ಹುಣಸೂರಲ್ಲಿ ಶೇ.77.45 ಮತದಾನ: ಕೆಲವೆಡೆ ಬಹಿಷ್ಕಾರದ ಬೆದರಿಕೆ, ಅಧಿಕಾರಿಗಳಿಂದ ಮನವೊಲಿಕೆ
ಮೈಸೂರು

ಹುಣಸೂರಲ್ಲಿ ಶೇ.77.45 ಮತದಾನ: ಕೆಲವೆಡೆ ಬಹಿಷ್ಕಾರದ ಬೆದರಿಕೆ, ಅಧಿಕಾರಿಗಳಿಂದ ಮನವೊಲಿಕೆ

April 19, 2019

ಹುಣಸೂರು: ಮೈಸೂರು-ಕೊಡಗು ಲೋಕಾಸಭಾ ಕ್ಷೇತ್ರದಲ್ಲಿ ಗುರುವಾರ ಚುನಾವಣೆಗೆ ತಾಲೂಕಿನಲ್ಲಿ ಶೇ.77.45ರಷ್ಟು ಮತದಾನವಾಗಿದೆ.

ಈ ಮಧ್ಯೆ, ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ತಾಲೂಕಿನ ತಿಪ್ಪಲಾಪುರ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು. ನಂತರ ಅಧಿಕಾರಿಗಳು ಮನವೊಲಿಸಿದ ಬಳಿಕ ಗ್ರಾಮಸ್ಥರು ಮತದಾನ ಮಾಡಿದರು. ಬಿಲ್ಲೇನಹೊಸಳ್ಳಿ ಜನರೂ ಗ್ರಾಮಕ್ಕೆ ರಸ್ತೆ, ಬೀದಿದೀಪ, ಕುಡಿಯುವ ನೀರು ನೀಡುವವರೆಗೂ ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಮಧ್ಯಾಹ್ನ 3 ಗಂಟೆಗೆ ಸಹಾಯಕ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಚಂದ್ರಶೇಖರಯ್ಯ ಭರವಸೆ ನೀಡಿದ ನಂತರ 3.30ರ ಬಳಿಕ ಗ್ರಾಮಸ್ಥರು ಮತದಾನ ಮಾಡಿದರು.

ಬಲ್ಲೇನಹಳ್ಳಿಯಲ್ಲಿ ಬೆಳಿಗ್ಗೆ ಮತದಾನ ಪ್ರಾರಂಭವಾದ 45 ನಿಮಿಷಗಳಿಗೆ ಮತಯಂತ್ರ ಕೆಟ್ಟು 2 ಗಂಟೆ ಮತದಾನ ಸ್ಥಗಿತವಾಯಿತು. ತಂತ್ರಜ್ಞರು ದುರಸ್ತಿಗೊಳಿಸಿದ ಬಳಿಕ ಬೆಳಿಗ್ಗೆ 9.45ರ ನಂತರ ಮತದಾನ ಪುನಾರಂಭಗೊಂಡಿತು.

20 ಮಂದಿ ದೃಷ್ಟಿದೋಷವುಳ್ಳವರು ಸೇರಿದಂತೆ ತಾಲೂಕಿನಲ್ಲಿ 2235 ವಿಶೇಷಚೇತನರಿದ್ದಾರೆ. ಎಲ್ಲ ವಿಶೇಷಚೇತನರನ್ನು ಮನೆಯಿಂದ ಮತಗಟ್ಟೆಗೆ ಕರೆತರಲು ತಾಲೂಕಿನಲ್ಲಿ 407 ಆಟೋರಿಕ್ಷಾಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖರು: ಬೆಳಿಗ್ಗೆ ನಗರದ ಸರ್ಕಾರಿ ಕರಿಗೌಡರ ಶಾಲೆ ಮತಗಟ್ಟೆಗೆ ಆಗಮಿಸಿದ ಶಾಸಕ ಹೆಚ್.ವಿಶ್ವನಾಥ್, ಸಾಲಿನಲ್ಲಿಯೇ ನಿಂತು ಮತದಾನ ಮಾಡಿದರು. ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಮಧ್ಯಾಹ್ನ ಮತ ಚಲಾಯಿಸಿದರು. ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್, ಪತ್ನಿ, ತಂದೆ, ತಾಯಿ ಜತೆ ಕಲ್ಕುಣಿಕೆಯಲ್ಲಿರುವ ಹಾರಂಗಿ ನೀರಾವರಿ ಕಚೇರಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಕುಡ್ಲೂರು ಗ್ರಾಮದಲ್ಲಿ ಮತ ಚಲಾಯಿಸಿದರು.

Translate »