಳಿಸಲಾಗಿದೆ.

ಲಾಕ್‍ಡೌನ್ ನಿರ್ಬಂಧವಿರುವ ಜಿಲ್ಲೆ ಗಳು ಮಾತ್ರವಲ್ಲದೆ, ಕೊರೊನಾ ಹಿನ್ನೆಲೆ ಯಲ್ಲಿ ಇಡೀ ರಾಜ್ಯದಲ್ಲಿ ಬ್ಯಾಂಕಿಂಗ್ ಸೇವೆಯಲ್ಲಿ ಕನಿಷ್ಠ ಅಗತ್ಯ ಸೇವೆ ಮಾತ್ರ ಲಭ್ಯವಾಗಲಿದೆ. ರಾಜ್ಯ ಮಟ್ಟದ ಬ್ಯಾಂಕರ್ಸ್ ಕಮಿಟಿ (ಎಸ್‍ಎಲ್‍ಬಿಸಿ) ನಿರ್ದೇಶನದಂತೆ ಇಡೀ ರಾಜ್ಯದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಅದರಂತೆ ಇಡೀ ರಾಜ್ಯದ ಎಲ್ಲಾ ಬ್ಯಾಂಕಿನ ಶಾಖೆಗಳು ಮಾ.31ರವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಕಾರ್ಯ ನಿರ್ವಹಿಸಲಿವೆ. ಈ ವೇಳೆ ಇಂಡಿಯನ್ ಬ್ಯಾಂಕ್ (ಐಬಿಎ) ಅಸೋಸಿಯೇಷನ್ ಸಲಹೆಯಂತೆ ನಗದು ಸಂದಾಯ (ಠೇವಣಿ), ನಗದು ಪಡೆಯುವುದು, ಚೆಕ್‍ಗಳ ವಿಲೇವಾರಿ, ಹಣ ರವಾನೆ ಹಾಗೂ ಸರ್ಕಾರದ ವ್ಯವಹಾರಗಳನ್ನು ಮಾತ್ರ ಮಾಡಲಾಗುತ್ತದೆ. ಎಲ್ಲಾ ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ತೀರಾ ಅಗತ್ಯ ಸೇವೆಗೆ ಮಾತ್ರವೇ ಬ್ಯಾಂಕ್ ಶಾಖೆಗೆ ಬರುವಂತೆ ಐಬಿಎ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ತುರ್ತು ಅಗತ್ಯವಲ್ಲದ ಸೇವೆಗಳಿಗೆ ಪರ್ಯಾಯ ವ್ಯವಸ್ಥೆಗಳನ್ನು ಬಳಸಿಕೊಳ್ಳುವಂತೆ ತಿಳಿಸಲಾಗಿದೆ. ಇಂಟರ್‍ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಡಿಜಿಟಲ್ ವ್ಯವಸ್ಥೆ ಯನ್ನು ಪರ್ಯಾಯವಾಗಿ ಬಳಸಿಕೊಳ್ಳು ವಂತೆ ಮನವಿ ಮಾಡಿದೆ.

ಮೈಸೂರು ನಗರದ ವಿವಿಧ ಬ್ಯಾಂಕ್ ಶಾಖೆಗಳಲ್ಲಿ ಸೋಮವಾರ ಎಲ್ಲಾ ಮುನ್ನೆಚ್ಚ ರಿಕಾ ಕ್ರಮ ಕೈಗೊಳ್ಳಲಾಗಿತ್ತು. ಕೊರೊನಾ ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ `ಸಾಮಾ ಜಿಕ ಅಂತರ’ ಕಾಯ್ದುಕೊಳ್ಳಲು ಆದ್ಯತೆ ನೀಡಲಾಗಿತ್ತು. ಅದರಂತೆ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಜನಸಂದಣಿ ನೆರೆಯಲು ಅವಕಾಶ ನೀಡದೇ 5ರಿಂದ 10 ಮಂದಿ ಯನ್ನು ಮಾತ್ರವೇ ಬ್ಯಾಂಕ್ ಶಾಖೆ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು.

ತಿಲಕನಗರದ ಕೆನರಾ ಬ್ಯಾಂಕ್ ಶಾಖೆ ಯಲ್ಲೂ ಇಂತಿಷ್ಟು ಎಂದು ನಿಗದಿಗೊಳಿಸಿ ಅವರನ್ನು ಒಳ ಹೋಗಲು ಅವಕಾಶ ನೀಡಲಾಗಿತ್ತು. ಆ ಮೂಲಕ ಗುಂಪು ಗೂಡಲು ಹಾಗೂ ಜನಸಂದಣಿ ವ್ಯಾಪಕ ವಾಗಲು ನಿಯಂತ್ರಣ ಹೇರಲಾಗಿತ್ತು. ಅಲ್ಲದೆ, ಕೊರೊನಾ ಹರಡುವಿಕೆ ತಡೆಯುವ ಕುರಿ ತಂತೆ ಹಲವು ಸಂದೇಶ ಒಳಗೊಂಡ ಫಲಕ ವನ್ನು ಮುಖ್ಯ ದ್ವಾರದಲ್ಲಿ ಹಾಕಲಾಗಿತ್ತು.

ಪಾಸ್ ಪುಸ್ತಕ ದಾಖಲಿಸುವುದು, ಬ್ಯಾಲೆನ್ಸ್ ಪರಿಶೀಲಿಸುವುದು ಸೇರಿದಂತೆ ಸಣ್ಣಪುಟ್ಟ ಕೆಲಸಗಳಿಗೆ ಸದ್ಯ ಬ್ಯಾಂಕಿಗೆ ಬರಬೇಡಿ. ಇಂತಹ ಸಂದರ್ಭದಲ್ಲಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಸದ್ಬಳಕೆ ಮಾಡಿಕೊಳ್ಳಿ. ಕೆಲಸ ಮುಗಿಯು ತ್ತಿದ್ದಂತೆ ಬ್ಯಾಂಕ್ ಆವರಣದಿಂದ ಹೊರಡಿ. ಕೆಮ್ಮು, ಸೀನು ಇದ್ದರೆ ಮಾಸ್ಕ್ ಹಾಕಿಕೊಳ್ಳ ಬೇಕು ಅಥವಾ ಕರವಸ್ತ್ರ ಬಳಸಬೇಕು. ಅನಾರೋಗ್ಯವಿದ್ದರೆ ಬ್ಯಾಂಕ್‍ಗೆ ಭೇಟಿ ನೀಡುವುದು ಬೇಡ. ಬ್ಯಾಂಕಿನ ಆವರಣ ದಲ್ಲಿ ನಿಮ್ಮ ಕೈಗಳ ಸ್ಪರ್ಶವನ್ನು ಕನಿಷ್ಠ ಗೊಳಿಸಿ ಎಂಬ ಅಂಶಗಳ ಸಂದೇಶ ಇಲ್ಲಿ ಕಂಡು ಬಂದಿತು. ಈ ಶಾಖೆಯಲ್ಲಿ 11 ಮಂದಿ ಸಿಬ್ಬಂದಿ ಪೈಕಿ ಇಂದು ಮೂವರು ಕರ್ತವ್ಯ ನಿರ್ವಹಿಸಿದರು.

ಶಿವರಾಂಪೇಟೆ ಎಸ್‍ಬಿಐ ಬ್ಯಾಂಕ್, ಸಯ್ಯಾಜಿರಾವ್ ರಸ್ತೆಯ ಎಸ್‍ಬಿಐ ಮೈಸೂರು ಶಾಖೆ ಸೇರಿದಂತೆ ನಗರದ ವಿವಿಧ ಬ್ಯಾಂಕ್‍ಗಳ ಶಾಖೆಗಳಲ್ಲಿ ಇಂದು ಜನಸಂದಣಿಯೂ ಹೆಚ್ಚಾಗಿ ಕಂಡು ಬರಲಿಲ್ಲ. ಆಗಾಗ್ಗೆ ಬ್ಯಾಂಕಿಗೆ ಬರುತ್ತಿದ್ದ ಕೆಲವರನ್ನು ಗುಂಪುಗೂಡಲು ಅವಕಾಶ ನೀಡದೇ ಇಂತಿಷ್ಟು ಮಂದಿ ಎಂದು ವಿಂಗಡಿಸಿ ಬ್ಯಾಂಕಿನ ಒಳಗೆ ಪ್ರವೇಶ ನೀಡಲಾಗುತ್ತಿತ್ತು.

ಕೊರೊನಾ ಪೀಡಿತ ಸೂಕ್ಷ್ಮ ಪ್ರದೇಶದಲ್ಲಿ ಬ್ಯಾಂಕ್ ಶಾಖೆ ಬಂದ್…
ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ಪ್ರದೇಶವನ್ನು ಅಲ್ಲಿನ ಜಿಲ್ಲಾಧಿಕಾರಿಗಳು ಸೂಕ್ಷ್ಮ ಎಂದು ಘೋಷಣೆ ಮಾಡಿದರೆ, ಆ ಪ್ರದೇಶದ ಬ್ಯಾಂಕ್ ಶಾಖೆ ಮುಚ್ಚಲು ಕ್ರಮ ಕೈಗೊಳ್ಳಲು ಎಸ್‍ಎಲ್‍ಬಿಸಿ ನಿರ್ಧರಿ ಸಿದೆ. ಶಾಖೆ ಮುಚ್ಚುವ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಸಮಾ ಲೋಚಿಸಿ, ನಿರ್ಧಾರ ಕೈಗೊಳ್ಳುವಂತೆ ಎಸ್‍ಎಲ್‍ಬಿಸಿ, ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿದೆ.

Translate »