ಮೈಸೂರು ನಗರ ಪಾಲಿಕೆಯಲ್ಲಿ ಬಿಎಸ್‍ಪಿ 7ರಿಂದ 8 ವಾರ್ಡ್‍ನಲ್ಲಿ ಜಯ: ಪಕ್ಷದ ರಾಜ್ಯಾಧ್ಯಕ್ಷ ಪ್ರೊ. ಹರಿರಾಂ ವಿಶ್ವಾಸ
ಮೈಸೂರು

ಮೈಸೂರು ನಗರ ಪಾಲಿಕೆಯಲ್ಲಿ ಬಿಎಸ್‍ಪಿ 7ರಿಂದ 8 ವಾರ್ಡ್‍ನಲ್ಲಿ ಜಯ: ಪಕ್ಷದ ರಾಜ್ಯಾಧ್ಯಕ್ಷ ಪ್ರೊ. ಹರಿರಾಂ ವಿಶ್ವಾಸ

August 26, 2018

ಮೈಸೂರು:  ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿ 12 ವಾರ್ಡ್‍ಗಳಲ್ಲಿ ಸ್ಪರ್ಧೆ ಮಾಡಿದ್ದು, 7ರಿಂದ 8 ವಾರ್ಡ್‍ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪ್ರೊ.ಹರಿರಾಂ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಗೆ ಉತ್ತಮ ಕಾರ್ಯನಿರ್ವಹಣೆ ನೀಡುವ ಹಾಗೂ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ಉದ್ದೇಶದೊಂದಿಗೆ ಇದೇ ಮೊದಲ ಬಾರಿಗೆ ಬಿಎಸ್‍ಪಿ ಪಾಲಿಕೆ ಚುನಾವಣೆಯಲ್ಲಿ 12 ವಾರ್ಡ್‍ಗಳಲ್ಲಿ ಸ್ಪರ್ಧೆ ಮಾಡಿದೆ. ಟಿಕೆಟ್ ಹಂಚಿಕೆಯಲ್ಲಿ ಎಲ್ಲಾ ಸಮುದಾಯ ಹಾಗೂ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಲಾಗಿದೆ ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಎನ್.ಮಹೇಶ್ ಗೆಲ್ಲುವ ಮೂಲಕ ರಾಜ್ಯದಲ್ಲಿ ಪಕ್ಷದ ಖಾತೆ ತೆರೆದಿದ್ದಾರೆ. ಜೊತೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ಮಾದರಿಯಲ್ಲಿ ಮೈಸೂರು ಪಾಲಿಕೆಯಲ್ಲೂ ಪಕ್ಷದ ಅಭ್ಯರ್ಥಿಗಳು ಜಯಶಾಲಿಗಳಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ ಎಂದು ನುಡಿದರು.

ವಾರ್ಡ್‍ಗಳಾದ 7, 14, 15, 16, 17, 27, 33, 38, 39, 47, 56 ಹಾಗೂ 60ರಲ್ಲಿ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದು, ಈ ವಾರ್ಡ್‍ಗಳಲ್ಲಿ ಬಿಎಸ್‍ಪಿ ಪರ ಒಲವಿದೆ. ಹೀಗಾಗಿ ಗೆಲುವು ಸಾಧಿಸುವ ಆಶಾಭಾವನೆ ಇದೆ ಎಂದರು.

ಸಾರ್ವಜನಿಕರ ಸಮಸ್ಯೆಗಳ ನಿವಾರಣೆಗೆ ಮೊದಲ ಆದ್ಯತೆ, ತೆರಿಗೆ ಹಣದ ಸದ್ಬಳಕೆ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಾಲಿಕೆ ಸವಲತ್ತುಗಳ ಬಳಕೆ, ರಸ್ತೆ ಡಾಂಬರೀಕರಣ, ಸೂಕ್ತ ಒಳಚರಂಡಿ ವ್ಯವಸ್ಥೆ, ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ, ಶುದ್ಧ ಕುಡಿಯುವ ನೀರು ಪೂರೈಕೆ ಸೇರಿದಂತೆ ನಗರಕ್ಕೆ ಅಗತ್ಯವಾಗಿ ಆಗಬೇಕಿರುವ ಕಾರ್ಯಕ್ರಮಗಳನ್ನು ಪಕ್ಷದ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ವಿವರಿಸಿದರು. ಪಕ್ಷದ ಮೈಸೂರು ವಲಯ ಉಸ್ತುವಾರಿ ಸೋಸಲೆ ಸಿದ್ದರಾಜು, ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »