ಭೇರ್ಯ: ವಿಶೇಷ ಮತಗಟ್ಟೆಗಳಲ್ಲಿ ಮತದಾರರಿಗೆ ಹಣ್ಣಿನ ಸಸಿ, ಮಜ್ಜಿಗೆ ವಿತರಣೆ
ಮೈಸೂರು

ಭೇರ್ಯ: ವಿಶೇಷ ಮತಗಟ್ಟೆಗಳಲ್ಲಿ ಮತದಾರರಿಗೆ ಹಣ್ಣಿನ ಸಸಿ, ಮಜ್ಜಿಗೆ ವಿತರಣೆ

April 19, 2019

ವೈಯಕ್ತಿಕ ಸ್ವಚ್ಛತೆ ಜಾಗೃತಿಗಾಗಿ ಸಖಿ ಮತಗಟ್ಟೆಗಳಲ್ಲಿ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್

ಭೇರ್ಯ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕೆ.ಆರ್.ನಗರ ತಾಲೂಕಿನ ಚಿಕ್ಕಭೇರ್ಯ ಹಾಗೂ ಹೆಬ್ಸೂರು ಗ್ರಾಮದ ಮತಗಟ್ಟೆಯಲ್ಲಿ ವಿವಿ ಪ್ಯಾಟ್ ದೋಷದಿಂದಾಗಿ ಮತದಾನ ಕೆಲಕಾಲ ಸ್ಥಗಿತಗೊಂಡಿದ್ದನ್ನು ಹೊರತುಪಡಿಸಿ ಉಳಿದಂತೆ ಭೇರ್ಯದಲ್ಲಿ ಶಾಂತಿಯುತ ಮತದಾನವಾಗಿದೆ. ಮತಕೇಂದ್ರಗಳ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

ಕೆಲ ಮತಗಟ್ಟೆಗಳಲ್ಲಿ ವಿಶೇಷಚೇತನರು, ವಯೋವೃದ್ಧರನ್ನು ಗಾಲಿ ಕುರ್ಚಿಯಲ್ಲಿ ಸ್ಥಳೀಯ ಗ್ರಾ.ಪಂ. ಸಿಬ್ಬಂದಿ ಮತಗಟ್ಟೆ ಕರೆತಂದು ಮತದಾನ ಮಾಡಿಸಿದರು.

ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಿದ ತಾಪಂ ಇಒ ಲಕ್ಷ್ಮಿಮೋಹನ್ ಅವರು, ಸಾಲಿಗ್ರಾಮದ ಮತಗಟ್ಟೆ ಸಂಖ್ಯೆ 69 ಮಾದರಿ ಮತಗಟ್ಟೆಯನ್ನಾಗಿ ರೂಪಿಸಲಾಗಿದೆ. ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಈ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಮತದಾರರಿಗೆ ಹಣ್ಣಿನ ಗಿಡಗಳು ಹಾಗೂ ಮಜ್ಜಿಗೆ ವಿತರಿಸಿದ್ದೇವೆ ಎಂದರು.

ಸಖಿ ಬೂತ್ ವಿಶೇಷ: ಕೃಷ್ಣರಾಜನಗರದಲ್ಲಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ತಲಾ ಒಂದು ಮಾದರಿ ಮತಗಟ್ಟೆ ತೆರೆಯಲಾಗಿದೆ. ಬ್ಯಾಡರಹಳ್ಳಿಯಲ್ಲಿ ಸಖಿ ಬೂತ್ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಮಾದರಿ ಮತಗಟ್ಟೆಗಳಲ್ಲಿ ಹಣ್ಣಿನ ಗಿಡಗಳನ್ನು ವಿತರಿಸಿ ಪರಿಸರ ಪ್ರಜ್ಞೆ ಹಾಗೂ ಜಾಗತಿಕ ತಾಪಮಾನ ಕುರಿತು ಮತದಾರರಿಗೆ ಅರಿವು ಮೂಡಿಸಲಾಯಿತು. ಸಖಿ ಬೂತ್‍ನಲ್ಲಿ ಮಹಿಳಾ ಮತದಾರರಿಗೆ ಸ್ಯಾನಿಟರಿ ಪ್ಯಾಡ್ ವಿತರಿಸಿ, ವೈಯಕ್ತಿಕ ಶುಚಿತ್ವ ಹಾಗೂ ನೈರ್ಮಲ್ಯ ಕುರಿತು ಅರಿವು ಮೂಡಿಸುವ ಪ್ರಯತ್ನವೂ ನಡೆದಿದೆ ಎಂದರು.

ತಾಲೂಕಿನಲ್ಲಿ ಮಹಿಳಾ ಮತದಾರರ ಮತಗಟ್ಟೆಗಳಿಗೆ ಬಂದು ಮತದಾನ ಮಾಡುವಂತೆ ಅರಿವು ಮೂಡಿಸಿದ ಪರಿಣಾಮ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಚಿವ ಸಾರಾ ಮತದಾನ: ಸಚಿವರಾದ ಸಾ.ರಾ.ಮಹೇಶ್ ಸ್ವಗ್ರಾಮ ಸಾಲಿಗ್ರಾಮದ ಮತಗಟ್ಟೆಗೆ (ಸಂಖ್ಯೆ 79) ಪತ್ನಿ ಹಾಗೂ ಪುತ್ರನೊಂದಿಗೆ ಬಂದು ಮತ ಚಲಾಯಿಸಿದರು. ಬಳಿಕ ಮಾತನಾಡಿ, ನನ್ನ ಅಧಿಕಾರ ಅವಧಿಯಲ್ಲಿ ಶಾಶ್ವತ ಕುಡಿಯುವ ನೀರು, ರಸ್ತೆ ಡಾಂಬರೀಕರಣ, ನಿರಂತರ ವಿದ್ಯುತ್, ನಾಲೆಗಳಿಂದ ಕೆರೆಗಳಿಗೆ ನೀರು ತುಂಬಿಸುವ ಕೆಲಸಗಳಾಗಿವೆ. ಈ ಎಲ್ಲಾ ಸೌಲಭ್ಯ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದ್ದರಿಂದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಖಚಿತ ಎಂದರು.

Translate »