ಮಡಿಕೇರಿ-ಸುಳ್ಯ ಬಸ್ ದರ ಹಿಂದಿನಂತೆ 50 ರೂ. ನಿಗದಿ
ಮೈಸೂರು

ಮಡಿಕೇರಿ-ಸುಳ್ಯ ಬಸ್ ದರ ಹಿಂದಿನಂತೆ 50 ರೂ. ನಿಗದಿ

August 26, 2018

ಮಡಿಕೇರಿ:  ಮಡಿಕೇರಿ-ಮಂಗಳೂರು ಮಾರ್ಗ ರಸ್ತೆ ಸಂಪರ್ಕ ಕಡಿದು ಹೋಗಿದ್ದು, ಈ ಹಿನ್ನಲೆ ಮಡಿಕೇರಿ, ಭಾಗಮಂಡಲ, ಕರಿಕೆ ಮಾರ್ಗದ ಮೂಲಕ ಸುಳ್ಯಕ್ಕೆ ಬಸ್ ಸಂಚರಿಸುತ್ತಿದ್ದು, ಹಿಂದಿನಂತೆ 50 ರೂ ದರ ನಿಗಧಿ ಮಾಡಲಾಗಿದೆ ಎಂದು ಸಾರಿಗೆ ಸಚಿವರಾದ ಡಿ.ಸಿ.ತಮ್ಮಣ್ಣ ಅವರು ಪ್ರಕಟಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಸಚಿವರು, ಮಡಿಕೇರಿ, ಭಾಗ ಮಂಡಲ, ಕರಿಕೆ ಮಾರ್ಗ 56 ಕಿ.ಮೀ ಹೆಚ್ಚುವರಿಯಾಗಲಿದೆ. ಇದರಿಂದ 90 ರೂ ನಿಗಧಿ ಮಾಡಲಾಗಿತ್ತು. ಇದನ್ನು ಹಿಂಪ ಡೆದು ಸಾರ್ವಜನಿಕರಿಗೆ ತೊಂದರೆಯಾಗ ಬಾರದು ಎಂಬ ಉದ್ದೇಶದಿಂದ ಈ ಹಿಂದಿನ ದರದಲ್ಲಿಯೇ ಬಸ್ ದರ ನಿಗದಿಪಡಿಸ ಲಾಗಿದೆ ಎಂದು ಸಚಿವರು ತಿಳಿಸಿದರು.

ಈಗಾಗಲೇ 7 ಮಿನಿ ಬಸ್‍ಗಳನ್ನು ಓಡಿಸಲಾಗುತ್ತಿದೆ. ಇನ್ನೂ 10 ಮಿನಿ ಬಸ್ ಗಳನ್ನು ಮೂರು ನಾಲ್ಕು ದಿನದಲ್ಲಿ ಒದಗಿಸಲಾಗುವುದು. ಈಗಾಗಲೇ ಹಲವು ಕಡೆ ಗಳಲ್ಲಿ ಮಿನಿ ಬಸ್‍ಗಳು ಓಡಾಡುತ್ತಿವೆ ಎಂದು ಸಾರಿಗೆ ಸಚಿವರು ಮಾಹಿತಿ ನೀಡಿದರು.

ಪ್ರಕೃತಿ ವಿಕೋಪ ಹಿನ್ನಲೆ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರಸ್ತಾವನೆ ಸಲ್ಲಿಸಿದಲ್ಲಿ ತಕ್ಷಣವೇ ಸ್ಪಂದಿಸಲಾಗುವುದು ಎಂದು ಸಚಿವರು ಹೇಳಿದರು. ಸಾರಿಗೆ ಇಲಾಖೆ ಹಾಗೂ ಅಸೋಷಿಯೇಷನ್ ಸೇರಿದಂತೆ ಒಟ್ಟು 12.80 ಕೋಟಿ ರೂ ವೇತನವನ್ನು ಸಿಎಂ ಪರಿಹಾರ ನಿಧಿಗೆ ನೀಡಲಾಗುವುದು ಎಂದರು.

ಕೆಎಸ್‍ಆರ್‍ಟಿಸಿ ನಷ್ಟದಲ್ಲಿದ್ದರೂ ಸಹ ಜನಸಾಮಾನ್ಯರಿಗೆ ಒಳಿತು ಮಾಡುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದರು. ಕೊಡಗು ಮತ್ತು ಮಂಡ್ಯ ಜಿಲ್ಲೆಗೆ ಅವಿನಾ ಭಾವ ಸಂಬಂಧವಿದ್ದು, ಕಾವೇರಿ ನೀರು ಕುಡಿಯುವ ಜನತೆ ಕೊಡಗು ಜಿಲ್ಲೆಯ ಜನತೆಯೊಂದಿಗೆ ಸದಾ ಕೈಜೋಡಿಸಲಿದ್ದಾರೆ ಎಂದು ಸಚಿವರು ಹೇಳಿದರು. ಇದಕ್ಕೂ ಮುನ್ನ ಸಾರಿಗೆ ಸಚಿವರು ಭೂ ಕುಸಿತದಿಂದ ಹಾನಿಗೀಡಾದ ರಸ್ತೆಗಳ ಪರಿಶೀಲನೆ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ. ಮಹೇಶ್ ಅವರು ಮಾತನಾಡಿ, ಪ್ರಕೃತಿ ವಿಕೋಪದಿಂದ ಜಿಲ್ಲೆಗೆ 2 ಸಾವಿರ ಕೋಟಿ ರೂ ಹೆಚ್ಚು ನಷ್ಟ ಉಂಟಾಗಿದೆ. ಕೂಲಿ ಕಾರ್ಮಿಕರು, ಬಡವರು ಸಂಕಷ್ಟದಲ್ಲಿದ್ದಾರೆ. ತೋಟವನ್ನು ಕಳೆದುಕೊಂಡಿದ್ದಾರೆ ಅವರಿಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕಿದೆ. ಮನೆ, ಅಂಗನವಾಡಿ, ರಸ್ತೆ ಮತ್ತಿತ್ತರ ಮೂಲ ಸೌಲಭ್ಯವು ಅತ್ಯಗತ್ಯವಾಗಿ ಬೇಕಿದೆ ಎಂದರು. ಪ್ರಕೃತಿ ವಿಕೋಪದಿಂದ 12 ಮಂದಿ ಮೃತ ಪಟ್ಟಿದ್ದಾರೆ, 7 ಮಂದಿ ಕಾಣೆಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

Translate »