ವಾಣಿಜ್ಯ ಉದ್ದೇಶಕ್ಕೆ ಪಡೆದಿರುವ ಸಾಲದ ಕಂತು ಪಾವತಿಗೆ 6 ತಿಂಗಳ ವಿನಾಯಿತಿಗೆ ಆಗ್ರಹ
ಮೈಸೂರು

ವಾಣಿಜ್ಯ ಉದ್ದೇಶಕ್ಕೆ ಪಡೆದಿರುವ ಸಾಲದ ಕಂತು ಪಾವತಿಗೆ 6 ತಿಂಗಳ ವಿನಾಯಿತಿಗೆ ಆಗ್ರಹ

March 24, 2020

ಮೈಸೂರು, ಮಾ.23(ಎಂಟಿವೈ)- ನೊವೆಲ್ ಕೊರೊನಾ ಹಿನ್ನೆಲೆಯಲ್ಲಿ ವಾಣಿಜ್ಯ ವಹಿವಾಟು ಸ್ಥಗಿತಗೊಂಡಿರುವ ಟ್ಯಾಕ್ಸಿ ಮಾಲೀಕರು ಸೇರಿದಂತೆ ಶ್ರಮಿಕ ವರ್ಗ ಬ್ಯಾಂಕ್ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಮಾಡಿರುವ ಸಾಲದ ಕಂತು ಪಾವತಿಸಲು ಆರು ತಿಂಗಳು ವಿನಾಯಿತಿ ನೀಡುವಂತೆ ಒತ್ತಾಯಿಸಿ ಮೈಸೂರು ರಕ್ಷಣಾ ವೇದಿಕೆ ಯುವ ಘಟಕದ ಕಾರ್ಯಕರ್ತರು ದೇವರಾಜ ಅರಸ್ ರಸ್ತೆಯಲ್ಲಿ ಭಿತ್ತಿಫಲಕ ಪ್ರದರ್ಶಿಸಿ ಗಮನ ಸೆಳೆದರು.

ಇದೇ ಸಂದರ್ಭದಲ್ಲಿ ಮೈಸೂರು ರಕ್ಷಣಾ ವೇದಿಕೆಯ ಯುವ ಘಟಕದ ಅಧ್ಯಕ್ಷ ಗುರುರಾಜ್ ಶೆಟ್ಟಿ ಮಾತನಾಡಿ, ಕೊರೊನಾ ವೈರಾಣು ಜನರನ್ನು ಭಯಭೀತ ಗೊಳಿಸಿದ್ದು, ಕಡಿಮೆ ಅವಧಿಯಲ್ಲಿ ಈ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವ್ಯಾಪಾರ, ವಹಿವಾಟು ಸ್ಥಗಿತಗೊಂಡಿದೆ. ಈ ಹಿಂದೆ ಬ್ಯಾಂಕ್ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಸಾಲಪಡೆದು ಬಂಡವಾಳ ಹೂಡಿದ್ದ ಶ್ರಮಿಕ ವರ್ಗ ದಿನದ ಸಂಪಾದನೆಗೂ ಸಾಧ್ಯವಾಗದೆ ಕಷ್ಟದ ಪರಿಸ್ಥಿತಿಯಲ್ಲಿ ಸಿಲುಕುತ್ತಿದ್ದಾರೆ. ಮಾ.31ರವರೆಗೂ ಲಾಕ್‍ಡೌನ್ ಮಾಡಿರುವುದರಿಂದ ಇನ್ನೂ ಎರಡು ತಿಂಗಳು ವ್ಯಾಪಾರ ಮೇಲೆ ದುಷ್ಪರಿಣಾಮ ಬೀರುವುದು ಖಚಿತವಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಾಲದ ಕಂತನ್ನು ಬಡ್ಡಿರಹಿತವಾಗಿ ಪಾವತಿಸಲು ಆರು ತಿಂಗಳ ಕಾಲಾವಕಾಶ ನೀಡಬೇಕು. ಸಾವಿರಾರು ಮಂದಿ ಟ್ಯಾಕ್ಸಿ ಮಾಲೀಕರು ಬ್ಯಾಂಕ್ ಸಾಲವನ್ನೇ ಅವಲಂಬಿಸಿದ್ದಾರೆ. ಕಂತು ಪಾವತಿಸದ ಕಾರಣ ವಾಹನ ಜಪ್ತಿ ಮಾಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಯುವಘಟಕದ ಕಾರ್ಯದರ್ಶಿ ಪ್ರಮೋದ್‍ಗೌಡ ಮಾತನಾಡಿ, ಲಾಕ್‍ಡೌನ್ ನೀತಿ ಜಾರಿ ಮಾಡಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಆಯೋಜಿಸಿರ ಲಿಲ್ಲ. ನಿಯಮ ಉಲ್ಲಂಘಿಸಬಾರದೆಂದು ಸಾಮಾಜಿಕ ಅಂತರ ಕಾಯ್ದುಕೊಂಡು ಯಾವುದೇ ಘೋಷಣೆ ಕೂಗದೆ ಶಾಂತಿಯುತವಾಗಿ ಭಿತ್ತಿಫಲಕ ಪ್ರದರ್ಶಿಸಲು ನಿರ್ಧರಿಸಿದ್ದೇವೆ ಎಂದರು. ಪ್ರತಿಭಟನೆಯಲ್ಲಿ ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ.ಪ್ರೇಮ್‍ಕುಮಾರ್ ಹಾಗೂ ಇನ್ನಿತರರು ಇದ್ದರು.

Translate »