ಶ್ರೀರಂಗಪಟ್ಟಣದ ಹಲವೆಡೆ ಪುತ್ರ ನಿಖಿಲ್ ಪರ ಸಿಎಂ ಬಿರುಸಿನ ಪ್ರಚಾರ
ಮೈಸೂರು

ಶ್ರೀರಂಗಪಟ್ಟಣದ ಹಲವೆಡೆ ಪುತ್ರ ನಿಖಿಲ್ ಪರ ಸಿಎಂ ಬಿರುಸಿನ ಪ್ರಚಾರ

April 11, 2019

ಶ್ರೀರಂಗಪಟ್ಟಣ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ, ತಮ್ಮ ಪುತ್ರ ನಿಖಿಲ್ ಕುಮಾರ ಸ್ವಾಮಿ ಪರ ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಬಿರುಸಿನ ಪ್ರಚಾರ ನಡೆಸಿದರು.

ಕೆಆರ್‍ಎಸ್‍ನಲ್ಲಿ ಪ್ರಚಾರ ಆರಂಭಿಸಿದ ಅವರು ಮಾತನಾಡಿ, ಮೈಸೂರು ಅರಸರು ಕೆಆರ್‍ಎಸ್ ಜಲಾಶಯ ಕಟ್ಟಿದ್ದಾರೆ. ಅವರ ಕೊಡುಗೆ ಬಗ್ಗೆ ಅಪಾರ ಗೌರವ ಇಟ್ಟು ಕೊಂಡಿದ್ದೇನೆ. ಈ ಭಾಗದ ಜನರು ಹಕ್ಕು ಪತ್ರಕ್ಕಾಗಿ ಕಳೆದ 40 ವರ್ಷಗಳಿಂದ ಕಾಯುತ್ತಿದ್ದೀರಿ. ಚುನಾವಣೆ ಮುಗಿದ ನಂತರ ಖಂಡಿತವಾಗಿ ನಿಮಗೆ ಹಕ್ಕುಪತ್ರ ಕೊಟ್ಟು ನಿಮ್ಮ ಬದುಕಿಗೆ ಮುಕ್ತಿ ದೊರಕಿಸುತ್ತೇನೆ ಎಂದು ಭರವಸೆ ನೀಡಿದರು.

ಕೆಆರ್‍ಎಸ್ ಅನ್ನು ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಪಡಿ ಸುತ್ತೇವೆ. ಅದರಿಂದ ಇಲ್ಲಿನ ಸ್ಥಳೀಯ ಯುವಕರಿಗೆ ಅನುಕೂಲವಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕುಟುಂಬಕ್ಕೆ ಸಣ್ಣ ನೋವಾದರೂ ನಾನು ನೇರವಾಗಿ ಸಹಾ ಯಕ್ಕೆ ಬರುತ್ತೇನೆ. ಈಗಾಗಲೇ ಜಿಲ್ಲೆಯ ರೈತರ 400 ಕೋಟಿ ರೂ. ಸಾಲ ಮನ್ನಾ ಮಾಡಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ 9 ಸಾವಿರ ಕೋಟಿ ರೂ. ಅನುದಾನ ನೀಡಿದ್ದೇನೆ ಎಂದ ಅವರು, ನಿಮ್ಮ ಪ್ರೀತಿಯನ್ನು ದುರುಪಯೋಗಪಡಿಸಿಕೊಳ್ಳುವವರನ್ನು ನಂಬುತ್ತಿರೋ ಅಥವಾ ನಿಮ್ಮ ಅಭಿವೃದ್ಧಿಗಾಗಿ ದುಡಿಯುವವರನ್ನು ನಂಬುತ್ತೀರೋ ನೀವೇ ನಿರ್ಧಾರ ಮಾಡಿ. ಜಿಲ್ಲೆಯ ಅಭಿ ವೃದ್ಧಿಗಾಗಿ ಹಾಗೂ ಸುಭದ್ರ ಸರ್ಕಾರಕ್ಕಾಗಿ ನಿಖಿಲ್‍ಗೆ ಮತ ನೀಡಿ ಎಂದು ಮುಖ್ಯ ಮಂತ್ರಿಗಳು ಮನವಿ ಮಾಡಿದರು.

ನಿಖಿಲ್ ನನ್ನು ಸೋಲಿಸಿ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ,ಕೆಲ ಕಾಂಗ್ರೆಸ್ಸಿಗರು ಮತ್ತು ರೈತ ಮುಖಂಡರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಯಾವುದೇ ಅಪಪ್ರಚಾರಗಳಿಗೂ ಕಿವಿಗೊಡಬೇಡಿ. ಮೈತ್ರಿ ಸರ್ಕಾರವನ್ನು 5 ವರ್ಷ ಸುಭದ್ರವಾಗಿ ನಡೆಸಲು ನೀವೆಲ್ಲಾ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಮ್ಮ ಜೊತೆ ಇದ್ದು, ನಮ್ಮಿಂದಲೇ ಬೆಳೆದವರು ನಮ್ಮನ್ನು ಮುಗಿಸಿ ಸರ್ಕಾರವನ್ನು ಬೀಳಿಸಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್‍ನ ರೆಬೆಲ್ ನಾಯಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಅಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು. ಸುಳ್ಳು ಆಪಾದನೆ ಮಾಡಿ ವಿಕಲ ಚೇತನ ಮಹಿಳಾ ಡಿಸಿಯನ್ನು ವರ್ಗಾವಣೆ ಮಾಡಿಸಿದ್ದೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ದೊಡ್ಡ ಸಾಧನೆ ಎಂದು ಬಾಬುರಾಯನಕೊಪ್ಪಲಿನಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು. ಡಿಸಿ ಯಾರಿದ್ದರೆ ನನಗೇನು? ಅವರ ವರ್ಗಾವಣೆಯಿಂದ ನನಗೇನೂ ನಷ್ಟವಿಲ್ಲ. ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣೆ ಎದುರಿಸುವವನು ನಾನಲ್ಲ. ಮಂಡ್ಯದ ಜನತೆ ನನ್ನ ಜೊತೆ ಇರುವಾಗ ನಾನ್ಯಾಕೆ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದರು.

ನನ್ನ ಬಜೆಟ್ ಅನ್ನು ಮಂಡ್ಯ ಬಜೆಟ್ ಎಂದು ಬಿಜೆಪಿಯವರು ಆರೋಪಿಸಿದ್ದರು. ಪ್ರಧಾನಿ ಮೋದಿಯವರು ಸುಮಲತಾ ಅವರನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಅವರು ಯಾವ ಪಕ್ಷದ ಅಭ್ಯರ್ಥಿಯಾದರೆ ನನಗೇನು? ನಿಖಿಲ್ ಪರ ಜನರಲ್ಲಿ ಆಶೀರ್ವಾದ ಕೇಳಲು ನಾನು ಬಂದಿದ್ದೇನೆ ಎಂದರು. ತಾಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ಕಾರ್ಯಕರ್ತರು ಕ್ರೇನ್ ಮೂಲಕ ಭಾರೀ ಗಾತ್ರದ ಹಾರವನ್ನು ಕುಮಾರಸ್ವಾಮಿಯವರಿಗೆ ಹಾಕಿದರು. ಅದಕ್ಕೆ ಅನುಮತಿ ಪಡೆಯದ ಕಾರಣ ಸ್ಥಳದಲ್ಲಿದ್ದ ಚುನಾವಣಾಧಿಕಾರಿಗಳು ಕ್ರೇನ್‍ನ ನಂಬರ್ ಅನ್ನು ಗುರುತಿಸಿಕೊಂಡಾಗ ಗುಂಪಾಗಿ ಬಂದ ಕಾರ್ಯಕರ್ತರು `ಇದೆಲ್ಲಾ ಬೇಡಿ ಬಿಡಿ ಸಾರ್’ ಎಂದು ಕೇಸ್ ಹಾಕದಂತೆ ಅಧಿಕಾರಿಗಳನ್ನು ಕೇಳಿಕೊಂಡದ್ದೂ ನಡೆಯಿತು.

Translate »