ಲೋಕಸಭಾ ಚುನಾವಣೆ-2019ಕ್ಕೆ ಶಾಯಿ ಪೂರೈಕೆ
ಮೈಸೂರು

ಲೋಕಸಭಾ ಚುನಾವಣೆ-2019ಕ್ಕೆ ಶಾಯಿ ಪೂರೈಕೆ

March 12, 2019

ಮೈಸೂರು: ಭಾರತ ಚುನಾವಣಾ ಆಯೋಗ ಲೋಕಸಭಾ ಚುನಾವಣಾ ನಡೆಸಲು ವೇಳಾಪಟ್ಟಿ ಪ್ರಕಟಿಸಿದೆ. ಈ ಒಂದು ಪ್ರಕ್ರಿಯೆ ಮೈಸೂರಿನ ಸಾರ್ವಜನಿಕ ಉದ್ಯಮಕ್ಕೆ ವರದಾನವೂ ಆಗಿದೆ. ಪ್ರತಿ ಬಾರಿಯಂತೆ ಈಗಲೂ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ (ಮೈಲ್ಯಾಕ್) ಮತದಾನಕ್ಕೆ ಅಳಿಸಲಾಗದ ಶಾಯಿ ಪೂರೈಕೆಗೆ ಸಜ್ಜಾಗಿದೆ.

ಮೈಲ್ಯಾಕ್ ಭಾರತದ ಚುನಾವಣಾ ಆಯೋಗದ ವಿಶ್ವಾಸಗಳಿಸಿರುವ ಈ ಸಂಸ್ಥೆ ಹಲವು ದಶಕದಿಂದಲೂ ಬೇಡಿಕೆ ಗನುಗುಣವಾಗಿ ಅಳಿಸಲಾಗದ ಶಾಯಿ ಸರಬರಾಜು ಮಾಡುತ್ತಾ ಬಂದಿದೆ. ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಕಳೆದ ನಾಲ್ಕು ತಿಂಗಳ ಹಿಂದೆಯೇ ಅಂದರೆ 2018 ಡಿಸೆಂಬರ್ ಅಂತ್ಯದಲ್ಲಿ ಮೈಲ್ಯಾಕ್‍ಗೆ 10 ಎಂಎಲ್ ಪ್ರಮಾಣದ 26 ಲಕ್ಷ ಅಳಿಸ ಲಾಗದ ಶಾಯಿ ಪೂರೈಸುವಂತೆ ಆರ್ಡರ್ ಬುಕ್ ಮಾಡಲಾಗಿದೆ. ಇದರಿಂದ ಸುಮಾರು 33 ಕೋಟಿ ರೂ. ಮೈಲ್ಯಾಕ್‍ಗೆ ಆದಾಯ ಬರಲಿದೆ.

ಆಯೋಗದ ಬೇಡಿಕೆಗೆ ಅನುಗುಣವಾಗಿ ಸಕಾಲಕ್ಕೆ ಶಾಯಿ ಸರಬರಾಜು ಮಾಡುವ ಉದ್ದೇಶದಿಂದ ಮೈಲ್ಯಾಕ್ ಸಂಸ್ಥೆ ಜ.7ರಿಂದಲೇ ಶಾಯಿ ತಯಾರಿಸುವ ಕಾರ್ಯ ಆರಂಭಿಸಿದೆ. ಚುನಾವಣಾ ದಿನಾಂಕ ಪ್ರಕಟವಾಗುವ ಮುನ್ನವೇ 20 ಲಕ್ಷ ಬಾಟಲಿ ಶಾಯಿಯನ್ನು ಹಂತ ಹಂತವಾಗಿ ಚುನಾವಣಾ ಆಯೋಗದ ಸುಪರ್ದಿಗೆ ಒಪ್ಪಿಸಲಾಗಿದೆ. ಸಂಸ್ಥೆಯ 50 ನೌಕರರೊಂದಿಗೆ ಗುತ್ತಿಗೆ ಆಧಾರದಲ್ಲಿ ಇನ್ನೂ 50 ನೌಕರರು ಸೇರಿ ಶಾಯಿ ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಮಾ.19ರ ವೇಳೆಗೆ ಉಳಿಕೆ 6 ಲಕ್ಷ ಬಾಟಲಿ ಶಾಯಿ ಯನ್ನು ರವಾನಿಸಲಾಗುತ್ತದೆ.

ಕಡಿಮೆ ವೆಚ್ಚ, ಹೆಚ್ಚು ಉಪಯೋಗ : ದೇಶದಲ್ಲಿ 1962ರಿಂದಲೂ ವಿವಿಧ ರಾಜ್ಯ ಗಳ ವಿಧಾನ ಸಭೆ, ಲೋಕಸಭೆ ಚುನಾವಣೆಗಳಿ ಗಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾ ವಣೆಗಳಿಗೂ ಮೈಲ್ಯಾಕ್ ಅಳಿಸ ಲಾಗದ ಶಾಯಿ ಯನ್ನು ಬಳಸ ಲಾಗುತ್ತಿತ್ತು. 10 ಎಂಎಲ್ ಹಾಗೂ 5 ಎಂಎಲ್‍ಗಳ ಬಾಟಲನ್ನು ಸರಬರಾಜು ಮಾಡುತ್ತಿತ್ತು. ಕಳೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ವೇಳೆ ಒಂದು 5 ಎಂಎಲ್ ಬಾಟಲಿಗೆ 71 ರೂ., 10 ಎಂಎಲ್ ಬಾಟಲಿಗೆ 142ರೂ ದರ ನಿಗದಿ ಮಾಡಲಾಗಿತ್ತು. ಈ ಬಾರಿ ಗೌಪ್ಯತೆ ಕಾಯ್ದುಕೊಳ್ಳಲಾಗಿದೆ. 10 ಎಂಎಲ್ ಶಾಯಿಯಿಂದ 900 ರಿಂದ 1000 ಮತ ದಾರರ ಬೆರಳುಗಳಿಗೆ ಹಚ್ಚಬಹುದಾಗಿದೆ.

ವಿದೇಶಕ್ಕೂ ರವಾನೆ : ಮೈಲ್ಯಾಕ್ ತಯಾರಿಸುವ ಶಾಯಿಯನ್ನು ವಿಶ್ವದ 25 ರಾಷ್ಟ್ರಗಳು ಬಳಸುತ್ತಿವೆ. ಕಳೆದ ವರ್ಷ ಮಲೇಷಿಯಾ ಹಾಗೂ ಇಂಡೊನೇಷಿಯಾಕ್ಕೂ ಶಾಯಿ ಸರಬರಾಜು ಮಾಡಲಾಗಿತ್ತು.

ಮೈಲ್ಯಾಕ್‍ನಲ್ಲಿ : ನಾಲ್ವಡಿ ಕೃಷ್ಣರಾಜ ಒಡೆಯರ್ 1937ರಲ್ಲಿ ಸ್ಥಾಪಿಸಿದ ದಿನ ದಿಂದಲೂ ಮೈಲ್ಯಾಕ್ ವಿವಿಧ ಬಣ್ಣ ಗಳನ್ನು ತಯಾರಿಸುತ್ತಿದೆ. ಸರ್ಕಾರಿ ಸ್ವಾಮ್ಯದ ಈ ಉದ್ಯಮ ಇದುವರೆಗೂ ನಷ್ಟದ ಸುಳಿಗೆ ಸಿಲುಕಿಲ್ಲ. ಪ್ರತಿ ವರ್ಷವೂ ಲಾಭದತ್ತ ಸಾಗುತ್ತಿದೆ. ಚುನಾವಣೆಗಳಲ್ಲಿ ಬಳಸುವ ಶಾಯಿಯೊಂದಿಗೆ ಸಾರಿಗೆ ಸಂಸ್ಥೆ, ಬಿಎಂಟಿಸಿ, ಕೆಎಂಎಫ್, ಬೆಮೆಲ್ ಸೇರಿದಂತೆ ವಿವಿಧ ಸಂಸ್ಥೆಗಳಿಗೂ ಬಣ್ಣ ಪೂರೈಸುತ್ತಿದೆ.

ಶಾಯಿಯೇ ಬೆಸ್ಟ್: ಕಳೆದ ವರ್ಷ ಚುನಾವಣಾ ಆಯೋಗ ಶಾಯಿ ಬಾಟಲಿ ಬದಲು ಮಾರ್ಕರ್ ಪೆನ್ನನ್ನೂ ತಯಾರಿಸಿಕೊಡುವಂತೆ ಕೋರಿತ್ತು. ಹಾಗಾಗಿ ಮೈಲ್ಯಾಕ್ ಮಾರ್ಕರ್‍ಗಳನ್ನು ತಯಾರಿಸಿ ರವಾನಿಸಿತ್ತು. ಇದನ್ನು ಕೆಲವು ಉಪ ಚುನಾವಣೆಯಲ್ಲಿ ಬಳಸಲಾಗಿತ್ತು. ಆದರೆ ಚುನಾವಣಾ ಆಯೋಗ ನಂತರ ಪೆನ್ನನ್ನು ತಿರಸ್ಕರಿಸಿ ಮತ್ತೆ ಶಾಯಿಗೆ ಬೇಡಿಕೆ ಸಲ್ಲಿಸಿದೆ.
ಎಂ.ಟಿ.ಯೋಗೇಶ್ ಕುಮಾರ್

Translate »