ಲಾಕ್‍ಡೌನ್ ನಿರ್ಬಂಧ ಮುಂದುವರಿಕೆ ಸೂಕ್ತ
ಮೈಸೂರು

ಲಾಕ್‍ಡೌನ್ ನಿರ್ಬಂಧ ಮುಂದುವರಿಕೆ ಸೂಕ್ತ

May 12, 2020

ಬೆಂಗಳೂರು, ಮೇ 11- ಮೂರನೇ ಹಂತದ ಲಾಕ್ ಡೌನ್‍ನಲ್ಲಿ ವಿಧಿಸಲಾಗಿರುವ ನಿಯಮ ಗಳೇ ಮೇ 17ರ ನಂತರವೂ ಮುಂದು ವರೆಯುವುದು ಸೂಕ್ತ ಎಂದು ಪ್ರಧಾನಿ ಮೋದಿ ಅವರಿಗೆ ವೀಡಿಯೋ ಸಂವಾ ದದಲ್ಲಿ ಸಲಹೆ ನೀಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಮೇ ಅಂತ್ಯದವರೆಗೆ ವಿಮಾನಯಾನಗಳನ್ನು ಆರಂಭಿಸ ಬಾರದು ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಮೂರನೇ ಹಂತದ ಲಾಕ್‍ಡೌನ್ ಪೂರ್ಣಗೊಳ್ಳುವ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸೋಮವಾರ ಎಲ್ಲಾ ಮುಖ್ಯಮಂತ್ರಿಗಳ ಜೊತೆ ವೀಡಿಯೋ ಸಂವಾದ ನಡೆಸಿ ಸಲಹೆಗಳನ್ನು ಪಡೆದರು. ಪ್ರತಿ ಮುಖ್ಯಮಂತ್ರಿಗೂ 20 ನಿಮಿಷ ಕಾಲ ಮಿತಿ ನೀಡಲಾ ಗಿತ್ತು. ಸಂಜೆ 7.10ಕ್ಕೆ ಯಡಿಯೂರಪ್ಪನವರಿಗೆ ಸಮಯ ನಿಗದಿಯಾಗಿತ್ತಾದರೂ, ಅದಕ್ಕಿಂತ ಮುಂಚಿತವಾಗಿಯೇ ಅವರಿಗೆ ತಮ್ಮ ಸಲಹೆ ನೀಡಲು ಅವಕಾಶ ದೊರೆಯಿತು.

ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಾಲ್ಕು `ಟಿ’ ಗಳು (ಟ್ರೇಸಿಂಗ್, ಟ್ರ್ಯಾಕಿಂಗ್, ಟೆಸ್ಟಿಂಗ್ ಮತ್ತು ಟ್ರಿಟಿಂಗ್) ಪ್ರಮುಖ ಪಾತ್ರ ವಹಿಸಿವೆ. ರಾಜ್ಯದಲ್ಲಿ ಪ್ರಸ್ತುತ 35 ಪ್ರಯೋಗಾಲಯಗಳು ದಿನಕ್ಕೆ 6000 ಪರೀಕ್ಷೆ ನಡೆಸುವ ಸಾಮಥ್ರ್ಯ ಹೊಂದಿದ್ದು, ಈವರೆಗೆ 1ಲಕ್ಷಕ್ಕಿಂತ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ 60 ಪ್ರಯೋಗಾಲಯಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರಲ್ಲದೇ, ರಾಜ್ಯದಲ್ಲಿ ಹಸಿರು ವಲಯಗಳಲ್ಲೂ ಸೋಂಕು ವ್ಯಾಪಿ ಸುತ್ತಿರುವ ಬಗ್ಗೆ ತಮ್ಮ ಆತಂಕವನ್ನು ಮೋದಿ ಅವರಲ್ಲಿ ತೋಡಿಕೊಂಡರು.

ಸದ್ಯಕ್ಕೆ ಲಾಕ್‍ಡೌನ್ ಸಡಿಲಿಕೆ ಬೇಡ. ಈಗಿರುವ ನಿರ್ಬಂಧಗಳು ಮುಂದುವರೆಯಲಿ. ಆದರೆ ಜಿಲ್ಲಾವಾರು ರೆಡ್, ಆರೆಂಜ್ ಮತ್ತು ಗ್ರೀನ್ ಜೋನ್‍ಗಳನ್ನು ಗುರುತಿಸಬಾರದು.
ಕಂಟೇನ್ಮೆಂಟ್ ವಲಯಗಳ ಮಾತ್ರ ಗುರುತಿಸಿ ಕಟ್ಟುನಿಟ್ಟಾಗಿ ನಿರ್ಬಂಧಗಳನ್ನು ವಿಧಿಸಬೇಕು. ಕ್ಲಸ್ಟರ್‍ಗಳ ಸುತ್ತಲಿನ 50ರಿಂದ 100 ಮೀಟರ್ ವ್ಯಾಪ್ತಿಯಲ್ಲಿ ಕಂಟೇನ್ಮೆಂಟ್ ವಲಯ ಎಂದು ಘೋಷಿಸಿ ಇತರ ಸ್ಥಳಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಹಾಗೂ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಿದರೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆತು ರಾಜ್ಯಗಳು ಹಣಕಾಸು ಬಿಕ್ಕಟ್ಟಿನಿಂದ ಹೊರ ಬರಲು ಸಾಧ್ಯವಾಗುತ್ತದೆ. ಯಾವುದೇ ಕಾರಣಕ್ಕೂ ವಿಮಾನಸೇವೆ ಬೇಡವೇ ಬೇಡ ಎಂದ ಮುಖ್ಯಮಂತ್ರಿಗಳು, ಮಾಲ್, ಸಿನಿಮಾ, ಹೋಟೆಲ್‍ಗಳನ್ನು ಇನ್ನೂ ಕೆಲ ದಿನಗಳ ಕಾಲ ಬಂದ್ ಮಾಡಬೇಕು. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.

ಕೊರೊನಾ ಹಿನ್ನಲೆಯಲ್ಲಿ ಇತರ ಖಾಯಿಲೆಗಳಿಗೆ ವೈದ್ಯಕೀಯ ಚಿಕಿತ್ಸೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‍ಗಳು ಕೊರೊನಾ ಇಲ್ಲದ ರೋಗಿಗಳ ಚಿಕಿತ್ಸೆಗಾಗಿ ಕಾರ್ಯ ನಿರ್ವಹಿಸುವ ಸಂಬಂಧ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸ ಬೇಕು. ಕೋವಿಡ್ ಪರೀಕ್ಷೆ ನಡೆಸುವ ಕುರಿತು ಒಂದು ಸಮಗ್ರ ಮಾರ್ಗಸೂಚಿಯನ್ನು ಹೊರಡಿಸಬೇಕು. ಪ್ರತಿ 10 ಲಕ್ಷ ಜನಸಂಖ್ಯೆಗೆ ಎಷ್ಟು ಪರೀಕ್ಷೆ ನಡೆಸಬೇಕು ಎಂಬುದನ್ನು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಬೇಕು. ಸೋಂಕಿನ ಲಕ್ಷಣ ಇರುವವರು ಹಾಗೂ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗುವವರನ್ನು ಮಾತ್ರ ಕೋವಿಡ್ ಪರೀಕ್ಷೆಗೆ ಒಳಪಡಿಸ ಬೇಕು ಎಂದು ತಿಳಿಸಿದ ಅವರು, ಮಧ್ಯಮ ಮತ್ತು ತೀವ್ರ ಸೋಂಕಿನ ಲಕ್ಷಣ ಹೊಂದಿರುವವ ರನ್ನು ಮಾತ್ರ ಆಸ್ಪತೆಗೆ ದಾಖಲಿಸಬೇಕು. ರೋಗ ಲಕ್ಷಣಗಳಿಲ್ಲದ ಹಾಗೂ ತೀವ್ರತರ ವಲ್ಲದ ಪ್ರಕರಣಗಳಲ್ಲಿ ರೋಗಿಗಳು ಮನೆಯಲ್ಲಿಯೇ ಕಟ್ಟುನಿಟ್ಟಿನ ಐಸೋಲೇಷನ್ ನಲ್ಲಿದ್ದು, ಟೆಲಿ ಮೆಡಿಸಿನ್ ಮೂಲಕ ಚಿಕಿತ್ಸೆ ಪಡೆಯಲು ಕೇಂದ್ರ ಸರ್ಕಾರ ಸಲಹೆ ನೀಡಬಹುದು. 60 ವರ್ಷಕ್ಕೆ ಮೇಲ್ಪಟ್ಟವರು ಹಾಗೂ 10 ವರ್ಷದೊಳಗಿನವರು ಮನೆಯ ಲ್ಲಿಯೇ ಇರುವಂತೆ ಸಲಹೆ ನೀಡಬೇಕು ಎಂದು ಯಡಿಯೂರಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ವತಿಯಿಂದ 93,723 ಆರೋಗ್ಯ ಕಾರ್ಯಕರ್ತರಿಗೆ ಆನ್‍ಲೈನ್ ತರಬೇತಿ ನೀಡಲಾಗಿದೆ. 58ಕ್ಕೂ ಹೆಚ್ಚು ಜನರು `ಆರೋಗ್ಯ ಸೇತು’ ಆ್ಯಪ್ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಜನರನ್ನು ಹೊಸ ಜೀವನ ಶೈಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ ಅವರ ಮನವೊಲಿಸಬೇಕು. ಕೊರೊನಾ ಕುರಿತು ಜನರ ಪೂರ್ವಾಗ್ರಹಗಳನ್ನು ತಡೆಯಲು ಇದು ಕೇವಲ ಒಂದು ಸೋಂಕು. ಆದರೆ ಇತರ ದೀರ್ಘಕಾಲೀಕ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಅಪಾಯಕಾರಿ ಎಂಬ ಅರಿವು ಮೂಡಿಸಬೇಕು ಎಂದು ಯಡಿಯೂರಪ್ಪ ಸಲಹೆ ನೀಡಿದರು.

Translate »