ಹಗಲು ವೇಷಧಾರಿಗಳ ಬಣ್ಣದ ಬದುಕು ಕತ್ತಲಾಗಿಸಿದ ಲಾಕ್‍ಡೌನ್!
ಮೈಸೂರು

ಹಗಲು ವೇಷಧಾರಿಗಳ ಬಣ್ಣದ ಬದುಕು ಕತ್ತಲಾಗಿಸಿದ ಲಾಕ್‍ಡೌನ್!

June 15, 2020

ಮೈಸೂರು, ಜೂ.14- ಬೀದಿ ಬೀದಿಗಳಲ್ಲಿ ಅಂಗಡಿ, ಮನೆಗಳ ಮುಂದೆ ಹೋಗಿ ನಮ್ಮ ವೇಷ ಪ್ರದರ್ಶಿಸಿ, ಸಂಗೀತ ಹಾಡಿ ಅವರು ನೀಡುವ ಒಂದಷ್ಟು ಬಿಡಿಗಾಸಿ ನಲ್ಲಿ ಜೀವನ ನಿರ್ವಹಿಸುತ್ತಿದ್ದ ನಮಗೆ ಎರಡು ತಿಂಗಳ ಲಾಕ್‍ಡೌನ್ ಸಾಕಷ್ಟು ಸಂಕಷ್ಟಕ್ಕೆ ದೂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಈಗ ನಾವು ವೇಷ ತೊಟ್ಟು ಹೋದರೆ ಅನುಮಾನ ದೃಷ್ಟಿಯಿಂದ ಕಾಣುತ್ತಿದ್ದಾರೆ. ಹೀಗಾಗಿ ನಮಗೆ ಜೀವನ ನಿರ್ವಹಣೆ ಹೇಗೆಂಬುದೇ ತಿಳಿ ಯುತ್ತಿಲ್ಲ. ನಮ್ಮ ಕಷ್ಟ ಕೇಳುವವರ್ಯಾರು?

ಹಗಲು ವೇಷ ತೊಟ್ಟು ಮನೆ, ಅಂಗಡಿ ಮುಂದೆ ಕಲಾಪ್ರೌಢಿಮೆ ಪ್ರದರ್ಶಿಸಿ, ಅವರು ನೀಡುವ ಭಿಕ್ಷೆ ಯಿಂದಲೇ ಜೀವನ ನಿರ್ವಹಿಸುವ ಹಗಲು ವೇಷ ಧಾರಿ ಕುಟುಂಬಗಳ ನೋವಿನ ಮಾತಿದು. ಲಾಕ್‍ಡೌನ್ ಪರಿಣಾಮ ಮೊದಲೇ ಜರ್ಝರಿತವಾಗಿರುವ ಈ ಹಗಲು ವೇಷಧಾರಿ ಕುಟುಂಬ ಈನ ಮತ್ತಷ್ಟು ಜರ್ಝರಿತವಾಗುವಂತೆ ಮಾಡಿದೆ.

ಬುಡಗ ಜಂಗಮ ಸಮುದಾಯಕ್ಕೆ ಸೇರಿದ ಈ ಕಲಾವಿದರು ರಾಮ, ಲಕ್ಷ್ಮಣ, ಸೀತೆ, ಆಂಜನೇಯ, ರಾವಣ, ಶಿವ, ಪಾರ್ವತಿ, ಕೃಷ್ಣ ಹೀಗೆ ಎಲ್ಲಾ ತರಹದ ವೇಷ ತೊಡುತ್ತಾರೆ. ಬೀದಿ ಬೀದಿ ಸುತ್ತಿ, ಬಂದ ಅಲ್ಪ ಸ್ವಲ್ಪ ಭಿಕ್ಷೆಯ ಹಣದಿಂದಲೇ ಇವರ ಬದುಕು.

ತಲೆಯ ಮುಡಿಯಲ್ಲಿ ಗಂಗೆಯನ್ನು ಹೊತ್ತ ಶಿವ ವೇಷಧಾರಿ ಬೀದಿಯಲ್ಲಿ ಹಾಡು ಹೇಳುತ್ತಾ ಅಂಗಡಿ ಮುಂದೆ ತಲೆ ಬಾಗಿದಾಗ ಗಂಗೆಯ ಬಾಯಿಂದ ಕಾರಂಜಿಯಾಗಿ ನೀರು ಚಿಮ್ಮುತ್ತದೆ. ಆಂಜನೇಯ ವೇಷ ತೊಟ್ಟವ ಛಂಗನೆ ಹಾರುತ್ತಾ ಜನರ ಗಮನ ಸೆಳೆಯುತ್ತಾನೆ. ಮೈತುಂಬ ನೀಲವರ್ಣ ಬಳಿದು ಕೊಂಡ ಕೃಷ್ಣ ವೇಷಧಾರಿ ಗೀತೋಪದೇಶ ಹೇಳುತ್ತಾ ಸಾಗುತ್ತಾನೆ. ಶೂರ್ಪಣಕಿ, ಹಿಡಿಂಬಿ, ರಾವಣಾಸುರ ವೇಷಧಾರಿಗಳು ಕಲೆ ಪ್ರದರ್ಶಿಸಿ, ಗಮನ ಸೆಳೆಯುತ್ತಾರೆ. ಇವರೆಲ್ಲರೂ ಭಿಕ್ಷೆಗೆ ಬೇರೆ ಬೇರೆ ಕಡೆ ಹೋಗುತ್ತಾರೆ. ಬಳಿಕ ತಮಗೆ ಬಂದ ಭಿಕ್ಷೆಯನ್ನು ಪರಸ್ಪರ ಹಂಚಿ ಕೊಂಡು ಜೀವನ ಸಾಗಿಸುತ್ತಾರೆ.

ಇವರು ಮೈಸೂರು ದಸರಾ ಸಂದರ್ಭದಲ್ಲೂ ಹಗಲು ವೇಷ ತೊಟ್ಟು ಕಲಾ ಪ್ರೌಢಿಮೆ ಪ್ರದರ್ಶಿಸಿದ್ದಾರೆ. ಮಕ್ಕಳು, ಹಿರಿಯರನ್ನು ರಂಜಿಸಿದ್ದಾರೆ. ಇವರ ಕಲೆ ಡಾ.ರಾಜ್‍ಕುಮಾರ್, ಜಯಲಲಿತಾ ಇನ್ನಿತರರ ಮೆಚ್ಚುಗೆಗೆ ಪಾತ್ರವಾಗಿದೆ. ಮೈಸೂರಿನ ಬನ್ನಿಮಂಟ ಪದ ಯಲ್ಲಮ್ಮ ಕಾಲೋನಿಯ ಗುಡಿಸಲುಗಳಲ್ಲೇ ಇವರ ವಾಸ. ಮಾತೃ ಭಾಷೆ ತೆಲುಗು. ಆದರೂ ಇವರು ಹಾಡುವ ಹಾಡು, ಗೀತೆ, ವಚನಗಳೆಲ್ಲವೂ ಕನ್ನಡ. ಮೂಲ ಆಂಧ್ರಪ್ರದೇಶದ ಶ್ರೀಶೈಲ. ಹಲವು ದಶಕಗಳ ಹಿಂದೆ ಭಿಕ್ಷೆ ಬೇಡುತ್ತಾ ಮೈಸೂರಿಗೆ ಬಂದ ಈ ಕುಟುಂಬಗಳು ಕ್ರಮೇಣ ಮೈಸೂರಿನಲ್ಲಿ ನೆಲೆಸಿವೆ. ತಾತ ಮುತ್ತಾತನ ಕಾಲದಿಂದಲೂ ಇದೇ ಇವರ ವೃತ್ತಿ.

ಬಣ್ಣ ಕಳೆದುಕೊಂಡ ಬದುಕು: ಹಿಂದೆ ನಾವು ವೇಷ ಹಾಕಿ ರಸ್ತೆಗಿಳಿದರೆ ಜನ ನಮ್ಮನ್ನೂ, ಕಲೆಯನ್ನೂ ಗೌರವ ದಿಂದ ಕಾಣುತ್ತಿದ್ದರು. ವಸತಿ ಪ್ರದೇಶಗಳ ಮನೆಗಳಿಗೆ ಭಿಕ್ಷೆಗೆ ಹೋದರೆ ಮಕ್ಕಳು ನಮ್ಮನ್ನು ಹಿಂಬಾಲಿಸು ತ್ತಿದ್ದರು. ಆದರೆ ಇಂದು ಟಿವಿ, ಮೊಬೈಲ್ ಹಾವಳಿ ನಮ್ಮ ಕಲೆಯನ್ನು ಪೂರ್ಣ ನುಂಗಿ ಹಾಕಿದೆ. ಆದರೂ ಭಿಕ್ಷೆ ವೃತ್ತಿ ಬಿಡುವಂತಿಲ್ಲ. ಹೊಟ್ಟೆ ಪಾಡು ನಡೆಯ ಬೇಕಲ್ಲ ಎನ್ನುತ್ತಾರೆ ಬುಡಗ ಜಂಗಮರ ಹಿರಿಯ ಕಲಾವಿದ ದೊಡ್ಡ ಜಯರಾಮ್.

ಇಂದು ನಮ್ಮ ಕಲೆ ಪ್ರೋತ್ಸಾಹಿಸುವವರೇ ಇಲ್ಲ. ಕುಟುಂಬದ ಹೊಟ್ಟೆ ತುಂಬಿಸುವುದು ಕಷ್ಟವಾಗಿದೆ. ಹಾಗಾಗಿ ಕೆಲವು ಸಂಗೀತ ಕಾರ್ಯಕ್ರಮಗಳಿಗೂ ಹೋಗುತ್ತೇವೆ. ಅವರು ಕೊಟ್ಟಷ್ಟು ಹಣ ಪಡೆಯು ತ್ತೇವೆ. ಹೇಗೋ ಜೀವನ ನಿರ್ವಹಿಸುತ್ತಿದ್ದೇವೆ. ಈ ವೇಷ ನಮ್ಮ ಕಾಲಕ್ಕೆ ಸಾಕು. ನಮ್ಮ ಮಕ್ಕಳಿಗೆ ಈ ವೃತ್ತಿ ಬೇಡ. ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಅವರಿಗೊಂದು ಜೀವನ ರೂಪಿಸಬೇಕೆಂಬ ಕನಸಿದೆ. ಶ್ರೀಶೈಲ ಮಲ್ಲಿಕಾರ್ಜುನ, ಯಲ್ಲಮ್ಮ ತಾಯಿಯ ಆಶೀರ್ವಾದ ನಮ್ಮ ಮೇಲಿದೆ ಎನ್ನುತ್ತಾರೆ ಅವರು.

ಭಿಕ್ಷಾಟನೆ ವೇಳೆ ಅಂಗಡಿಗಳವರು 1 ರೂ.ನಿಂದ 10 ರೂ.ವರೆಗೂ ನೀಡುತ್ತಾರೆ. ನಾವು ಹೆಚ್ಚು ಹಣ ಕೇಳುವುದಿಲ್ಲ ಎಂದು ಕಲಾವಿದ, ಗಾಯಕ ಸಣ್ಣ ಜಯ ರಾಮ್ ಹೇಳುತ್ತಾರೆ. ಲಾಕ್‍ಡೌನ್‍ನಿಂದಾಗಿ ಎರಡೂ ವರೆ ತಿಂಗಳಿಂದ ನಾವು ವೇಷ ತೊಟ್ಟಿಲ್ಲ. ಜೀವನ ಮೂರಾಬಟ್ಟೆಯಾಗಿದೆ. ದಾನಿಗಳು ಕೊಟ್ಟಿದನ್ನು ತಿಂದು ಕಾಲ ತಳ್ಳಿದ್ದೇವೆ. ಮುಂದೆ ಏನೋ ಹೇಗೋ ಎಂಬ ಆತಂಕ ನಮ್ಮದಾಗಿದೆ. ಸರ್ಕಾರ ಕೂಡ ನಮ್ಮನ್ನು ಪರಿಗಣಿಸಿಲ್ಲ. ನಮಗೂ ಮಾಸಾಶನ ನೀಡ ಬೇಕು ಎಂಬ ಕಲಾವಿದ ಬಿ.ರಾಮಣ್ಣನವರ ಮಾತು ಎಂಥವರಿಗೂ ಬೇಸರ ತರಿಸುವಂತಿದೆ.

ರಾಜಕುಮಾರ್ ಭಾವಸಾರ್

Translate »