ಕೇಂದ್ರ ರಕ್ಷಣಾ ಸಚಿವರಿಂದ ನಾನು ರಾಜಕೀಯ ವ್ಯವಸ್ಥೆ ಕಲಿಯಬೇಕಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ತಿರುಗೇಟು
ಕೊಡಗು

ಕೇಂದ್ರ ರಕ್ಷಣಾ ಸಚಿವರಿಂದ ನಾನು ರಾಜಕೀಯ ವ್ಯವಸ್ಥೆ ಕಲಿಯಬೇಕಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ತಿರುಗೇಟು

August 26, 2018

ಮಡಿಕೇರಿ:  ಮೂರು ಬಾರಿ ಶಾಸಕನಾಗಿ ಜನರಿಂದ ಆಯ್ಕೆಯಾಗಿರುವ ನಾನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾ ರಾಮನ್ ಅವರಿಂದ ರಾಜಕೀಯ ವ್ಯವಸ್ಥೆಯನ್ನು ಕಲಿಯಬೇಕಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ.

ಶುಕ್ರವಾರ ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆದ ವೇಳೆ ರಕ್ಷಣಾ ಸಚಿವರು ಸಾ.ರಾ. ಮಹೇಶ್ ವಿರುದ್ಧ ಕಿಡಿಕಾರಿದ ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯದಿಂದ ಹೊರಬಿದ್ದಿರುವ ಸ್ಪಷ್ಟನೆಗೆ ಸಾ.ರಾ.ಮಹೇಶ್ ಗರಂ ಆಗಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ನೀಡಿರುವ ಅವರು ಸೈನಿಕರ ಜೊತೆ ಸಭೆಗೆ ನಾನು ಆಕ್ಷೇಪ ವ್ಯಕ್ತಪಡಿಸಿದ್ದೇನೆಂದು ಸತ್ಯಕ್ಕೆ ದೂರವಾಗಿದ್ದು, ಸೈನಿಕರ ಸಭೆ ಮುಗಿಯುವವರೆಗೂ ನಾನು ಮತ್ತು ಜಿಲ್ಲಾಧಿಕಾರಿಗಳು ಕಾದಿದ್ದೆವು. ಆ ನಂತರ ಮತ್ತೊಂದು ಸಭೆಗೆ ಮುಂದಾದಾಗ ಮೊದಲು ಅಧಿಕಾರಿಗಳ ಸಭೆ ನಡೆಸುವಂತೆ ನಾನು ಮನವಿ ಮಾಡಿದ್ದೆ. ಸಂತ್ರಸ್ತರ ಕೆಲಸ ಕಾರ್ಯಗಳನ್ನು ಬಿಟ್ಟು ರಕ್ಷಣಾ ಸಚಿವರಿಗಾಗಿ ಅಧಿಕಾರಿಗಳು ಕಾದು ಕುಳಿತಿದ್ದರು. ಅದರಿಂದಾಗಿ ಸಂತ್ರಸ್ತರ ಕೆಲಸ ಕಾರ್ಯಗಳಿಗೆ ತೊಂದರೆ ಆಗುತ್ತದೆ ಎಂಬ ಕಾರಣದಿಂದ ಮೊದಲು ಅಧಿಕಾರಿಗಳ ಸಭೆ ನಡೆಸುವಂತೆ ಮನವಿ ಮಾಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.

ಜನರ ಕೆಂಗಣ್ಣಿಗೆ ಗುರಿ ಆಗುವುದರಿಂದ ತಪ್ಪಿಸಿಕೊಳ್ಳಲು ರಕ್ಷಣಾ ಸಚಿವರು ಕೊಡಗಿಗೆ ಭೇಟಿ ನೀಡಿದ್ದರು ಅಷ್ಟೇ. ಅವರ ಭೇಟಿಯು ‘ಬಂದ ಪುಟ್ಟ-ಹೋದ ಪುಟ್ಟ’ ಎಂಬಂತಿತ್ತೆ ಹೊರತು ಅವರ ಭೇಟಿಯಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದಿರುವ ಸಾ.ರಾ.ಮಹೇಶ್, ತಾವು ನಿರ್ಮಲಾ ಸೀತಾರಾಮನ್ ಅವರ ಟೀಕೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೊಡಗಿನಲ್ಲಿ ಪ್ರವಾಹ ಶುರುವಾದ 24 ಗಂಟೆಗಳಿಂದ ನಾನು ಕೊಡಗಿನಲ್ಲಿ ವಾಸ್ತವ್ಯ ಹೂಡಿ ಕೆಲಸ ಮಾಡುತ್ತಿದ್ದೇನೆ. ಕರ್ನಾಟಕದ ಕಾಶ್ಮೀರ ಕೊಡಗು ಹಿಂದಿನಂತೆ ಆಗಬೇಕೆಂಬುದು ನನ್ನ ಗುರಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಸಚಿವರು ಬಳಸಿದ ‘ಪರಿವಾರ’ ಎಂಬ ಪದದ ಬಗ್ಗೆ ಅಪಾರ್ಥದ ಪ್ರಶ್ನೆಯೆ ಉದ್ಭವಿಸುವುದಿಲ್ಲ. ಸೇನೆಯನ್ನೇ ಅವರು ಪರಿವಾರ ಎಂದು ಹೇಳಿದ್ದಾರೆ ಎಂಬ ಅರಿವು ನನಗಿದೆ ಎಂದು ಸಾ.ರಾ.ಮಹೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »