ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ V/s ರೋಹಿಣಿ
ಮೈಸೂರು

ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ V/s ರೋಹಿಣಿ

March 12, 2019

ಬೆಂಗಳೂರು: ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದ್ದು, ಇವರ ವಿರುದ್ಧ ‘ಆಧಾರ್’ ಖ್ಯಾತಿಯ ನಂದನ್ ನಿಲೇಕಣಿ ಪತ್ನಿ ರೋಹಿಣಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ.

ಈ ಕ್ಷೇತ್ರದಲ್ಲಿ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದ್ದ ಅನಂತಕುಮಾರ್ ಅವರ ನಿಧನದ ನಂತರ ಅವರ ಪತ್ನಿ ತೇಜಸ್ವಿನಿಯವರನ್ನು ಈ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ. ದಿವಂಗತ ಅನಂತಕುಮಾರ್ ಅವರ ಪ್ರಭಾವ ಹಾಗೂ ತೇಜಸ್ವಿನಿ ಅವರು ಅವಿರತ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಅವರ ಗೆಲುವಿಗೆ ಸಹಕಾರಿ ಆಗಲಿದೆ ಎಂಬುದು ಪಕ್ಷದ ವರಿಷ್ಠರ ಲೆಕ್ಕಾಚಾರವಾಗಿದೆ.

ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಇಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ಮುಖಂಡ ಆರ್. ಅಶೋಕ್ ಮತ್ತು ಮಾಜಿ ಸಚಿವ ವಿ. ಸೋಮಣ್ಣ ಅವರು ತೇಜಸ್ವಿನಿಯವರ ನಿವಾಸಕ್ಕೆ ಭೇಟಿ ನೀಡಿ, ವರಿಷ್ಠರ ಸಂದೇಶವನ್ನು ತಿಳಿಸಿ, ಚುನಾವಣೆಯಲ್ಲಿ ಸ್ಪರ್ಧಿಸಲು ಅವರ ಸಹಮತವನ್ನು ಪಡೆದರು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ತೇಜಸ್ವಿನಿ ಅವರು, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದೀರಾ? ಸ್ಪರ್ಧಿಸಲು ನೀವು ಬಯಸಿದರೆ ಅವಕಾಶ ಕಲ್ಪಿಸಲಾಗುವುದು ಎಂಬ ಸಂದೇಶವನ್ನು ಪಕ್ಷದ ವರಿಷ್ಠರು ಕಳುಹಿಸಿದ್ದರು. ನಾನು ವರಿಷ್ಠರ ಇಚ್ಛೆಯಂತೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದೇನೆ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಅನಂತ ಕುಮಾರ್ ಮತ್ತು ನಂದನ್ ನೀಲೇಕಣಿ ಎದುರಾಳಿಗಳಾಗಿದ್ದರು. ಈ ಬಾರಿ ಅನಂತಕುಮಾರ್ ಪತ್ನಿ ತೇಜಸ್ವಿನಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ನಂದನ್ ನೀಲೇಕಣಿ ಪತ್ನಿ ರೋಹಿಣಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಕಾಂಗ್ರೆಸ್ ಮುಖಂಡರು ಈಗಾಗಲೇ ಅವರನ್ನು ಸಂಪರ್ಕಿಸಿ ಒಪ್ಪಿಗೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Translate »