ನನ್ನ ಸೇವಾ ಪರತೆ ಮನಗಂಡು ಮತ ನೀಡಿ: ಮತದಾರರಲ್ಲಿ ಮೈಸೂರು ಪಾಲಿಕೆ ವಾರ್ಡ್ ನಂ.3ರ ಪಕ್ಷೇತರ ಅಭ್ಯರ್ಥಿ ಕೆ.ವಿ.ಶ್ರೀಧರ್ ಮನವಿ
ಮೈಸೂರು

ನನ್ನ ಸೇವಾ ಪರತೆ ಮನಗಂಡು ಮತ ನೀಡಿ: ಮತದಾರರಲ್ಲಿ ಮೈಸೂರು ಪಾಲಿಕೆ ವಾರ್ಡ್ ನಂ.3ರ ಪಕ್ಷೇತರ ಅಭ್ಯರ್ಥಿ ಕೆ.ವಿ.ಶ್ರೀಧರ್ ಮನವಿ

August 26, 2018

ಮೈಸೂರು: ಯಾವುದೇ ಆಮಿಷಕ್ಕೆ ಒಳಗಾಗದೇ ತಮ್ಮ ಸಾಮಾಜಿಕ ಸೇವಾ ಕಾರ್ಯ, ಅರ್ಹತೆ ನೋಡಿ 3ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿಯಾದ ನನಗೆ ವಾರ್ಡಿನ ಮತದಾರರು ಬೆಂಬಲ ನೀಡಬೇಕೆಂದು ಕೆ.ವಿ.ಶ್ರೀಧರ ಮನವಿ ಮಾಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಾವು ಇದುವರೆಗೂ ಮಾಡಿರುವ ಜನಪರ, ಸೇವಾಕಾರ್ಯ ಜೊತೆಗೆ ತಮ್ಮನ್ನು ಆಯ್ಕೆ ಮಾಡಿದಲ್ಲಿ ಮಾಡುವಂತಹ ಕಾರ್ಯಗಳ ಸಂಬಂಧಿ ಹೊರತಂದಿರುವ ಕರಪತ್ರ ಹಾಗೂ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

3ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿಯಾದ ನನ್ನ ಕ್ರಮ ಸಂಖ್ಯೆ 5 ಆಗಿದ್ದು, ಚಿಹ್ನೆ `ಆಟೋ’ ಆಗಿದೆ. ಹತ್ತಾರು ವರ್ಷಗಳಿಂದ ಸಮಾಜದ ಒಡನಾಟ ಹೊಂದಿರುವ ನಾನು, ಸಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತನಾಗಿ ಕೆಲಸ ಮಾಡಿದ್ದೇನೆ. ಆದರೆ ಪಕ್ಷದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ 3ನೇ ವಾರ್ಡಿನಿಂದ (ಮಹದೇಶ್ವರ ಬಡಾವಣೆ) ಕಣಕ್ಕೀಳಿದಿದ್ದೇನೆ. ಮತದಾರರು ಆಶೀರ್ವದಿಸಬೇಕು ಎಂದು ಕೋರಿದರು.

ಕಳೆದ ಪಾಲಿಕೆ ಚುನಾವಣೆಯಲ್ಲಿ ಹಾಲಿ ವಾರ್ಡಿನ ಪ್ರದೇಶವೂ ಒಳಪಡುವ ಲೋಕನಾಯಕನಗರ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೆ. ಈ ವೇಳೆ 2680 ಮತಗಳನ್ನು ಪಡೆದು ಕೇವಲ 190 ಮತಗಳ ಅಂತರದಿಂದ ಸೋಲು ಕಾಣಬೇಕಾಯಿತು. ಸೋತ ಕಾರಣಕ್ಕೆ ಸಾರ್ವಜನಿಕ ಸೇವಾ ಕಾರ್ಯಗಳಿಂದ ಹಿಂದೆ ಸರಿಯದೇ ಜನತೆಯ ನಡುವೆ ಕೆಲಸ ಮಾಡಿದ್ದೇನೆ. ಜೊತೆಗೆ ಪಕ್ಷಕ್ಕೂ ನಿಷ್ಠೆಯಿಂದ ದುಡಿದಿದ್ದೇನೆ. ಆದರೆ ವಾರ್ಡಿನ ಜನತೆಯಿಂದ ದೂರವಿದ್ದು, ಚುನಾವಣೆ ಸಮಯದಲ್ಲಿ ಮನೆಯಿಂದ ಹೊರಬಂದವರಿಗೆ ಪಕ್ಷ ಮಣೆ ಹಾಕಿತು ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಹೊರತಂದಿರುವ ಕೈಪಿಡಿಯಲ್ಲಿ ಚುನಾವಣೆ ವೇಳೆ ನಡೆಯುವ ವಿವಿಧ ರೀತಿಯ ಭ್ರಷ್ಟಾಚಾರದ ಬಗ್ಗೆ ವಿವರಿಸಿದ್ದೇನೆ. ಜೊತೆಗೆ ನಾನು ಸಾರ್ವಜನಿಕ ಜನಜೀವನದಲ್ಲಿ ಯಾವ ರೀತಿ ಸೇವಾ ಮನೋಭಾವದಲ್ಲಿ ನಿರತನಾಗಿದ್ದೇನೆ ಎಂಬುದನ್ನೂ ಹೇಳಿದ್ದೇನೆ. 3ನೇ ವಾರ್ಡಿನ ಅಭಿವೃದ್ಧಿಗೆ ಯಾವ ಕೆಲಸಗಳು ಆಗಬೇಕು ಎಂಬ ಬಗ್ಗೆ `ನಮ್ಮ ವಾರ್ಡ್ ನನ್ನ ಸಂಕಲ್ಪ’ ಶೀರ್ಷಿಕೆಯಡಿ ನನ್ನ ಯೋಜನೆಯನ್ನು ಸಾದರಪಡಿಸಿದ್ದೇನೆ. ಜನ ಸೇವೆ ಹಾಗೂ ಪಕ್ಷ ನಿಷ್ಠೆ ಆಧಾರದಲ್ಲಿ ಅಭ್ಯರ್ಥಿಗಳಿಗೆ ಪಕ್ಷಗಳು ಟಿಕೆಟ್ ನೀಡುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 3ನೇ ವಾರ್ಡಿನ ಮುಖಂಡರಾದ ದಳಪತಿ ರಮೇಶ್, ಗಂಗಾಧರ್, ಕೃಷ್ಣೇಗೌಡ, ಜಯರಾಮ್, ಎಂ.ಮಂಜು, ಆರ್.ನಾಗೇಂದ್ರ, ಕೃಷ್ಣ ಗೋಷ್ಠಿಯಲ್ಲಿದ್ದರು.

Translate »