ಕಾಂಗ್ರೆಸ್, ಬಿಜೆಪಿ ಬಿಟ್ಟು ಬಿಎಸ್‍ಪಿಗೆ ಅವಕಾಶ ನೀಡಿ
ಮೈಸೂರು

ಕಾಂಗ್ರೆಸ್, ಬಿಜೆಪಿ ಬಿಟ್ಟು ಬಿಎಸ್‍ಪಿಗೆ ಅವಕಾಶ ನೀಡಿ

April 11, 2019

ಮೈಸೂರು: ಕಾಂಗ್ರೆಸ್, ಬಿಜೆಪಿ ಪಕ್ಷಗಳು ಏನೇ ನಾಟಕ ವಾಡಿದರೂ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ನಾಯಕಿ ಮಾಯಾವತಿ ಇಂದಿಲ್ಲಿ ಭವಿಷ್ಯ ನುಡಿದರು.

ಮೈಸೂರಿನಲ್ಲಿ `ಆನೆ ನಡಿಗೆ ಪಾರ್ಲಿಮೆಂಟ್ ಕಡೆಗೆ’ ಬೃಹತ್ ರ್ಯಾಲಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ ದುರಾಡಳಿತದಿಂದ ಬೇಸತ್ತಿರುವ ಜನತೆ ಬಿಎಸ್‍ಪಿಯನ್ನು ಅಧಿಕಾರಕ್ಕೆ ತರಲು ತುದಿಗಾಲಲ್ಲಿ ನಿಂತಿದ್ದಾರೆ. ಜನರ ಆಶಯ ಈ ಬಾರಿ ಈಡೇರಲಿದೆ. ಚೌಕಿದಾರ್ ಗಳ ಆಟ ಏನೂ ನಡೆಯುವುದಿಲ್ಲ. ಆರ್‍ಎಸ್‍ಎಸ್, ಕೋಮುವಾದಿ ಮತ್ತು ಜಾತೀವಾದಿಗಳ ಹಿಡಿತದಲ್ಲಿದ್ದ ಸರ್ಕಾರ ಹೋಗಲಿದೆ ಎಂದು ಅಭಿಪ್ರಾಯಪಟ್ಟರು.

ಬಡವರು, ಕಾರ್ಮಿಕರು, ಯುವಕರು, ಮಹಿಳೆಯರು, ರೈತರು, ದಲಿತರು, ಹಿಂದುಳಿದವರು, ಆದಿವಾಸಿಗಳು, ಮುಸ್ಲಿಮರು, ಅಲ್ಪಸಂಖ್ಯಾತರಿಗೆ `ಅಚ್ಛೇ ದಿನ್’ ಬರಲೇ ಇಲ್ಲ. ಕೇಂದ್ರದಲ್ಲಿ ಮೋದಿ ಸರ್ಕಾರ ಖಜಾನೆಯ ಹಣವನ್ನು ನೀರಿನಂತೆ ಪೋಲು ಮಾಡಿದ್ದಷ್ಟೇ ಅವರ ಸಾಧನೆ ಎಂದು ದೂರಿದರು.

ಸ್ವಾತಂತ್ರ್ಯಾ ನಂತರ ಕೇಂದ್ರದಲ್ಲಿ ಕಾಂಗ್ರೆಸ್, ಬಿಜೆಪಿ ಇನ್ನಿತರ ಪಕ್ಷಗಳ ಆಡಳಿತ ನೋಡಿದ್ದೀರಿ. ಅವರ ಆಡಳಿತದಲ್ಲಿ ಬಡಜನರ ಅಭಿವೃದ್ಧಿ ಶೂನ್ಯ. ಆ ಪಕ್ಷಗಳು ಪ್ರಕಟಿಸಿದ ಪ್ರಣಾಳಿಕೆಯಂತೆ ನಡೆದುಕೊಂಡಿಲ್ಲ. ಬಿಜೆಪಿಗಾಗಲೀ, ಮೋದಿಗಾಗಲೀ ಪ್ರಣಾಳಿಕೆ ನೀಡುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ ಎಂದರು. ಈ ಬಾರಿಯ ಚುನಾವಣೆ ಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕಿದೆ. ಆ ನಿಟ್ಟಿನಲ್ಲಿ ದೇಶಾದ್ಯಂತ ಬಿಎಸ್‍ಪಿ ಅಲೆ ಸೃಷ್ಟಿಯಾಗಿದೆ. ದೇಶದ ಜನರ ಹಿತದೃಷ್ಟಿಯಿಂದ ನಾವು ಸರ್ಕಾರ ರಚಿಸುವುದು ಅನಿವಾರ್ಯವೂ ಆಗಿದೆ ಎಂದು ಹೇಳಿದರು. ನಮ್ಮ ಪಕ್ಷವನ್ನು ಕೇಂದ್ರದಲ್ಲಿ ಆಡಳಿತಕ್ಕೆ ತರುವ ಅನಿವಾರ್ಯತೆಯನ್ನು ದೇಶದ ಜನರು ಬಯಸಿದ್ದಾರೆ. ಉತ್ತರ ಪ್ರದೇಶದಲ್ಲಿ 80 ಸ್ಥಾನಗಳು ದೊರೆಯಲಿವೆ. ಬಿಜೆಪಿ ಸರ್ಕಾರ ಹೋಗುತ್ತದೆ. ಮಹಾ ಘಟಬಂಧನ್ ಯಶಸ್ವಿಯಾಗಲಿದೆ. ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿದ್ದೇವೆ. ಈ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಎಸ್‍ಪಿ ಖಾತೆ ತೆರೆಯಬೇಕು. ಹೆಚ್ಚು ಸದಸ್ಯರನ್ನು ಸಂಸತ್ತಿಗೆ ಕಳಿಸಬೇಕು ಎಂದು ವೇದಿಕೆ ಮೇಲಿದ್ದ ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಲೋಕಸಭಾ ಕ್ಷೇತ್ರಗಳ ಬಿಎಸ್‍ಪಿ ಅಭ್ಯರ್ಥಿಗಳತ್ತ ಬೊಟ್ಟು ತೋರಿಸಿ ಗೆಲ್ಲಿಸುವಂತೆ ಮನವಿ ಮಾಡಿದರು.

ವಿಧಾನಸಭೆಯಲ್ಲೂ ಬಿಎಸ್‍ಪಿ ತರಲು ಸಿದ್ದರಾಗಿ: ಹಳೆಯ ಮೈಸೂರು ಭಾಗದಲ್ಲಿ ಬಹುಜನ ಸಮಾಜ ಪಕ್ಷ ಸಾಕಷ್ಟು ಬೆಳೆದಿದೆ. ಕೊಳ್ಳೇಗಾಲದಲ್ಲಿ ಎನ್.ಮಹೇಶ್ ಅವರನ್ನು ಗೆಲ್ಲಿಸುವ ಮೂಲಕ ಅದನ್ನು ಸಾಬೀತುಪಡಿಸಿದ್ದೀರಿ. ಮುಂಬರುವ ವಿಧಾನಸಭಾ ಚುನಾವಣೆ ಯಲ್ಲಿಯೂ ಬಿಎಸ್‍ಪಿ ಹೆಚ್ಚು ಸ್ಥಾನಗಳನ್ನು ಗೆದ್ದು ಕರ್ನಾಟಕದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರು ಸಿದ್ಧರಾಗಬೇಕು ಎಂದೂ ಕರೆ ನೀಡಿದರು.

ಬಡವರಿಗಾಗಿ ವಿಶೇಷ ಕಾರ್ಯಕ್ರಮ: ಬಹುಜನ ಸಮಾಜ ಪಕ್ಷ ಇತರೆ ಪಕ್ಷಗಳಂತೆ ಪ್ರಣಾಳಿಕೆ ಮಾಡಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರಣಾಳಿಕೆಯಂತೆ ಯಾವುದೂ ನಡೆದಿಲ್ಲ. ಕೇಂದ್ರದಲ್ಲಿ ಸರ್ಕಾರ ರಚಿಸಲು ಅವಕಾಶ ಸಿಕ್ಕಿದರೆ ಅತೀ ಬಡವರಿಗೆ ತಿಂಗಳಿಗೆ 6000 ರೂ. ನೀಡುವ ಜೊತೆಗೆ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದರು.
ಮಾಯಾವತಿ ಆನಂದಭಾಷ್ಪ: ಮಧ್ಯಾಹ್ನ 1.32ಕ್ಕೆ ವೇದಿಕೆಗೆ ಬಂದ ಮಾಯಾವತಿ ಅವರು, ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ಕಂಡು ಆನಂದ ಭಾಷ್ಪ ಸುರಿಸಿದರು. ಬೆಹನ್ ಜೀ.. ಬೆಹನ್ ಜೀ.. ಘೋಷಣೆ ಭಾರೀ ಪ್ರಮಾಣದಲ್ಲಿ ಕೇಳಿಬಂದವು.

Translate »