ಮಾ. 19ರಿಂದ ನಾಮಪತ್ರ ಸಲ್ಲಿಕೆ ಆರಂಭ
ಮೈಸೂರು

ಮಾ. 19ರಿಂದ ನಾಮಪತ್ರ ಸಲ್ಲಿಕೆ ಆರಂಭ

March 12, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡು ತ್ತಿದ್ದ ಅವರು, ಭಾರತದ ಚುನಾವಣಾ ಆಯೋಗವು ಮಾರ್ಚ್ 10 ರಂದು ಲೋಕಸಭಾ ಚುನಾವಣಾ ವೇಳೆ ಪ್ರಕಟಿಸಿರುವಂತೆ ಚುನಾವಣಾ ಪ್ರಕ್ರಿಯೆಗೆ ತಾವು ಮೈಸೂರು-ಕೊಡಗು ಲೋಕಸಭಾ ವ್ಯಾಪ್ತಿಯಲ್ಲಿ ಸರ್ವಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಮಡಿ ಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣ ಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ವಿಧಾನ ಸಭಾ ಕ್ಷೇತ್ರಗಳು ಬರಲಿವೆ. ಎಲ್ಲಾ ಮತಗಟ್ಟೆಗಳಿಗೆ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ, ರ್ಯಾಂಪ್ ಹಾಗೂ ಕಾಂಪೌಂಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಆಯ್ದ ಮತಗಟ್ಟೆಗಳಿಗೆ ಕೇಂದ್ರ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಮೈಕ್ರೋ ಅಬ್ಸ್‍ರ್ವರ್ ಆಗಿ ನೇಮಕ ಮಾಡಲು ಕ್ರಮವಹಿಸಲಾಗುವುದು. ಮಾರ್ಚ್ 10ರ ಸಂಜೆ ಯಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಾಗೂ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ನಿಗಾ ಇರಿಸಲು ಸೆಕ್ಟರ್ ಆಫೀಸರ್‍ಗಳು, ಫ್ಲೈಯಿಂಗ್ ಸ್ಕ್ವಾಡ್, ಸ್ಪಾಟಿಕ ಸರ್ವಲನ್ಸ್, ವಿಡಿಯೋ ವೀವಿಂಗ್, ವಿಡಿಯೋ ಸರ್ವಲನ್ಸ್ ತಂಡಗಳು ಹಾಗೂ ಅಸಿಸ್ಟೆಂಟ್ ಎಲೆ ಕ್ಷನ್ ಅಬ್ಸ್‍ರ್ವರ್ ತಂಡಗಳನ್ನು ರಚಿಸಲಾಗಿದೆ.

ಚುನಾವಣಾ ಕರಪತ್ರ, ಪೋಸ್ಟರ್, ಬಿಲ್‍ಗಳಲ್ಲಿ ಪ್ರಕಾಶಕರು ಮತ್ತು ಸಂಸ್ಥೆಯ ಮಾಹಿತಿಯನ್ನು ಕಡ್ಡಾಯವಾಗಿ ಮುದ್ರಿಸಬೇಕು, ಮಾಧ್ಯಮಗಳಲ್ಲಿ ಅಭ್ಯರ್ಥಿ ಪರವಾಗಿ ಜಾಹೀರಾತು ಮುದ್ರಿಸುವ ಮುನ್ನ ಚುನಾವಣಾ ಎಂಸಿಎಂಸಿ ತಂಡದಿಂದ ಪ್ರಮಾಣ ಪತ್ರ ಪಡೆಯಬೇಕು. ಪೇಯ್ಡ್ ನ್ಯೂಸ್‍ಗಳ ಮೇಲೆ ಚುನಾವಣಾ ಮಾದರಿ ನೀತಿ ಸಂಹಿತೆ ತಂಡವು ನಿಗಾ ವಹಿಸುತ್ತದೆ. ನೀತಿ ಸಂಹಿತೆ ಉಲ್ಲಂಘನೆ ಯಾಗುವ ಬರಹಗಳು, ಪೋಸ್ಟರ್‍ಗಳು, ಬ್ಯಾನರ್, ಕಟೌಟ್, ಹೋರ್ಡಿಂಗ್ಸ್, ಫ್ಲಾಗ್‍ಗಳನ್ನು ತೆರವು ಗೊಳಿಸಲು ಕ್ರಮಕೈಗೊಳ್ಳಲಾಗಿದೆ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಇತರ ವ್ಯಕ್ತಿಗಳು ಸರ್ಕಾರಿ ವಾಹನಗಳನ್ನು ಬಳಸದಂತೆ ಎಚ್ಚರ ವಹಿಸಲಾಗಿದೆ. ಆಯೋಗದ ನಿರ್ದೇಶನದಂತೆ ಸರ್ಕಾರಿ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಚುನಾವಣೆಗೆ ಮೈಸೂರು ನಗರ, ಜಿಲ್ಲಾದ್ಯಂತ ವ್ಯಾಪಕ ಭದ್ರತೆ
ಲೋಕಸಭಾ ಚುನಾವಣೆಗೆ ಮೈಸೂರು ನಗರ ಮತ್ತು ಜಿಲ್ಲಾದ್ಯಂತ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ತಿಳಿಸಿದ್ದಾರೆ.

ಮೈಸೂರು ನಗರದಲ್ಲಿನ 987 ಮತಗಟ್ಟೆಗಳು ಹಾಗೂ ಕ್ರಿಟಿಕಲ್ ಮತಗಟ್ಟೆಗಳೆಂದು ಗುರ್ತಿಸಿರುವಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. 1543 ಸಿವಿಲ್ ಪೊಲೀಸರು, ಸಿಎಆರ್, ಮೌಂಟೆಡ್ ಹಾಗೂ ಕೆಎಸ್‍ಆರ್‍ಪಿ ಪೊಲೀಸರನ್ನು ಬಳಸಿಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಮೈಸೂರಿನ 1010 ರೌಡಿ ಶೀಟರ್‍ಗಳ ಚಲನ-ವಲನಗಳ ಮೇಲೆ ನಿಗಾ ಇರಿಸಿದ್ದು, ಮುಂಜಾಗ್ರತೆಯಾಗಿ ಈಗಾಗಲೇ 95 ಭದ್ರತಾ ಪ್ರಕರಣ ದಾಖಲಿಸಲಾಗಿದೆ. 59 ಸೆಕ್ಟರ್ ಆಫೀಸರ್‍ಗಳನ್ನು ನೇಮಿಸಲಾಗಿದೆ. ಉಪ ವಿಭಾಗಗಳ ಎಸಿಪಿಗಳು ಈ ತಂಡಗಳನ್ನು ಮೇಲ್ವಿಚಾರಣೆ ನಡೆಸುವರು ಎಂದ ಕೆ.ಟಿ. ಬಾಲಕೃಷ್ಣ, ಅಗತ್ಯ ಬಿದ್ದರೆ ಕೆಲ ರೌಡಿಗಳನ್ನು ಗಡೀಪಾರು ಮಾಡಲು ಆಯಾ ಠಾಣಾ ಇನ್ಸ್‍ಪೆಕ್ಟರ್‍ಗಳಿಂದ ಶಿಫಾರಸು ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.

ಜಿಲ್ಲಾ ಪೊಲೀಸ್: ಜಿಲ್ಲೆಯಾದ್ಯಂತ ಗ್ರಾಮೀಣ ಸುರಕ್ಷತೆಗಾಗಿ ನೀಡಿರುವ 1266 ಲೈಸೆನ್ಸ್ಡ್ ವೆಪನ್ಸ್ (ಆಯುಧಗಳು)ಗಳನ್ನು ಠೇವಣಿ ಇರಿಸಲು
ಕ್ರಮ ವಹಿಸಲಾಗುವುದು. ಕೆಲ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್‍ಗಳು ಹಾಗೂ ಜಮ್ಮಾ ಭೂಮಿ ಮಾಲೀಕರನ್ನು ಹೊರತುಪಡಿಸಿ ಉಳಿದ ಲೈಸೆನ್ಸ್‍ದಾರರಿಂದ ಆಯುಧಗಳನ್ನು ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ವಶಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು. 12 ಸ್ಟ್ಯಾಟಿಕ್ ಚೆಕ್‍ಪೋಸ್ಟ್‍ಗಳು, 11 ಫ್ಲೈಯಿಂಗ್ ಸ್ಕ್ವಾಡ್ ಪ್ರದೇಶಗಳಲ್ಲಿನ 1953 ಮತಗಟ್ಟೆಗಳಿದ್ದು, ಆ ಪೈಕಿ ಶೇಕಡಾ 20 ರಷ್ಟು ಕ್ರಿಟಿಕಲ್ ಬೂತ್‍ಗಳೆಂದು ಗುರ್ತಿಸಲಾಗಿದೆ ಎಂದು ಎಸ್ಪಿ ಅಮಿತ್ ಸಿಂಗ್ ತಿಳಿಸಿದ್ದಾರೆ. 121 ಸೆಕ್ಟರಲ್ ಅಧಿಕಾರಿ ಗಳು, 21 ಸೂಪರ್‍ವೈಸರಿ ಟೀಂ, 8 ಎಸ್‍ಡಿಪಿ ತಂಡಗಳನ್ನು ನೇಮಿಸಲಾಗಿದೆ. 38 ಸ್ಟ್ಯಾಟಿಕ್ ಚೆಕ್‍ಪೋಸ್ಟ್‍ಗಳ್ನು ತೆರೆದು ತಪಾಸಣೆ ಮಾಡಲಾಗುತ್ತಿದೆ ಎಂದು ನುಡಿದರು.
ಜಿಲ್ಲೆಯಾದ್ಯಂತ 343 ಲೈಸೆನ್ಸ್ಡ್ ವೆಪನ್‍ಗಳನ್ನು ವಶಪಡಿಸಿಕೊಳ್ಳಲಾಗುವುದು. ರೌಡಿಶೀಟರ್‍ಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸಿ, ರಾಜಕೀಯ ವ್ಯಕ್ತಿಗಳೊಂದಿಗೆ ಕಾಣಿಸಿಕೊಂಡು ಗಲಾಟೆ, ಗೊಂದಲ ಸೃಷ್ಟಿಸುವವರ ವಿರುದ್ಧ ಸಿಆರ್‍ಪಿಸಿ ರೀತ್ಯಾ ಪ್ರಕರಣ ದಾಖಲಿಸಿ ಕಾನೂನು ರೀತಿಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ವ್ಯಾಪ್ತಿಯಲ್ಲಿ ರೂಟ್ ಮಾರ್ಚ್ ನಡೆಸಿ ಪೊಲೀಸ್ ಬಲ ಪ್ರದರ್ಶಿಸುವ ಜತೆಗೆ ಮುಕ್ತ ಹಾಗೂ ನಿರ್ಭೀತಿಯಿಂದ ಮತದಾನ ಮಾಡಲು ಸಾರ್ವಜನಿಕರಿಗೆ ವಿಶ್ವಾಸ ಮೂಡಿಸಲಾಗುವುದು ಎಂದು ಅಮಿತ್ ಸಿಂಗ್ ತಿಳಿಸಿದರು.

ಬ್ಯಾಂಕ್ ಗ್ರಾಹಕರ ವಹಿವಾಟು ಮೇಲೆ ನಿಗಾ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಂಕ್ ಗ್ರಾಹಕರ ವಹಿವಾಟಿನ ಮೇಲೆ ಹದ್ದಿನ ಕಣ್ಣು ಇಟ್ಟು ನಿಗಾ ವಹಿಸಲಾಗುವುದು ಎಂದು ಜಿಲ್ಲಾ ಚುನಾ ವಣಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ. ಬ್ಯಾಂಕ್ ಖಾತೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ವಹಿವಾಟಾದರೆ ಅದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಒದಗಿಸಬೇಕು. ಇದುವರೆವಿಗೂ ನಡೆಯದ ಹಣಕಾಸು ವಹಿವಾಟು ಇದ್ದಕ್ಕಿದ್ದಂತೆ ಈ ಒಂದು ತಿಂಗಳಲ್ಲಿ ನಡೆದರೆ ಅಥವಾ ಇದುವರೆಗೂ ಒಂದು ಅಥವಾ 2 ಬ್ಯಾಂಕ್ ಖಾತೆ ಹೊಂದಿದ್ದ ವ್ಯಕ್ತಿಗಳು ಈಗ ಹೆಚ್ಚು ಖಾತೆಗಳನ್ನು ತೆರೆಯುವುದು, ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳ ಬ್ಯಾಂಕ್ ಖಾತೆಗಳ ಮೇಲೂ ನಿರಂತರ ನಿಗಾ ವಹಿಸಲಾಗುವುದು ಎಂದು ಅಭಿರಾಂ ಜಿ. ಶಂಕರ್ ತಿಳಿಸಿದರು.

ಎಟಿಎಂನಿಂದ ಹಣ ಡ್ರಾ ಮಾಡುವವರ ಹಾಗೂ ಆನ್‍ಲೈನ್‍ನಲ್ಲಿ ಹಣ ಟ್ರಾನ್ಸ್‍ಫರ್ ಮಾಡುವವರ ಮೇಲೂ ನಿಗಾ ಇರಿಸಿ, ಸಂಶಯ ಬಂದಲ್ಲಿ ಸ್ಟಾಟಿಕ್ ಸರ್ವಲನ್ಸ್ ಟೀಂ ಅಧಿಕಾರಿಗಳು ಪರಿಶೀಲಿಸುವರು. ಯಾವುದೇ ಹೊಸ ಸರ್ಕಾರಿ ಯೋಜನೆಗಳ ಸೌಲಭ್ಯ ಫಲಾನುಭವಿಗಳಿಗೆ ತಲುಪಿಸಿದಲ್ಲಿ ಅಂತಹವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕುಡಿಯುವ ನೀರು, ವಿದ್ಯುತ್, ದನಗಳಿಗೆ ಮೇವು ಪೂರೈಕೆಯಂತಹ ಅವಶ್ಯಕ ಹಾಗೂ ತುರ್ತು ಕಾರ್ಯಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಸರ್ಕಾರಿ ಕಾರ್ಯಕ್ರಮಗಳನ್ನು ಹೊಸದಾಗಿ ಪ್ರಕಟಿಸಲು ಅವಕಾಶವಿರುವುದಿಲ್ಲ ಎಂದು ಅವರು ಇದೇ ಸಂದರ್ಭ ನುಡಿದರು.

Translate »